Advertisement
ಇದರಿಂದಾಗಿ ಇತರೆ ರೋಗಿಗಳನ್ನು ಕೇಳುವವರಿ ಲ್ಲದಂತಾಗಿದೆ. ನಗರದಲ್ಲಿ ನಿತ್ಯ ದುಪ್ಪಟ್ಟು ಸಂಖ್ಯೆಯಲ್ಲಿ ಕೊರೊನಾ ಹೊರತಾದ ಕಾಯಿಲೆಗಳಿಂದ ಜನ ಒದ್ದಾಡುತ್ತಿದ್ದಾರೆ. ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಮಾತ್ರವಲ್ಲದೆ ಸೇರಿದಂತೆ ಮತ್ತಿತರ ವೈದ್ಯಕೀಯ ಸೌಲಭ್ಯಗಳು ಸಿಗದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿಯೆ ಜಯದೇವ ಹೃದ್ರೋಗ ಸಂಸ್ಥೆ, ನಿಮ್ಹಾನ್ಸ್, ಕಿದ್ವಾಯಿ, ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಂತಹ ರೆಫೆರಲ್ ಆಸ್ಪತ್ರೆಗಳು ಹೆಚ್ಚಿರುವ ಹಿನ್ನೆಲೆ ಸುತ್ತಮುತ್ತಲಿನ ಜಿಲ್ಲೆಗಳಿಂದ, ರಾಜ್ಯದ ವಿವಿಧೆಡೆಯಿಂದ ವೈದ್ಯಕೀಯ ನೆರವಿಗಾಗಿ ಆಗಮಿಸುತ್ತಾರೆ.
Related Articles
Advertisement
ರೋಗಿಗಳ ಮುಟ್ಟಲು ಹಿಂದೇಟು
ತ್ವರಿತ ಮತ್ತು ಸಾಮಾನ್ಯ ಕಾಯಿಲೆಗಳಿಗೆ ಮನೆ ಸಮೀಪದ ಕ್ಲಿನಿಕ್‌ಗಳನ್ನೇ ಅವಲಂಬಿಸುತ್ತಾರೆ. ಆದರೆ, ಕೊರೊನಾ ಭಯದಿಂದ ನಗರದ ಬಹುತೇಕ ಕ್ಲಿನಿಕ್‌ಗಳಲ್ಲಿ ವೈದ್ಯರು ರೋಗಿಗಳನ್ನು ಮುಟ್ಟದೆ ದೂರದಲ್ಲಿಯೇ ಕೂರಿಸಿ ಮಾತನಾಡಿಸಿ ಮಾತ್ರೆ, ಔಷಧ ಚೀಟಿ ಬರೆದು ಕಳುಹಿಸುತ್ತಿದ್ದಾರೆ. ಕ್ಲಿನಿಕ್‌ಗಳಲ್ಲಿ ಚುಚ್ಚುಮದ್ದು ಬಂದಾಗಿದ್ದು, ಬೇಕಿದ್ದರೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಥವಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತೆರಳುವಂತೆ ತಿಳಿಸುತ್ತಿದ್ದಾರೆ. ಇನ್ನು ಸಣ್ಣಪುಟ್ಟ ಗಾಯದ ಡೆಸ್ಸಿಂಗ್ ಮಾಡುತ್ತಿಲ್ಲ. ಅಪಘಾತವಾದ ರೋಗಿಗಳು, ಡಯಾಲಿಸಿಸ್ ಬೇಕಿರುವ ಮಧುಮೇಹ ರೋಗಿಗಳು ಸೂಕ್ತ ಚಿಕಿತ್ಸೆ ಇಲ್ಲದೆ ಕ್ಲಿನಿಕ್‌ಗಳಿಗೆ ಅಲೆದಾಡುತ್ತಿದ್ದಾರೆ.
