Advertisement
ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಈ ದೀಪಾವಳಿ ಬಡವರ ಸಂಭ್ರಮಕ್ಕೆ ತಣ್ಣೀರು ಎರಚಿದ್ದು ಇಲ್ಲೆಲ್ಲ ಎದ್ದು ಕಾಣುತ್ತಿದೆ. ಲಕ್ಷ್ಮೀ ಪೂಜೆಗೆ, ಪಾಡ್ಯಕ್ಕೆ, ಮನೆ ಅಲಂಕರಿಸಲು ಅಗತ್ಯ ಎನ್ನಿಸಿಕೊಂಡಿರುವ ಚೆಂಡು ಹೂವು ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಕಳೆದ ವರ್ಷ ಕೆಜಿಗೆ 30-40 ರೂ. ಇದ್ದ ಚೆಂಡು ಹೂವಿನ ದರ ಈ ಬಾರಿ ಕೇಜಿಗೆ ಹೂವಿನ ಗಾತ್ರ, ಗುಣಮಟ್ಟಆಧರಿಸಿ 100 ರಿಂದ 300ವರೆಗೂ ಮಾರಾಟ ಮಾಡಲಾಗುತ್ತಿರುವುದು ಬಡವರಿಗೆ ಹೊರೆ ಎನ್ನಿಸಿಕೊಂಡಿದೆ.
Related Articles
Advertisement
ಪೊಲೀಸರು ಟ್ರಾಫಿಕ್ ನಿಯಂತ್ರಿಸುವಲ್ಲಿ ಸಾಕಷ್ಟು ಹೆಣಗಾಡುತ್ತಿದ್ದರು. ಆದರೆ ಈ ಬಾರಿಅಂತಹ ಯಾವುದೇ ಗಿಜಿಗಿಜಿ, ಧಾವಂತ ಕಂಡು ಬರದಿರುವುದು ಪೊಲೀಸರ ಟ್ರಾಫಿಕ್ ನಿಯಂತ್ರಣದ ತಲೆನೋವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿದಂತಾಗಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ, ಮಧ್ಯ ಭಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಮಾರಾಟದ ಭರಾಟೆ ಎಂದಿನಂತಿದ್ದರೂ ಜನರ ಕೊರತೆ ಅವರ ಮುಖದಲ್ಲೂ ಚಿಂತೆಯ ಗೆರೆಗಳನ್ನು ಮೂಡಿಸಿದ್ದು ಕಂಡು ಬಂತು.
ಹೊಸ ಬಟ್ಟೆ ಖರೀದಿಗೂ ನಿರುತ್ಸಾಹ: ಕೋವಿಡ್ ದಿಂದ 3-4 ತಿಂಗಳು ವ್ಯಾಪಾರ ಇಲ್ಲದೆ ಬಟ್ಟೆ ಅಂಗಡಿಯವರು ಕಂಗಾಲಾಗಿದ್ದರು. ಹಬ್ಬದನೆಪದಲ್ಲಾದರೂ ಬಟ್ಟೆ ಖರೀದಿಗೆ ಜನ ಬರುತ್ತಾರೆಎನ್ನುವ ನಿರೀಕ್ಷೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಟ್ಟೆಬರೆ ತರಿಸಿ ಸ್ಟಾಕ್ ಇಟ್ಟುಕೊಂಡಿದ್ದರು. ಆದರೆ ಆರ್ಥಿಕ ಹೊಡೆತದಿಂದ ಕಂಗಾಲಾಗಿರುವ ಬಡ, ಮಧ್ಯಮ ವರ್ಗದವರು ಮೊದಲಿನಂತೆ ಬಟ್ಟೆ ಖರೀದಿಸಲು ಈ ಬಾರಿ ಹೆಚ್ಚಿನ ಉತ್ಸಾಹ ತೋರಿಸಿಲ್ಲ. ಹೀಗಾಗಿ ಎಲ್ಲೆಡೆ ಹೊಸ ಬಟ್ಟೆ ಖರೀದಿಗೂ ನಿರುತ್ಸಾಹ ಎದ್ದು ಕಾಣುತ್ತಿತ್ತು. ಆದರೂ ಹಬ್ಬ ಆಚರಿಸಲೇಬೇಕು ಎನ್ನುವ ಧಾವಂತದಲ್ಲಿ ದುಡಿಯುವ ವರ್ಗದವರುತಮ್ಮ ಮಕ್ಕಳಿಗೆ ಬಟ್ಟೆ ಕೊಡಿಸಿ ಅವರ ಸಂಭ್ರಮದಲ್ಲಿ ತಮ್ಮ ಸಾರ್ಥಕತೆ ಕಂಡು ಕೊಳ್ಳುತ್ತಿರುವುದು ಅಲ್ಲಲ್ಲಿ ಕಂಡುಬಂತು.
