Advertisement

ಗಣೇಶಮೂರ್ತಿ ಸಿದ್ಧತೆ ಮೇಲೆ ಕೋವಿಡ್ ಕರಿಛಾಯೆ

05:37 PM Jun 20, 2020 | Suhan S |

ಹುಬ್ಬಳ್ಳಿ: ಕೋವಿಡ್ ಸಂಕಷ್ಟ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ವರ್ಷದ ಗಣೇಶೋತ್ಸವ ಆಚರಣೆ ಹೇಗೆ ಎನ್ನುವ ಗೊಂದಲ ಸಾರ್ವಜನಿಕ ಗಣೇಶೋತ್ಸವ ಮಂಡಳಗಳನ್ನು ಕಾಡತೊಡಗಿದೆ.

Advertisement

ಮಹಾರಾಷ್ಟ್ರ ಬಿಟ್ಟರೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಉತ್ಸವ ನಡೆಯುತ್ತದೆ. ಆದರೆ ಈ ಬಾರಿಯ ಕೋವಿಡ್ ಸಂಕಷ್ಟ ಗಣೇಶೋತ್ಸವ ಆಚರಣೆ ಮೇಲೆ ಕರಿಛಾಯೆ ಬೀರಿದೆ. ಪಿಒಪಿ ಗಣೇಶಮೂರ್ತಿಗಳ ನಿಷೇಧ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿಗಳನ್ನು ಮಾಡಬೇಕಾಗಿದ್ದು, ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಇದುವರೆಗೂ ಬಹುತೇಕ ಗಣೇಶೋತ್ಸವ ಮಂಡಳಿಯವರು ಮೂರ್ತಿಗಳ ಬುಕ್ಕಿಂಗ್‌ಗೆ ಮುಂದಾಗಿಲ್ಲ.

ಈ ಬಾರಿ 21 ಅಡಿ ಇಲ್ಲ: ಈ ಬಾರಿಯ ಗಣೇಶೋತ್ಸವ ಸಂದರ್ಭದಲ್ಲಿ 10, 15, 18 ಹಾಗೂ 21 ಅಡಿ ಎತ್ತರದ ಗಣೇಶಮೂರ್ತಿಗಳ ಪ್ರತಿಷ್ಠಾಪನೆ ಸಾಧ್ಯವಾಗದು ಎಂದು ಹೇಳಲಾಗುತ್ತಿದೆ. ದೊಡ್ಡ ದೊಡ್ಡ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಜಾಗದಲ್ಲಿ ಸಣ್ಣ ಸಣ್ಣ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವ ಮೂಲಕ ಸಾಂಕೇತಿಕವಾಗಿ ಹಬ್ಬದ ಆಚರಣೆ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ. ಅಷ್ಟರ ಮಟ್ಟಿಗೆ ಕೊರೊನಾ ಹೊಡೆತ ಕೊಟ್ಟಿದೆ.

ಬಂದಿಲ್ಲಾ ಅಪ್ಪು ಪಾಲ್‌: ಅವಳಿ ನಗರ ಅಷ್ಟೇ ಅಲ್ಲದೆ ನೆರೆಯ ಜಿಲ್ಲೆಗಳಿಗೂ ದೊಡ್ಡ ದೊಡ್ಡ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾಡಿಕೊಡುತ್ತಿದ್ದ ಕೋಲ್ಕತ್ತಾದ ಕಲಾವಿದ ಅಪ್ಪು ಪಾಲ್‌ ಹಾಗೂ ತಂಡವದರು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಇದುವರೆಗೂ ನಗರಕ್ಕೆ ಆಗಮಿಸಿಲ್ಲ. ಇದರಿಂದ ದೊಡ್ಡ ದೊಡ್ಡ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುತ್ತಿದ್ದವರು ಅವರ ದಾರಿ ನೋಡುವಂತಾಗಿದೆ.

ಪ್ರತಿ ವರ್ಷ ಮರಾಠಾ ಗಲ್ಲಿಯಲ್ಲಿ 21 ಅಡಿ ಎತ್ತರದ ಬೃಹತ್‌ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಹುಬ್ಬಳ್ಳಿ ಕಾ ರಾಜಾ ಸೇರಿದಂತೆ ಎಲ್ಲ ಗಣೇಶ ಮೂರ್ತಿಗಳ ಅಳತೆಯಲ್ಲಿ ತುಂಬಾ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಬ್ಬದ ಆಚರಣೆ ಕುರಿತು ಸರಕಾರ ಹಾಗೂ ಜಿಲ್ಲಾಡಳಿತ ಸ್ಪಷ್ಟ ನಿರ್ಧಾರದ ಮೇಲೆ ಈ ವರ್ಷದ ಗಣೇಶೋತ್ಸವ ಆಚರಣೆ ನಿಂತಿದೆ.

Advertisement

ಕಳೆದ ಹಲವು ವರ್ಷಗಳಿಂದ ಮರಾಠಾ ಗಲ್ಲಿ ಯಲ್ಲಿ 21 ಅಡಿ ಎತ್ತರದ ಬೃಹತ್‌ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಕೋಲ್ಕತ್ತದ ಕಲಾವಿದ ಅಪ್ಪು ಪಾಲ್‌ ಹಾಗೂ ತಂಡದವರು ಇಲ್ಲಿಗೆ ಆಗಮಿಸಿ ಸಿದ್ಧಪಡಿಸುತ್ತಿದ್ದರು. ಕೋವಿಡ್ ದಿಂದಾಗಿ ಅವರು ಬಂದಿಲ್ಲ. ಈ ವರ್ಷದ ಗಣೇಶ ಮೂರ್ತಿಯ ಅಳತೆಯಲ್ಲಿ ಇಳಿಕೆ ಯಾಗುವ ಸಾಧ್ಯತೆ ಇದೆ. ಗಣೇಶೋತ್ಸವ ಆಚರಣೆ ಸರಕಾರದ ನಿರ್ಧಾರದ ಮೇಲೆ ನಿಂತಿದೆ. ಸರಕಾರ ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಪೂರ್ಣ ಬೆಂಬಲ ಇದೆ. -ಅರುಣ ಜಾಧವ, ಅಧ್ಯಕ್ಷ, ಗಣೇಶೋತ್ಸವ ಸಮಿತಿ ಮರಾಠಾ ಗಲ್ಲಿ

ಗಣೇಶೋತ್ಸವ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ಸ್ಪಷ್ಟ ನಿರ್ಧಾರ ಇಲ್ಲವಾಗಿದ್ದರಿಂದ ಗೊಂದಲದಲ್ಲಿದ್ದೇವೆ. ಗ್ರಾಮೀಣ ಸೇರಿದಂತೆ ಬೇರೆ ನಗರದ ಜನರು ಈ ಬಾರಿ ಹಬ್ಬದ ಆಚರಣೆಗೆ ಬರುವುದು ವಿರಳವಾಗಲಿದ್ದು, ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡುವತ್ತ ಯೋಚಿಸಲಾಗುತ್ತಿದೆ. – ಪಾಂಡುರಂಗ ಮೆಹರವಾಡೆ, ಅಧ್ಯಕ್ಷ, ಶ್ರೀ ಗಜಾನನ ಉತ್ಸವ ಸಮಿತಿ, ದಾಜೀಬಾನ ಪೇಟೆ.

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next