2 ಸಾವಿರಕ್ಕೂ ಅಧಿಕ ಕ್ಲಿನಿಕ್‌ಗಳಿಗೆ ಬೀಗ
ನಗರದ ಬಹುತೇಕ ಬಡಾವಣೆಗಳಲ್ಲಿ ಕ್ಲಿನಿಕ್‌ಗಳು ಬಂದ್ ಎಂಬ ಬೋರ್ಡ್ ಸಾಮಾನ್ಯವಾಗಿದೆ. ಈ ಕುರಿತು ಕ್ಲಿನಿಕ್ ವೈದ್ಯರಿಗೆ ಕರೆ ಮಾಡಿದರೆ ಕೊರೊನಾ ಹಿನ್ನೆಲೆ ಮುಂಜಾಗ್ರತಾ ಕ್ರಮ, ಕೊರೊನಾ ಕರ್ತವ್ಯದಲ್ಲಿದ್ದೇವೆ, ಸಹಾಯಕ ಸಿಬ್ಬಂದಿ ಇಲ್ಲ ಎಂಬ ಉತ್ತರ ಬರುತ್ತದೆ. ನಾಲ್ಕರಲ್ಲಿ ಒಂದು ಕ್ಲಿನಿಕ್ ಬಂದ್ ಆಗಿದ್ದು, ಇದು ಕೂಡಾ ವೈದ್ಯಕೀಯ ಸೌಲಭ್ಯ ಸಕಾಲದಲ್ಲಿ ದೊರೆಯದಿರಲು ಕಾರಣವಾಗಿದೆ. ನಗರದಲ್ಲಿ ಒಟ್ಟು 15 ಸಾವಿರಕ್ಕೂ ಅಧಿಕ ನೋಂದಾಯಿತ ಕ್ಲಿನಿಕ್‌ಗಳಿವೆ. ಕ್ಲಿನಿಕ್‌ಗಳಿಗೆ ಆಗಮಿಸುವ ಸೋಂಕಿತರು ಮತ್ತು ಸೋಂಕು ಲಕ್ಷಣ ಇದ್ದವರಿಗೆ ಚಿಕಿತ್ಸೆ ನೀಡಿ ಅನೇಕ ವೈದ್ಯರು ಸೋಂಕು ತಗುಲಿಸಿಕೊಂಡಿದ್ದಾರೆ. ಚಿಕ್ಕ ಕ್ಲಿನಿಕ್ ನಡೆಸುವ ವೈದ್ಯರಿಗೆ ನಿತ್ಯ ಪಿಪಿಇ ಕಿಟ್ ಖರೀದಿಸುವ ಆರ್ಥಿಕ ಶಕ್ತಿ ಇರುವುದಿಲ್ಲ. ನಾಲ್ವರದಲ್ಲಿ ಒಬ್ಬ ಕ್ಲಿನಿಕ್ ವೈದ್ಯ ಈ ಬಾರಿ ಸೋಂಕಿತರಾಗಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಕ್ಲಿನಿಕ್‌ಗಳು ಬಂದ್ ಆಗಿವೆ ಎಂದು ಐಎಂಎ ವೈದ್ಯರು ತಿಳಿಸಿದ್ದಾರೆ.
ಇನ್ಪೆಕ್ಷನ್ ಸೆಂಟರ್‌ಗಳಾಗಿ ಮಾರ್ಪಾಡು
ಹಲವು ಕ್ಲಿನಿಕ್‌ಗಳು, ಪ್ರಯೋಗಾಲಯಗಳು, ಔಷಧಾಲಯಗಳು ಬಂದ್ ಆಗಿರುವುದರಿಂದ ತೆರೆದಿರುವ ಕಡೆಗಳಲ್ಲಿ ಜನದಟ್ಟಣೆ ಕಂಡು ಬರುತ್ತಿದೆ. ಸರತಿಯಲ್ಲಿ ನಿಂತು ನಾಲ್ಕೈದು ಗಂಟೆ ಕಾಯಬೇಕಿದೆ. ದಟ್ಟಣೆ ಹೆಚ್ಚಿರುವ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೊರೊನಾ ಸೋಂಕಿಗೆ ದಾರಿಯಾಗುತ್ತಿದೆ. ನಗರದ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ಮತ್ತು ಲಸಿಕೆ ವಿತರಣೆ ಎರಡೂ ಕಾರ್ಯವನ್ನು ಮಾಡುತ್ತಿವೆ. ಇದರಿಂದ ಸೋಂಕು ಲಕ್ಷಣ ಹಿನ್ನೆಲೆ ಪರೀಕ್ಷೆಗೆ ಬಂದವರು ಮತ್ತು ಲಸಿಕೆ ಪಡೆಯಲು ಬಂದವರಿಗೂ ಸೋಂಕಿತರಾಗುತ್ತಿದ್ದಾರೆ.
