Advertisement

ಪಟಾಕಿ ವಹಿವಾಟಿಗೆ ಕುತ್ತು

03:23 PM Aug 26, 2020 | Suhan S |

ಹುಬ್ಬಳ್ಳಿ: ಕೋವಿಡ್ ಕಾಟ ಸಿಡಿಮದ್ದು ತಯಾರಿಕೆ ಉದ್ಯಮಕ್ಕೂ ತಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಟಾಕಿಗಳ ತಯಾರಿಕೆ, ಸಾಗಾಟಕ್ಕೆ ಅಡ್ಡಿಯಾಗಿದ್ದರೆ, ಗಣೇಶೋತ್ಸವದಲ್ಲಿ ಸಾರ್ವಜನಿಕ ಸಂಭ್ರಮಾಚರಣೆ ಇಲ್ಲದೆ ಪಟಾಕಿ ಖರೀದಿಯೂ ಮಂಕಾಗಿದೆ.

Advertisement

ಹುಬ್ಬಳ್ಳಿಯಲ್ಲಿ ಪ್ರತಿ ವರ್ಷದ ಗಣೇಶೋತ್ಸವ ವೇಳೆ ಚಿತ್ತಾರದ ಸಿಡಿಮದ್ದುಗಳು ಆಕಾಶದೆತ್ತರಕ್ಕೆ ಹಾರಿ ಶಬ್ದ ಮಾಡುತ್ತಿದ್ದವು. ಈ ವರ್ಷ ಅದರ ಅಬ್ಬರ ಕಾಣದಾಗುತ್ತಿದೆ. ಸಿಡಿಮದ್ದುಗಳ ತಯಾರಿಕೆಗೆ ಹೆಸರುವಾಸಿಯಾಗಿರುವ ಶಿವಕಾಶಿಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರೂ ಸಿಡಿಮದ್ದುಗಳು ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಸಾಗಣೆಗೂ ಹಲವು ಅಡ್ಡಿಗಳುಂಟಾಗಿವೆ ಎನ್ನಲಾಗಿದೆ.

ಮಾರಾಟಕ್ಕೆ ಅವಕಾಶವಿಲ್ಲ: ಪ್ರತಿ ವರ್ಷ ಗಣೇಶೋತ್ಸವ ಹಾಗೂ ದೀಪಾವಳಿ ಸಮಯದಲ್ಲಿ ನೆಹರು ಮೈದಾನದಲ್ಲಿ ಪಟಾಕಿಗಳ ಮಾರಾಟಕ್ಕೆ ತಾತ್ಕಾಲಿಕ ಮಳಿಗೆ ಹಾಕಿಕೊಳ್ಳಲು ಜಿಲ್ಲಾಡಳಿತ ಅವಕಾಶ ಮಾಡಿಕೊಡುತ್ತಿತ್ತು. ಆದರೆ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸಿಡಿಮದ್ದು ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಇದರಿಂದ ಸಿಡಿಮದ್ದು ಮಾರಾಟಗಾರರು ತಮ್ಮ ತಮ್ಮ ಅಂಗಡಿಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಗಣೇಶೋತ್ಸವ ಸಮಯದಲ್ಲಿ 25 ದಿನಗಳವರೆಗೆ ಸಿಡಿಮದ್ದು ವಹಿವಾಟು ನಡೆಯುತ್ತಿತ್ತು. ಆದರೆ ಈ ವರ್ಷ 2-3 ದಿನಗಳಿಗೆ ಸೀಮಿತವಾಗಿದ್ದು, ಹೋಲ್‌ಸೇಲ್‌ ಸಿಡಿಮದ್ದು ಖರೀದಿಸುವವರು ಬರದೇ ಇರುವುದು ಹಾಗೂ ಶಿವಕಾಶಿಯಿಂದ ಬರುವ ಸರಕು ಸಹ ಕಡಿಮೆ ಪ್ರಮಾಣದಲ್ಲಿ ಬಂದಿದ್ದು ವ್ಯಾಪಾರದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಈ ವರ್ಷದ ಗಣೇಶೋತ್ಸವ  ಸಂದರ್ಭದಲ್ಲಿ ಶೇ.30-40 ಮಾತ್ರ ಪಟಾಕಿ ವಹಿವಾಟು ನಡೆಯುತ್ತಿದೆಯಂತೆ.

