Advertisement
ಭಾರತ ಹುಣ್ಣಿಮೆ ಎಂದರೆ ಉತ್ತರ ಕರ್ನಾಟಕ ಸೇರಿದಂತೆಮಹಾರಾಷ್ಟ್ರ-ಗೋವಾ ರಾಜ್ಯಗಳ ಭಕ್ತರಿಗೆ ಎಲ್ಲಿಲ್ಲದ ಸಂಭ್ರಮ. ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದ್ದ ಜಾತ್ರೆ ಈ ಸಲ ಇಲ್ಲ ಎಂದುಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಧಿಕಾರಿ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. 11 ತಿಂಗಳ ಬಳಿಕ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಕೆಲ ದಿನಗಳ ಹಿಂದೆಯಷ್ಟೇ ಆರಂಭಿಸಿತ್ತಾದರೂ ಮತ್ತೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ದೇವಿಯ ದರ್ಶನ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದ ಭಕ್ತರಿಗೆ ನಿರಾಸೆಯನ್ನುಂಟು ಮಾಡಿದೆ.
Related Articles
Advertisement
ಭಾರತ ಹುಣ್ಣಿಮೆ ಜಾತ್ರೆ ಇಲ್ಲವಾದರೂ ಸಂಭ್ರಮಕ್ಕೇನೂ ಕೋವಿಡ್ ಅಡ್ಡಿ ಬಂದಿಲ್ಲ. ದೇಗುಲದ ಆಕರ್ಷಣೆ ಹೆಚ್ಚಿಸಲು ಯಲ್ಲಮ್ಮ ದೇವಿಯ ಸನ್ನಿ ಧಿಯಲ್ಲಿ ದೀಪಾಲಂಕಾರ ಮಾಡಲಾಗಿದೆ. ವಿದ್ಯುತ್ ದೀಪಾಲಂಕಾರದಿಂದ ಇಡೀ ದೇವಸ್ಥಾನ ಕಂಗೊಳಿಸುತ್ತಿದೆ. ಮಾರ್ಚ್ 1ರ ವರೆಗೆ ಇರಲಿರುವ ಈ ಅಲಂಕಾರ ದೇವಸ್ಥಾನದ ವೈಭವ ಹೆಚ್ಚಿಸಿದೆ. ಈ ಅಲಂಕಾರವನ್ನು ಭಕ್ತರು ದೂರದಿಂದಲೇ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಭಂಡಾರದ ಅವ್ವ ಯಲ್ಲಮ್ಮನ ದೇವಸ್ಥಾನದಲ್ಲಿ ಜಾತ್ರೆ ಬಂತೆಂದರೆ ಭಂಡಾರವೋ ಭಂಡಾರ ಇರುತ್ತಿತ್ತು. ಭಂಡಾರದ ಬದಲಿಗೆ ವಿದ್ಯುದ್ಧೀಪಾಲಂಕಾರವೇ ಭಂಡಾರವನ್ನು
ಆಕ್ರಮಿಸಿಕೊಂಡು ಆಕರ್ಷಣೆಯ ಕೇಂದ್ರವಾಗಿ ಪರಿಣಮಿಸಿದೆ. ಮಹಾರಾಷ್ಟ್ರದ ಕೊಲ್ಲಾಪುರ ಮಾಜಿ ಮೇಯರ್ ಸಾಗರ ಪ್ರಹ್ಲಾದ ಚವ್ಹಾಣ ಎಂಬವರು ದೇವಿಯ ಪರಮ ಭಕ್ತ. ದೇವಸ್ಥಾನದಲ್ಲಿ ಈ ಸಲ ಅದ್ಭುತವಾದ ದೀಪಾಲಂಕಾರ ಮಾಡಬೇಕೆಂಬ ಉದ್ದೇಶದಿಂದ ಈ ಒಂದು ಭಕ್ತಿ ಸೇವೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನದ ಸುತ್ತಲೂ ಲೈಟಿಂಗ್ ಡೆಕೋರೇಷನ್ ಮಾಡಿ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಜತೆಗೆ ಶುಕ್ರವಾರದಿಂದ ರಾತ್ರಿ ಹೊತ್ತು ದೇವಿಯ ಮೂರ್ತಿ ಸೇರಿದಂತೆ ಇತರೆ ಆಕರ್ಷಣೀಯವಾದ ಲೇಸರ್ ಶೋ ವ್ಯವಸ್ಥೆ ಮಾಡಲಾಗಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಭಕ್ತರು ಸಹಕರಿಸಬೇಕು. ಕೋವಿಡ್ ನಿಯಮಾವಳಿಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಾರತ ಹುಣ್ಣಿಮೆ ಜಾತ್ರೆ ನಿಮಿತ್ತ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಮಾಡಿರುವ ಅಲಂಕಾರ ಆಕರ್ಷಣೀಯವಾಗಿದೆ. -ರವಿ ಕೋಟಾರಗಸ್ತಿ, ಕಾರ್ಯನಿರ್ವಾಹಕ ಅಧಿಕಾರಿ, ರೇಣುಕಾ ಯಲ್ಲಮ್ಮ ದೇವಸ್ಥಾನ
ಜಿಲ್ಲಾಧಿಕಾರಿಗಳ ಆದೇಶದಂತೆ ಯಲ್ಲಮ್ಮ ದೇವಸ್ಥಾನ ಸುತ್ತಲೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾ ಇಡಲಾಗಿದೆ. ಸುತ್ತಲೂ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಪ್ರವೇಶಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. – ಲಕ್ಷ್ಮಣ ನಿಂಬರಗಿ, ಎಸ್‌ಪಿ
-ಭೈರೋಬಾ ಕಾಂಬಳೆ