ದೂರ ಉಳಿದ ಬಾಣಂತಿಯರು
ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ಮತ್ತು ಲಸಿಕೆ ವಿತರಣೆ ನಡೆಯುತ್ತಿದ್ದು, ಮಾಸಿಕ ತಪಾಸಣೆಗೆ ಬರುವ ಬಾಣಂತಿಯರಿಗೆ ಕೊರೊನಾ ಆತಂಕ ಕಾಡುತ್ತಿದೆ. ಸೋಂಕು ತಗುಲುವ ಸಾಧ್ಯತೆಯೂ ಹೆಚ್ಚಿರುವ ಹಿನ್ನೆಲೆ ಅವರುಗಳು ಕೂಡಾ ಖಾಸಗಿ ಕ್ಲಿನಿಕ್‌ಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಆರ್ಥಿಕವಾಗಿ ಹಿಂದುಳಿದವರು ತಪಾಸಣೆಯನ್ನು ಮುಂದೂಡಿ ಕುಳಿತಿದ್ದಾರೆ. ಮಾರ್ಚ್ ವೇಳೆ ನೋಂದಣಿಯಾಗಿದ್ದ ಬಾಣಂತಿಯರು ತಿಂಗಳ ತಪಾಸಣೆಗೆ ಬಂದಿಲ್ಲ. ಕರೆ ಮಾಡಿ ವಿಚಾರಿಸಿದರೆ ಖಾಸಗಿಯಲ್ಲಿ ತೋರಿಸಿದ್ದೇವೆ, ಊರಲ್ಲಿದ್ದೇವೆ ಎಂದು ಹೇಳುತ್ತಾರೆ ಎಂದು ಬಿಬಿಎಂಪಿ ಆರೋಗ್ಯ ಕೇಂದ್ರದ ವೈದ್ಯರು ಹೇಳುತ್ತಾರೆ.
ದರ ಹೆಚ್ಚಳ ಬಿಸಿ
ಸರ್ಕಾರಿ ಆಸ್ಪತ್ರೆಗೆ ಬಂದರೆ ಸೋಂಕಿನ ಭಯ ಎಂದು ಬಹುತೇಕರು ಖಾಸಗಿ ಆರೋಗ್ಯ ಸಂಸ್ಥೆಗಳ ಕಡೆ ಮುಖ ಮಾಡಿದ್ದಾರೆ. ಆದರೆ, ಖಾಸಗಿಯಲ್ಲಿ ಮುಂಜಾಗ್ರತಾ ಕ್ರಮದ ಹೆಸರಿನಲ್ಲಿ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಕ್ಲಿನಿಕ್‌ಗಳು, ಪ್ರಯೋಗಾಲಯಗಳು ಬಂದ್ ಇರುವುದು ಕೂಡಾ ಶುಲ್ಕ ಹೆಚ್ಚಿಸಲು ಕಾರಣವಾಗಿದೆ. ಅನೇಕ ಕಡೆ ಸೇವಾ ಶುಲ್ಕ, ಹೊಸ ದರ ಪಟ್ಟಿಯನ್ನು ಅಳವಡಿಸಿವೆ. ವೈದ್ಯರ ಸಮಾಲೋಚನೆ ಶುಲ್ಕ ಕೂಡಾ ಶೇ.50 ರಷ್ಟು ಹೆಚ್ಚಳವಾಗಿದೆ.