ಮೊದಲೆಲ್ಲ ಖರೀದಿದಾರದಿಂದ ಗಿಜಿಗುಡುತ್ತಿದ್ದ ಬಟ್ಟೆ ಅಂಗಡಿಗಳು ಈ ಬಾರಿ ಮಾತ್ರ ಅಂಥ ಯಾವುದೇ ಒತ್ತಡ ಇಲ್ಲದೆ ವ್ಯಾಪಾರ ನಡೆಸುವ ಅನಿವಾರ್ಯತೆಗೆ ಸಿಲುಕಿದ್ದರು. ಹೀಗಾಗಿ ಕೊಳ್ಳುವವರ ಕೊರತೆ ಇದ್ದ ಹಿನ್ನೆಲೆ ಕೊಳ್ಳುವವರ ಮೇಲೆಯೇ ಹೆಚ್ಚಿನ ಬೆಲೆಯ ಭಾರ ಹಾಕಿ ಲಾಭ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಕೆಲ ಅಂಗಡಿಕಾರರು ನೇರವಾಗಿ ಒಪ್ಪಿಕೊಂಡರೂ ಅದನ್ನು ಸಮರ್ಥಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿತ್ತು.
ವ್ಯಾಪಾರ ಈ ಬಾರಿ ಶೇ. 50ರಷ್ಟು ಕುಸಿತ ಕಂಡಿದೆ. ಜನ ಆರ್ಥಿಕ ಸಂಕಷ್ಟದಿಂದಾಗಿ ಮೊದಲೆಲ್ಲ ಖರ್ಚು ಮಾಡುತ್ತಿದ್ದ ಹಣದಷ್ಟು ಅರ್ಧ ಹಣ ಖರ್ಚಿಗೆ ಮುಂದಾಗಿದ್ದಾರೆ. ಅಂದರೆ ಸಾವಿರ ರೂ. ಬಟ್ಟೆ ಖರೀದಿಸುತ್ತಿದ್ದವರು 500ಕ್ಕೆ ಖರೀದಿ ಸೀಮಿತಗೊಳಿಸಿದ್ದಾರೆ. ಈ ದೀಪಾವಳಿಯಲ್ಲಿ ವ್ಯಾಪಾರಸ್ಥರು ಕೋವಿಡ್ ದಿಂದಾಗಿ ಸಾಕಷ್ಟು ಹೊಡೆತ ಅನುಭವಿಸುವಂತಾಗಿದೆ. –ಅಶೋಕ ರೇವಡಿ, ಮಾಲೀಕರು, ಅಶೋಕ ಕ್ಲಾಥ್ ಸ್ಟೋರ್ಸ್, ಮುದ್ದೇಬಿಹಾಳ
ನಿರಂತರ ಮಳೆಯಿಂದಾಗಿ ಚೆಂಡು ಹೂವು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಇದ್ದಷ್ಟೇ ಮಾಲನ್ನು ಮಾರುಕಟ್ಟೆಗೆ ತಂದರೆ ದಲ್ಲಾಲಿಗಳ ಮೂಲಕ ಮಾರಾಟವಾಗಬೇಕು. ದಲ್ಲಾಳಿಗಳು ನಿಗದಿಪಡಿಸುವ ದರವೇ ಅಂತಿಮ. ಹೀಗಾಗಿ ಈ ಬಾರಿ ಹೂವಿನ ಬೆಲೆ ಗಗನಕ್ಕೇರಿದೆ. ನಮಗೂ ಲಾಭ, ದಲ್ಲಾಳಿಗಳಿಗೂ ಲಾಭ. –ಮಲ್ಲಪ್ಪ, ಢವಳಗಿ, ಚೆಂಡು ಹೂವು ಬೆಳೆದ ರೈತ
ಈ ಬಾರಿಯ ದೀಪಾವಳಿ ನಮ್ಮ ಪರಿಸ್ಥಿತಿ ಪರೀಕ್ಷಿಸುವಂತಿದೆ. ನಿತ್ಯ ದುಡಿದು ತಿನ್ನುವ ನಮಗೆ ಎಲ್ಲರಂತೆ ಖರೀದಿಸುವ ಶಕ್ತಿ ಇಲ್ಲ. ಹೀಗಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವಂತಾಗಿದೆ. ನಮಗಾಗಿ ಅಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ ಹಬ್ಬ ಆಚರಿಸಬೇಕು ಎನ್ನುವುದನ್ನು ಅರಿತು ಕಷ್ಟದಲ್ಲೂ ಸಾಲ ಸೂಲ ಮಾಡಿ ಹಬ್ಬ ಆಚರಿಸುತ್ತಿದ್ದೇವೆ. –ತಿಮ್ಮಪ್ಪ ಬಿರಾದಾರ, ಗೌಂಡಿ ಕೆಲಸ ಮಾಡುವ ಕುಟುಂಬದ ಯಜಮಾನ
–ಡಿ.ಬಿ. ವಡವಡಗಿ