Advertisement

ಸೋಂಕಿತರು ಬೆಂಗಳೂರಿನಿಂದ ಗುಳೆ

01:35 PM Apr 26, 2021 | Team Udayavani |

ಎಚ್‌.ಕೆ. ನಟರಾಜ

Advertisement

ದಾವಣಗೆರೆ: ಬೆಂಗಳೂರಿನಲ್ಲಿ ಕೊರೊನಾರ್ಭಟ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಬೆಡ್‌, ವೆಂಟಿಲೇಟರ್‌, ಐಸಿಯು ಕೊರತೆ ಹಿನ್ನೆಲೆಯಲ್ಲಿ ರಾಜಧಾನಿಯ ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ಹೊರ ಜಿಲ್ಲೆಗಳತ್ತ ಹೆಜ್ಜೆ ಇಟ್ಟಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಹೆಚ್ಚಿಸಲಾಗುತ್ತಿದೆ. ವೆಂಟಿಲೇಟರ್‌ ವ್ಯವಸ್ಥೆಯತ್ತ ಗಮನಹರಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಜನರು ಮಾತ್ರ ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆ ಅಷ್ಟು ಸುಲಭವಾಗಿ ಸಿಗುತ್ತಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಹೊರ ಜಿಲ್ಲೆಗಳ ಆಸ್ಪತ್ರೆಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.

ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಲ್ಲಿಯೂ ಬೆಂಗಳೂರಿನ ಸೋಂಕಿತರು ಹೆಚ್ಚಾಗಿದ್ದಾರೆ. ಕೊರೊನಾ ಪಾಸಿಟಿವ್‌ ಬಂದವರಲ್ಲಿ ಅನೇಕರು, ತುರ್ತುಚಿಕಿತ್ಸೆ ಅಗತ್ಯವಿದ್ದವರು ಸೋಂಕಿತರು ಕಡಿಮೆ ಇರುವ ಮತ್ತು ವೆಂಟಿಲೇಟರ್‌ ವ್ಯವಸ್ಥೆ ಇರುವ ವಿವಿಧ ಜಿಲ್ಲೆಗಳ ಆಸ್ಪತ್ರೆ ಮಾಹಿತಿ ಪಡೆದುಕೊಂಡು ಹತ್ತಿರದ ಇಲ್ಲವೇ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ಬರುವ ತುಮಕೂರು, ಮೈಸೂರು,ಮಂಡ್ಯ, ಮಂಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡಜಿಲ್ಲೆಯವರೆಗೂ ಪ್ರಯಾಣ ಬೆಳೆಸುತ್ತಿದ್ದಾರೆ. ಈಗಾಗಲೇ ನೂರಾರು ಜನರು ಹೊರ ಜಿಲ್ಲೆಗಳಲ್ಲಿ ದಾಖಲಾಗಿದ್ದು, ಇವರಲ್ಲಿ ವೆಂಟಿಲೇಟರ್‌ ಅಗತ್ಯವಿರುವ ರೋಗಿಗಳ ಸಂಖ್ಯೆಯೇ ಅಧಿಕವಾಗಿರುವುದು ಗಮನಾರ್ಹ.

ಸುಳ್ಳು ವಿಳಾಸ: ಬೆಂಗಳೂರಿನಿಂದ ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಹೋಗುತ್ತಿರುವ ರೋಗಿಗಳು ತಮ್ಮ ಸಂಬಂಧಿಗಳ ಸ್ಥಳೀಯ ವಿಳಾಸ, ಇಲ್ಲವೇ ಸುಳ್ಳು ಸ್ಥಳೀಯ ವಿಳಾಸ ನೀಡಿ ಚಿಕಿತ್ಸೆಗೆ ದಾಖಲಾಗುತ್ತಿರುವುದು ಬೆಳಕಿಗೆ ಬಂದಿದೆ. ತುರ್ತುಚಿಕಿತ್ಸೆಯ ಅಗತ್ಯದೊಂದಿಗೆ ಬಂದಿರುವ ರೋಗಿಗಳನ್ನುಹೆಚ್ಚಿನ ವಿಚಾರಣೆ ಮಾಡದೆ ತಕ್ಷಣ ಚಿಕಿತ್ಸೆ ನೀಡಲು ಮುಂದಾಗುತ್ತಿರುವುದರಿಂದ ಆರಂಭದಲ್ಲಿ ವಿಳಾಸದ ಬಗ್ಗೆ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ದಿನದಿಂದ ದಿನಕ್ಕೆ ಬೆಂಗಳೂರಿನ ರೋಗಿಗಳೇ ತುಂಬಿಕೊಳ್ಳುತ್ತಿರುವುದು ಸ್ಥಳೀಯ ಜಿಲ್ಲಾಡಳಿತಗಳಿಗೆ ತಲೆನೋವಾಗಿದೆ.

