Advertisement

ಕೋವಿಡ್‌ನಿಂದ ಕಳೆಗುಂದಿದ ಹೆಣ್ಣು ಮಕ್ಕಳ ಹಬ್ಬ 

10:38 AM Jul 14, 2021 | Team Udayavani |

ಬನಹಟ್ಟಿ: ಉತ್ತರ ಕರ್ನಾಟಕದಲ್ಲಿ ಬರುವ ಗ್ರಾಮೀಣ ಹಬ್ಬಗಳಲ್ಲಿ ವಿಶೇಷತೆ ಹಾಗೂ ವೈಶಿಷ್ಟತೆ ಹೊಂದಿರುವ ಗುಳ್ಳವ್ವನ ಹಬ್ಬ ಮಂಗಳವಾರದಿಂದ ಬನಹಟ್ಟಿಯಲ್ಲಿ ಆರಂಭಗೊಂಡಿದೆ. ಸಂಸ್ಕೃತಿಯ ಸಂಕೇತವಾಗಿರುವ ಹಬ್ಬ. ಅದರಲ್ಲೂ ಹೆಣ್ಣೂ ಮಕ್ಕಳ ಅಚ್ಚುಮೆಚ್ಚಿನ ಹಬ್ಬವಾಗಿದೆ.

Advertisement

ಆಷಾಢ ಮಾಸದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಗುಳ್ಳವ್ವನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗುಳ್ಳಖವ್ವ, ಗುಳಕವ್ವ, ಗೋಲಕವ್ವ ಎಂಬ ವಿವಿಧ ಹೆಸರಿನಿಂದ ಕರೆಸಿಕೊಳ್ಳುವ ಗುಳ್ಳವ್ವ ಜನಪದರ ದೇವತೆಯಾಗಿದ್ದಾಳೆ. ಕೋವಿಡ್‌-19 ನಿಂದಾಗಿ ಗುಳ್ಳವ್ವನ ಹಬ್ಬಕ್ಕೆ ಕಳೆ ಇಲ್ಲದಂತಾಗಿದೆ.

ಕುಂಬಾರರು ಮಣ್ಣಿನಿಂದ ಮಾಡಿದ ಗುಳ್ಳವ್ವನ ಮೂರ್ತಿಗಳನ್ನು ಮನೆಗೆ ತೆಗೆದುಕೊಂಡು ಬಂದು, ಅದನ್ನು ಗುಲಗಂಜಿಗಳಿಂದ ಸಿಂಗರಿಸುತ್ತಾರೆ. ನಂತರ ಸಂಜೆ ಮನೆಯಲ್ಲಿ ಗುಳ್ಳವ್ವನ ಪೂಜೆ ನೆರವೇರುತ್ತದೆ. ಈ ಸಂದರ್ಭದಲ್ಲಿ ಬಾಲ ಮುತ್ತೈದೆಯರು ಮನೆ ಮನೆಗೆ ತೆರಳಿ ಮಣ್ಣಿನಿಂದ ಮಾಡಿದ ಆರತಿಯನ್ನು ತೆಗೆದುಕೊಂಡು ಹೋಗಿ ಗುಳ್ಳವ್ವನ ಸುತ್ತಲೂ ಕುಳಿತು ಗುಳ್ಳವ್ವ ಹಾಡುಗಳನ್ನು ಹಾಡುತ್ತಾರೆ. ಗುಳ್ಳವ್ವನ ಹಾಡುಗಳು ಕೂಡಾ ವಿಶೇಷವಾಗಿರುತ್ತವೆ.

ಹೀಗೆ ನಾಲ್ಕು ಮಂಗಳವಾರ ನಡೆಯುತ್ತದೆ. ನಂತರ ಮರುದಿನ ಜನರು ಗುಂಪು ಗುಂಪಾಗಿ ಹೊಲ, ತೋಟ, ನದಿಯ ತೀರ, ದೇವಸ್ಥಾನಗಳಿಗೆ ಊಟ ಕಟ್ಟಿಕೊಂಡು ಹೋಗಿ ಊಟ ಮಾಡಿ ಬರುತ್ತಾರೆ. ಗುಳ್ಳವನ ಪೂಜೆ ಎಂದರೆ ಅದು ಮಣ್ಣಿನ ಪೂಜೆ. ರೈತರು ಪ್ರತಿವರ್ಷ ಆಯಾ ಸಂದರ್ಭಕ್ಕೆ ಅನುಗುಣವಾಗಿ ಐದು ಬಾರಿ ಮಣ್ಣಿನ ಪೂಜೆ ಮಾಡಿ ಹಬ್ಬಗಳನ್ನು ಆಚರಿಸುತ್ತಾರೆ. ಕಾರು ಹುಣ್ಣಿಮೆಯ ಸಂದರ್ಭದಲ್ಲಿ ಎತ್ತುಗಳ ಪೂಜೆ. ಆಷಾಢದಲ್ಲಿ ಗುಳ್ಳವ್ವ, ಶ್ರಾವಣ ಮಾಸದಲ್ಲಿ ಮಣ್ಣಿನ ನಾಗದೇವತೆಯ ಪೂಜೆ, ಭಾದ್ರಪದದಲ್ಲಿ ಗಣೇಶನ ಪೂಜೆ ಮತ್ತು ಕೊನೆಯದಾಗಿ ಶೀಗವ್ವ ಇಲ್ಲವೆ ಗೌರಿಯ ಪೂಜೆ ನೆರವೇರಿಸುತ್ತಾರೆ.

ಆಧುನಿಕತೆಯ ಇಂದಿನ ದಿನಗಳಲ್ಲಿಯೂ ಕೂಡಾ ಗುಳ್ಳವ್ವಳ ಪೂಜೆಯನ್ನು ನಮ್ಮ ಜನರು ಆಚರಿಸುತ್ತ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೋವಿಡ್‌-19 ಮಧ್ಯದಲ್ಲಿಯೂ ನಮ್ಮ ಜನರು ಗುಳ್ಳವ್ವನ ಆಚರಣೆ ಬಿಡದೆ ಆಚರಿಸುತ್ತಿದ್ದಾರೆ. ಗುಳ್ಳವ್ವನ ಮಾಡುವಕಲೆಯಲ್ಲಿ ಕೂಡಾ ಆಧುನಿಕತೆಯನ್ನು ಅಳವಡಿಸಿಕೊಂಡಿರುವಕುಂಬಾರರು ಆಧುನಿಕತೆಗೆ ತಕ್ಕಂತೆ ಬದಲಾಗಿದ್ದಾರೆ. ಗುಳ್ಳವ್ವನ ಆಚರಣೆ ಮಾತ್ರ ಎಂದಿನಂತೆ ಇದೆ.

Advertisement

 

­-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next