ಕೋವಿಡ್ ಲಾಕ್‌ಡೌನ್ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅನಿವಾರ್ಯವಾಗಿ ಪ್ರತಿ ಕ್ಷೇತ್ರದವರು ಕೂಡಾ ತಮ್ಮ ಕಾರ್ಯ ಶೈಲಿಯನ್ನು ಬದಲಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಿನಿಮಾ ಕ್ಷೇತ್ರವೂ ಹೊರತಾಗಿಲ್ಲ. ಸಿನಿಮಾ ಕ್ಷೇತ್ರದಲ್ಲೂ ಕೋವಿಡ್ ಸಾಕಷ್ಟು ಬದಲಾವಣೆ ತಂದಿದೆ ಎಂದರೆ ತಪ್ಪಲ್ಲ. ಮುಖ್ಯವಾಗಿ ಚಿತ್ರೀಕರಣ ವಿಷಯದಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ. ಹೆಚ್ಚು ಜನರನ್ನಿಟ್ಟುಕೊಂಡು ಚಿತ್ರೀಕರಣ ಮಾಡೋದು ಸದ್ಯಕ್ಕೆ ಕಷ್ಟವಾದ ಕಾರಣ, ಸಿನಿಮಾ ಮಂದಿ ತಮ್ಮ ಕನಸನ್ನು ಬದಿಗಿಟ್ಟು ಅನಿವಾರ್ಯವಾಗಿ ಕಾನ್ಸೆಪ್ಟ್ ಅನ್ನೇ ಬದಲಿಸುತ್ತಿದ್ದಾರೆ!
ಹೌದು, ಹೀಗೆಂದರೆ ನೀವು ನಂಬಲೇಬೇಕು. ಕೊರೊನಾ ಕಾರಣದಿಂದಾಗಿ ಇನ್ನಷ್ಟೇ ಚಿತ್ರೀಕರಣ ಆರಂಭಿಸಬೇಕಿದ್ದ ನಿರ್ದೇಶಕರು ತಮ್ಮ ಸ್ಕ್ರಿಪ್ಟ್ ಅನ್ನೇ ಬದಲಿಸುತ್ತಿದ್ದಾರೆ. ಒಂದಷ್ಟು ಮಂದಿ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಿಕೊಂಡರೆ, ಇನ್ನೊಂದಿಷ್ಟು ನಿರ್ದೇಶಕರು ಮೊದಲು ಮಾಡಿದ ಕಥೆಯನ್ನು ಬದಿಗಿಟ್ಟು, ಹೊಸ ಕಥೆಯನ್ನೇ ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಸಿನಿಮಾ ಮಂದಿಗೆ ಹೊಸ ಕಥೆ ಮಾಡುವಷ್ಟರ ಮಟ್ಟಿಗೆ ಕೋವಿಡ್ ತಂದ ಸಂಕಟವೇನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಮಾಸ್ ಸೇರುವಂತಿಲ್ಲ. ಕೋವಿಡ್ ದಿಂದಾಗಿ ಹೆಚ್ಚು ಜನ ಒಟ್ಟಿಗೆ ಸೇರುವಂತಿಲ್ಲ. ದೊಡ್ಡ ಮಟ್ಟಿನ ಕ್ಯಾನ್ವಾಸ್‌ನಲ್ಲಿ ಚಿತ್ರೀಕರಣ ಮಾಡೋದು ಸದ್ಯಕ್ಕೆ ಕನಸಿನ ಮಾತು. ಸ್ಟಾರ್ ನಟರ ಜೊತೆ ಸಿನಿಮಾ ಮಾಡುವವರು, ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾದ ಕನಸು ಕಂಡಿರುವವರು, ನೂರಾರು ಜನರನ್ನು ಸೇರಿಸಿ ಸೀನ್ ತೆಗೆಯಬೇಕೆಂದು ಕನಸು ಕಂಡಿರುವವರಿಗೆ ಕೋವಿಡ್ ಅಡ್ಡಿಯಾಗಿರೋದು ಸುಳ್ಳಲ್ಲ. ಅದೇ ಕಾರಣದಿಂದ ನಿರ್ದೇಶಕ ಶಶಾಂಕ್ ತಮ್ಮ ಕಥೆಯನ್ನು ಬದಿಗಿಟ್ಟು, ಹೊಸ ಕಥೆಯನ್ನು ಮಾಡಿಕೊಂಡಿದ್ದಾರೆ. ಅದು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಮಾಡಬಹುದಾದಂತಹ ಕಥೆ. ಹೌದು, ನಿರ್ದೇಶಕ ಶಶಾಂಕ್, ರಿಯಲ್‌ಸ್ಟಾರ್ ಉಪೇಂದ್ರ ಅವರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದರು. ಆ ಚಿತ್ರಕ್ಕೆ ಮುಹೂರ್ತ ಕೂಡಾ ನಡೆದಿತ್ತು. ಜೊತೆಗೆ “ಪುಣ್ಯಾತ್ಮ’ ಎಂಬ ಟೈಟಲ್ ಕೂಡಾ ಬದಲಾಗಿತ್ತು. ಆದರೆ, ಈಗ ಶಶಾಂಕ್ ಆ ಪ್ರಾಜೆಕ್ಟ್ ಅನ್ನು ಸದ್ಯದ ಮಟ್ಟಿಗೆ ಬದಿಗಿಟ್ಟಿದ್ದಾರೆ. ಹಾಗಂತ ಉಪ್ಪಿ ಜೊತೆಗಿನ ಸಿನಿಮಾದಿಂದ ಅವರು ಹಿಂದೆ ಸರಿದಿಲ್ಲ. “ಪುಣ್ಯಾತ್ಮ’ ಬದಲಿಗೆ ಹೊಸ ಕಥೆಯನ್ನು ಮಾಡಿದ್ದಾರೆ. ಆ ಕಥೆಯಡಿ ಉಪೇಂದ್ರ ನಟಿಸಲಿದ್ದಾರೆ.