ನೆಗೆಟಿವ್ ವರದಿ ಕೊಡಿ
ಸರ್ಕಾರದ ಸ್ಪಷ್ಟ ಸೂಚನೆ ಇದ್ದರೂ ಇಂದಿಗೂ ಕೊರೊನೇತರ ರೋಗಿಗಳನ್ನು ದಾಖಲಿಸಲು ಕೊರೊನಾ ವರದಿಯನ್ನು ಖಾಸಗಿ ಆಸ್ಪತ್ರೆಗಳು ಕೇಳುತ್ತಿವೆ. ಇದರಿಂದ ತುರ್ತು ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆಯೂ ಕಷ್ಟವಾಗಿದೆ. ಇನ್ನು ಎಕ್ಸ್ ರೇ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ವಿವಿಧ ರಕ್ತ ಪರೀಕ್ಷೆಗಳು, ಕ್ಯಾನ್ಸರ್ ಪತ್ತೆ ಪರೀಕ್ಷೆಗಳು ಸೇರಿದಂತೆ ಹಲವು ರೋಗ ಪತ್ತೆ ಪರೀಕ್ಷೆಗಳಿಗೆ ಖಾಸಗಿ ಪ್ರಯೋಗಾಲಯಗಳಲ್ಲಿ ನೆಗೆಟಿವ್ ವರದಿ ಕೇಳುತ್ತಿದ್ದಾರೆ.
ಅರ್ಧದಷ್ಟು ರಕ್ತನಿಧಿಗಳಲ್ಲಿ “ನೋ ಸ್ಟಾಕ್’
ಬೆಂಗಳೂರಿನಲ್ಲಿ 70ಕ್ಕೂ ಅಧಿಕ ರಕ್ತ ನಿಧಿ ಕೇಂದ್ರಗಳಿದ್ದು, ಅರ್ಧದಷ್ಟು ಕೇಂದ್ರಗಳು ಕನಿಷ್ಠ ಒಂದು ಯುನಿಟ್ ರಕ್ತಸಂಗ್ರಹವೂ ಇಲ್ಲದೇ “ನೋ ಸ್ಟಾಕ್’ ಎನ್ನುತ್ತಿವೆ. ಇನ್ನು ನೆಗೆಟಿವ್ ಗುಂಪಿನ ರಕ್ತ ಬಹುತೇಕ ಕೇಂದ್ರಗಳಲ್ಲಿ ಲಭ್ಯವಿಲ್ಲ. ಇತ್ತ ರಕ್ತಸಂಗ್ರಹ ಶಿಬಿರ ನಡೆಯುತ್ತಿಲ್ಲ. ಕಾಲೇಜು, ಐಟಿ ಕಂಪನಿಗಳು ಬಂದ್ ಇದ್ದು, ರಕ್ತದಾನಿಗಳು ಇಲ್ಲದಂತಾಗಿದೆ. ಇದರಿಂದಾಗಿ ರಕ್ತ ಸೇರಿದಂತೆ ರಕ್ತದ ಇತರೆ ಭಾಗಗಳಾದ ಬಿಳಿ ರಕ್ತಕಣಗಳು, ಪ್ಲೇಟ್ಲೆಟ್‌ಗಳು ಸಿಗದೆ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರಿನ ಹಲವೆಡೆ ರೋಗಿಗಳ ಸಂಬಂಧಿಗಳು ರಕ್ತ ಲಭ್ಯವಿರುವ ರಕ್ತನಿಧಿ ಕೇಂದ್ರಗಳನ್ನು ಹುಡುಕುತ್ತಾ ಅಲೆದಾಡುತ್ತಿದ್ದಾರೆ. ಇನ್ನೊಂದೆಡೆ ಭಯದಿಂದ ಸ್ನೇಹಿತರು, ಸಂಬಂಧಿಗಳು ಹಾಗೂ ಪರಿಚಯಸ್ಥರು ಹಿಂದೇಟು ಹಾಕುತ್ತಿದ್ದಾರೆ. “ನಮ್ಮಲ್ಲಿ ಶೇ.70 ರಷ್ಟು ರಕ್ತಸಂಗ್ರಹ ಕೊರತೆ ಇದೆ. ಡಯಾಲಿಸಿಸ್, ಅಪಘಾತ, ಥಲೇಸಿಮಿಯಾ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ರಾಷ್ಟ್ರೋತ್ಥನ ರಕ್ತನಿಧಿ ಕೇಂದ್ರದ ನರಸಿಂಹ ಶಾಸಿŒ, ತಿಳಿಸಿದರು.
