ಮಂಜುನಾಥ ಎಚ್. ಕುಂಬಳೂರ
ರಾಣಿಬೆನ್ನೂರ: ಮೊದ ಮೊದಲು ಅತಿವೃಷ್ಟಿ-ಅನಾವೃಷ್ಟಿ ಎರಡನ್ನೂ ಕಂಡ ರೈತ ಸಮುದಾಯಕ್ಕೆ ಇದೀಗ ಕೊರೊನಾ ಕಂಟಕವಾಗಿ ಕಾಡುತ್ತಿದೆ. ಹೀಗಾಗಿ ರೈತರು ತುತ್ತಿನ ಚೀಲ ತುಂಬಿಸಿಕೊಳ್ಳಲು ಭೂಮಿ ತಾಯಿಯನ್ನೇ ನಂಬಿದ್ದಾರೆ. ಆದರೆ ಭೂಮಿತಾಯಿ ಅನ್ನದಾತರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದರೂ ಕೋವಿಡ್-19 ವೈರಸ್ ರೈತರಿಗೆ ಮಗ್ಗಲು ಮುಳ್ಳಾಗಿ ಕಾಡುತ್ತಿದೆ. ಇದಕ್ಕೆ ರಾಣಿಬೆನ್ನೂರ ತಾಲೂಕಿನ ಮಾಕನೂರ ಗ್ರಾಮದ ರೈತ ಶರಣಪ್ಪ ಬಾತಿ ಅವರೇ ಉತ್ತಮ ನಿದರ್ಶನ.
ಶರಣಪ್ಪ ತಮ್ಮ 3 ಎಕರೆ ಜಮೀನಿನಲ್ಲಿ ಸಾಂಬಾರ ಕುಂಬಳಕಾಯಿ ಬೆಳೆ ಬೆಳೆದಿದ್ದು, ಬೆಳೆ ಕಟಾವಿಗೆ ಬಂದಿದೆ. ಆದರೆ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಜೂ.7ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿದ್ದು, ರೈತನಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಬಾಯಿಗೆ ಬಂದ ತುತ್ತು ಕೈಗೆ ಬಾರದಂತಾಗಿ ಅಂದಾಜು 3 ಲಕ್ಷ ರೂ. ಮೌಲ್ಯದ ಸುಮಾರು 80 ಟನ್ ಕುಂಬಳಕಾಯಿ ಎಲ್ಲಿ ನಷ್ಟವಾಗುತ್ತದೆಯೋ ಎಂಬ ಆತಂಕ ಮನದಲ್ಲಿ ಬೇರೂರಿದೆ. ಪ್ರಕೃತಿ ಮುನಿಸಿನೊಂದಿಗೆ ಅಕಾಲಿಕ ಮಳೆ, ಇಲ್ಲದಿದ್ದರೆ ವಿಪರೀತ ಮಳೆ, ಬೆಲೆ ಕುಸಿತ, ಬೀಜ-ಗೊಬ್ಬರ ಖರೀದಿಗೆ ಹಣ ಹೊಂದಿಸಲು ಹೆಣಗಾಡುತ್ತ ರೈತರು ಹೇಗೋ ಮಾಡಿ ಕೃಷಿ ಚಟುವಟಿಕೆ ಮಾಡಿದ್ದಾರೆ. ಅದರಂತೆ ಭೂತಾಯಿ ಅನ್ನದಾತರ ಶ್ರಮಕ್ಕೆ ತಕ್ಕಂತೆ ಫಲ ಕೂಡ ಕೊಟ್ಟಿದ್ದಾಳೆ. ಆದರೆ ಬಂದ ಫಸಲು ಕಟಾವು ಮಾಡಿದರೂ ಮಾರುಕಟ್ಟೆಗೆ ಸಾಗಿಸಲಾಗುತ್ತಿಲ್ಲ. ಈ ಕೊರೊನಾ ಮಹಾಮಾರಿ ರೈತರ ಬದುಕಿನಲ್ಲಿ ಆಟವಾಡುತ್ತಿದೆ.