ಈ ಬಗ್ಗೆ ಮಾತನಾಡುವ ಶಶಾಂಕ್, “ಆರಂಭದಲ್ಲಿ ನಾವು ಒಂದು ಕಥೆ ಮಾಡಿ, ಮುಹೂರ್ತ ಕೂಡಾ ಮಾಡಿದ್ದೇವು. ಆ ಕಥೆಗೆ ಪುಣ್ಯಾತ್ಮ ಟೈಟಲ್ ಹೊಂದಿಕೆಯಾಗುತ್ತಿತ್ತು. ಈ ಚಿತ್ರದ ಕ್ಯಾನ್ವಾಸ್ ಹಾಗೂ ನನ್ನ ಕನಸು ಕೂಡಾ ದೊಡ್ಡದಾಗಿತ್ತು. ಒಂದೊಂದು ಸೀನ್‌ಗೂ ಹೆಚ್ಚು ಜನ, ಔಟ್‌ಡೋರ್ … ಹೀಗೆ ಕೋವಿಡ್ ಬರುವ ಮುಂಚಿನ ಶೈಲಿಯ ಚಿತ್ರೀಕರಣ ಬೇಕಿತ್ತು. ಆದರೆ, ಈಗ ಸಾಧ್ಯವಿಲ್ಲ. ಅದೇ ಕಥೆಯನ್ನಿಟ್ಟುಕೊಂಡು ಈಗ ಚಿತ್ರೀಕರಣ ಮಾಡಿದರೆ, ನಾನು ಮಾಡಿರುವ ಸ್ಕ್ರಿಪ್ಟ್ಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಆ ಕಾರಣದಿಂದ ಸದ್ಯಕ್ಕೆ “ಪುಣ್ಯಾತ್ಮ’ನನ್ನು ಬದಿಗಿಟ್ಟು, ಹೊಸ ಕಥೆಯನ್ನು ಮಾಡಿದ್ದೇನೆ. ಈ ಕಥೆಗೆ ಹೆಚ್ಚು ಜನರನ್ನು ಬಯಸುವುದಿಲ್ಲ. ಕೋವಿಡ್ ಕುರಿತಾದ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಮಾಡಬಹುದಾದ ಕಥೆ. ಹಾಗಂತ ಪುಣ್ಯಾತ್ಮನನ್ನು ಕೈ ಬಿಡುವುದಿಲ್ಲ. ಅದನ್ನೇ ಉಪ್ಪಿಯವರಿಗೆ ಮಾಡುವ ಆಸೆ ಇದೆ.
ಮೊದಲ ಆದ್ಯತೆ ಈಗ ಮಾಡಿ ಕೊಂಡಿರುವ ಹೊಸ ಕಥೆಗೆ’ ಎನ್ನುವುದು ಶಶಾಂಕ್ ಮಾತು. ಶಶಾಂಕ್ ಹೇಳುವಂತೆ, ಜನರಲ್ಲಿ ಕೋವಿಡ್ ಭಯ ಹೋಗುವವರೆಗೆ ಚಿತ್ರೀಕರಣ ಮಾಡೋದು ಕಷ್ಟ. ಹಾಗಾಗಿ, ನಿರ್ದೇಶಕರು ತಮ್ಮ ಕಥೆಗಳನ್ನು ಅನಿವಾರ್ಯವಾಗಿ ಬದಲಿಸಿಕೊಳ್ಳಬೇಕಿದೆ. ಈಗಾಗಲೇ ದೊಡ್ಡ ಕ್ಯಾನ್ವಾಸ್‌ನೊಂದಿಗೆ ಚಿತ್ರೀಕರಣ ಆರಂಭಿಸಿರುವ ಸಿನಿಮಾಗಳು ಅನಿವಾರ್ಯವಾಗಿ ತಮ್ಮ ಚಿತ್ರೀಕರಣ ಮುಂದುವರೆಸಬೇಕಿದೆ.
-ರವಿಪ್ರಕಾಶ್ ರೈ