ನಗದು ವಹಿವಾಟಿಗೆ ಆದ್ಯತೆ: ಸಿಡಿಮದ್ದು ಮಾರಾಟದಲ್ಲಿ ಪ್ರತಿ ವರ್ಷ ಸಿಡಿಮದ್ದು ಖರೀದಿಸಿದ ನಂತರ ಹಣ ಮರುಪಾವತಿಗೆ ಕಾಲಾವಕಾಶ ನೀಡುತ್ತಿದ್ದರು. ಆದರೆ ಈ ವರ್ಷ ಶಿವಕಾಶಿಯಲ್ಲಿ ನಗದು ವಹಿವಾಟಿಗೆ ಆದ್ಯತೆ ನೀಡಿದ್ದು, ಸಣ್ಣ ವ್ಯಾಪಾರಿಗಳು ಸಿಡಿಮದ್ದು ಮಾರಾಟವೇ ಮಾಡುತ್ತಿಲ್ಲ. ಜತೆಗೆ ಹಣ ಇದ್ದರೆ ಮಾತ್ರ ಸಿಡಿಮದ್ದು ಎನ್ನುವಂತಾಗಿದೆ.ಜತೆಗೆ ನಮಗೆ ಬೇಕಾದ ಸರಕು ಸಿಗುತ್ತಿಲ್ಲ. ಇರುವ ಸರಕನ್ನೇ ತೆಗೆದುಕೊಂಡು ಹೋಗಬೇಕೆಂದು ಹೇಳುತ್ತಾರೆ.ಇದರಿಂದ ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ವ್ಯಾಪಾರಿಗಳ ಅನಿಸಿಕೆ.

ಅದ್ದೂರಿ ಗಣೇಶೋತ್ಸವಕ್ಕೆ ಈ ವರ್ಷ ತೆರೆ ಬಿದ್ದಿದ್ದು, ಎಲ್ಲೆಡೆ ಗಣೇಶೋತ್ಸವವನ್ನು ಸರಳವಾಗಿ ಆಚರಿಸುತ್ತಿದ್ದು, ಒಂದೆಡೆ ಕೋವಿಡ್ ವೈರಸ್‌ ಇದ್ದರೆ ಮತ್ತೂಂದೆಡೆ ಮಳೆಯ ಕಾಟದಿಂದ ಈ ವರ್ಷದ ಗಣೇಶೋತ್ಸವಕ್ಕೆ ಕೊನೆಯ ಸಮಯದಲ್ಲಿ ಅವಕಾಶ ನೀಡಲಾಯಿತು. ಇದರಿಂದ ಕೇವಲ 40 ರಷ್ಟು ಮಾತ್ರ ಸಿಡಿಮದ್ದು ಖರೀದಿಗೆ ಬರುತ್ತಿರುವ ಜನರು ಬರುತ್ತಿದ್ದು, ಹೊರಗಡೆಯಿಂದ ಖರೀದಿಗೆ ಜನರು ಬಂದಿಲ್ಲ. ಇದರಿಂದ ಇರುವ ಸರಕಿನಲ್ಲಿಯೇ ಮಾರಾಟ ಮಾಡಲಾಗುತ್ತಿದೆ. -ಅಬ್ದುಲ್‌ರೆಹಮಾನ್‌ ಲಿಂಬುವಾಲೆ, ಸಿಡಿಮದ್ದು ಮಾರಾಟಗಾರರು.

Advertisement

ಪ್ರತಿ ವರ್ಷ ಜಿಲ್ಲಾಡಳಿತದಿಂದ ನೆಹರು ಮೈದಾನದಲ್ಲಿ ಸಿಡಿಮದ್ದು ಮಾರಾಟಕ್ಕೆ ಅವಕಾಶ ನೀಡುತ್ತಿದ್ದರು. ಆದರೆ ಈ ವರ್ಷ ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ಅವಕಾಶ ನೀಡಿಲ್ಲ. ಇದಲ್ಲದೇ ಜನರು ಕೂಡಾ ಸಿಡಿಮದ್ದು ಖರೀದಿಸಲು ಬರುತ್ತಿಲ್ಲ. ಬಂದರೂ ಕೂಡಾ ಅಲ್ಪ ಪ್ರಮಾಣದಲ್ಲಿ ಸಿಡಿಮದ್ದು ಖರೀದಿಸುತ್ತಿದ್ದು, ಇದರಿಂದ 2020 ಸಂಪೂರ್ಣ ಹಾಳಾದ ವರ್ಷ ಎಂದರೂ ತಪ್ಪಾಗಲಾರದು. ವಿಮಲ ತಾಳಿಕೋಟಿ, ಸಿಡಿಮದ್ದು ಮಾರಾಟಗಾರರು.

 

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next