ಮಧ್ಯವರ್ತಿಗಳ ಫ್ರೋತ್ಸಾಹಕ್ಕೆ ಬಲಿಯಾದೆ: ಮಲೆನಾಡಿನ ದಲ್ಲಾಳಿಗಳ ಮಾತಿಗೆ ಮಾರು ಹೋಗಿ ಸಾಂಬಾರ ಕುಂಬಳಕಾಯಿ ಬೆಳೆದಿದ್ದೇನೆ. ಬಂಪರ್ ಬೆಲೆ ಸಿಕ್ಕು, ನಿಮ್ಮ ಬಡತನ ದೂರವಾಗಲಿದೆ. ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಿ ಎಂದು ಮೊದಲು ಪ್ರೇರೇಪಿಸಿದರು. ಇದೀಗ ಅವರನ್ನು ನಂಬಿ 3 ಎಕರೆ ಜಮೀನಿನಲ್ಲಿ ಸಾಂಬಾರ ಕುಂಬಳಕಾಯಿ ಬೆಳೆ ಬೆಳೆದಿದ್ದೇನೆ. ಬೆಳೆಯೂ ಉತ್ತಮವಾಗಿ ಬಂದಿದೆ. ಆದರೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕೆಂದುಕೊಂಡರೆ ಕೊರೊನಾ ವೈರಸ್ ತಡೆಯೊಡ್ಡಿದೆ. ಇದು ನನಗೆ ನುಂಗಲಾರದ ತುತ್ತಾಗಿದೆ ಎಂದು ರೈತ ಶರಣಪ್ಪ ಬಾತಿ ಅಳಲು ತೋಡಿಕೊಳ್ಳುತ್ತಾರೆ. ಮಲೆನಾಡಿನಲ್ಲಿ ಹೆಚ್ಚು ಸೇವನೆ: ಈ ತರಕಾರಿಯನ್ನು ಹೆಚ್ಚಾಗಿ ಮಂಗಳೂರು, ಉಡುಪಿ, ಮಣಿಪಾಲ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯ ಜನರು ಉಪಯೋಗಿಸುವುದರಿಂದ ಅಲ್ಲಿಗೆ ರೈತ ಶರಣಪ್ಪ ತನ್ನ ಉತ್ಪನ್ನ ಸಾಗಿಸುತ್ತಿದ್ದ. ಆ ಭಾಗದ ವ್ಯಾಪಾರಸ್ಥರು ಸ್ಥಳಕ್ಕೆ ಆಗಮಿಸಿ ಈ ಬೆಳೆ ಖರೀದಿ ಸಿ ತೆಗೆದುಕೊಂಡು ಹೋಗುತ್ತಿದ್ದರು. ಆದರೀಗ ಕಳೆದೊಂದು ತಿಂಗಳಿಂದ ಇತ್ತ ಸುಳಿದಿಲ್ಲ. ಫೋನ್ ಮಾಡಿದರೆ ಬರುತ್ತೇವೆ ಎಂದು ಹೇಳಿ ಸಬೂಬು ನೀಡುತ್ತಾರೆ.
ಕೆಲವೊಮ್ಮೆ ಫೋನ್ ಸ್ವೀಕರಿಸಲ್ಲ: ಕಳೆದೊಂದು ವಾರದ ಹಿಂದೆ ಇಂದು ಬರುತ್ತೇವೆ ಎಂದು ಹೇಳಿದ್ದರು. ಆದರೆ ಕಳೆದ ಐದು ದಿನಗಳಿಂದ ಅವರ ಫೋನ್ ಸ್ವಿಚ್x ಆಫ್ ಆಗಿದೆ. ಇದರಿಂದ ರೈತ ಶರಣಪ್ಪನಿಗೆ ದಿಕ್ಕೇ ತೋಚದಂತಾಗಿದೆ. ಒಂದೆಡೆ ಕೈಗೆ ಬಂದ ಉತ್ಪನ್ನ ಮಾರುವ ಚಿಂತೆ ಬಂದೊದಗಿದರೆ, ಇನ್ನೊಂದೆಡೆ ಕೃಷಿಗೆ ಮಾಡಿದ ಸಾಲ ಹೇಗೆ ತೀರಿಸುವುದೆಂದು ಸಂಕಟ ಪಡುತ್ತಿದ್ದಾನೆ ರೈತ. ಒಟ್ಟಿನಲ್ಲಿ ರೈತರು ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿರುವಾಗಲೇ ಕೊರೊನಾ ದೊಡ್ಡ ಆಘಾತ ನೀಡಿರುವುದಂತೂ ಸತ್ಯ.