ಚಿಕಿತ್ಸೆಗೆ ನಿರಾಕರಣೆ: ಸುಳ್ಳು ವಿಳಾಸ ನೀಡಿ ಹೊರ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬೆಂಗಳೂರಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಜಿಲ್ಲಾಡಳಿತಗಳು ಈಗಷ್ಟೇ ಎಚ್ಚೆತ್ತುಕೊಂಡಿದ್ದು, ಹೊರ ಜಿಲ್ಲೆಯ ರೋಗಿಗಳಿಗೆ ಚಿಕಿತ್ಸೆನೀಡಲು ನಿರಾಕರಿಸುತ್ತಿವೆ.

Advertisement

ಜಿಲ್ಲಾ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಬೆಂಗಳೂರಿನ ಸೋಂಕಿತರೇ ಆಶ್ರಯ ಪಡೆದುಕೊಂಡು ಮುಂದೆ ತಮ್ಮ ಜಿಲ್ಲೆಯಲ್ಲಿ ಸೋಂಕು ಹೆಚ್ಚಾದರೆ ಸ್ಥಳೀಯರಿಗೆ ತೊಂದರೆಯಾಗುತ್ತದೆ ಎಂಬ ಕಾಳಜಿ ಜಿಲ್ಲಾಡಳಿತಗಳದ್ದಾಗಿದೆ.ಸ್ಥಳೀಯರಿಗೆ ಆದ್ಯತೆ ನೀಡುವ ದೃಷ್ಟಿಯಿಂದ ಜಿಲ್ಲಾಡಳಿತಗಳು ದಾಖಲಾಗುವವರ ವಿಳಾಸವನ್ನು ಗಂಭೀರವಾಗಿ ಪರಿಶೀಲಿಸಲು ಕ್ರಮ ವಹಿಸಿವೆ.

ಪ್ರಭಾವಿಗಳ ಶಿಫಾರಸು: ಬೆಂಗಳೂರಿನಲ್ಲಿ ದೊಡ್ಡ ದೊಡ್ಡರಾಜಕಾರಣಿಗಳು, ಗಣ್ಯರು, ಪ್ರಭಾವಿಗಳು ಶಿಫಾರಸು ಮಾಡಿದರೂ ಆಸ್ಪತ್ರೆಗಳಲ್ಲಿ ಬೆಡ್‌, ವೆಂಟಿಲೇಟರ್‌ ಸಿಗುತ್ತಿಲ್ಲ.ಆದರೆ ಅಲ್ಲಿಯ ಪ್ರಭಾವಿಗಳು ಹೊರ ಜಿಲ್ಲೆಗಳಅಧಿಕಾರಿಗಳು, ರಾಜಕಾರಣಿಗಳ ಮೂಲಕ ಶಿಫಾರಸುಮಾಡಿ ತಮಗೆ ಬೇಕಾದವರಿಗೆ ಕೊರೊನಾ ಚಿಕಿತ್ಸೆಗಾಗಿದಾಖಲಿಸುವ ವ್ಯವಸ್ಥೆಯೂ ತೆರೆಮರೆಯಲ್ಲಿ ನಡೆದಿದೆ.ಒಟ್ಟಾರೆ ಬೆಂಗಳೂರಿನ ಸೋಂಕಿತರಿಗೆ ಬೆಂಗಳೂರಿನಲ್ಲಿಯೂ ಸುಲಭವಾಗಿ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಹೊರಜಿಲ್ಲೆಗಳಲ್ಲಿಯೂ ಸುಲಭವಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿಬೆಂಗಳೂರಿಗರಿಗೆ ಬೆಂಗಳೂರೇ ಗತಿ ಎಂಬಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next