ಆಯುಷ್ ಚಿಕಿತ್ಸೆಗಳು ಕೊರತೆ
ಕೊರೊನಾ ಹಿನ್ನೆಲೆ ಆಯುರ್ವೇದ, ಯುನಾನಿ, ಸಿದ್ದಿ ಸೇರಿದಂತೆ ಅರ್ಧಕ್ಕರ್ಧ ಆಯುಷ್ ಚಿಕಿತ್ಸೆ ಆಸ್ಪತ್ರೆ, ಕ್ಲಿನಿಕ್‌ಗಳು ಬಂದ್ ಹಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ. ಇದರಿಂದಾಗಿ ಹತ್ತಾರು ವರ್ಷಗಳಿಂದ ಆಯುಷ್ ಚಿಕಿತ್ಸೆ ಪಾಲನೆ ಮಾಡುತ್ತಿದ್ದವರು ಅನಿವಾರ್ಯವಾಗಿ ಅಲೋಪಥಿ ವಿಧಾನವನ್ನೇ ಅನುಸರಿಸಬೇಕಾಗಿದೆ. ಸಂಧಿವಾತಕ್ಕೆ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದೆ. ಸದ್ಯ ಆಸ್ಪತ್ರೆಬಂದ್ ಆಗಿದ್ದು, ಔಷಧವು ಎಲ್ಲಿಯೂ ಸಿಗುತ್ತಿಲ್ಲ ಎಂದು ರೋಗಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಬಡರೋಗಿಗಳಿಗೆ ಸಂಕಷ್ಟ
ಮೂತ್ರಪಿಂಡ ತೀವ್ರ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ವಾರಕ್ಕೆ ಒಮ್ಮೆ ಡಯಾಲಿಸಿಸ್ ಅಗತ್ಯವಿದೆ. ಸದ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕು ಚಿಕಿತ್ಸೆ ಹಿನ್ನೆಲೆ ಡಯಾಲಿಸಿಸ್‌ಗೆ ಆದ್ಯತೆ ನೀಡುತ್ತಿಲ್ಲ. ಕೆಲ ಆಸ್ಪತ್ರೆಯಲ್ಲಿ ಲಭ್ಯವಿದ್ದರೂ, ಸೋಂಕಿನ ಆತಂಕದಿಂದ ರೋಗಿಗಳು ತೆರಳು ತ್ತಿಲ್ಲ. 50ಕ್ಕೂ ಅಧಿಕ ಖಾಸಗಿ ಕೇಂದ್ರಗಳಿದ್ದು, ಅವುಗಳಲ್ಲಿ ಅರ್ಧದಷ್ಟು ಬಂದ್ ಆಗಿವೆ. ಈ ರೋಗಿಗಳು ಅನಿವಾರ್ಯವಾಗಿ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ 3-4 ಸಾವಿರ ಶುಲ್ಕವಿದ್ದು, ಬಡರೋಗಿ ಗಳು ಇದರಿಂದ ತೀವ್ರ ಸಮಸ್ಯೆಗೊಳಗಾಗಿದ್ದಾರೆ.
ಜಯಪ್ರಕಾಶ್ ಬಿರಾದಾರ್