Advertisement
ದಿನೇ ದಿನೆ ದಂಧೆಕೋರರು ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದ್ದು, ಕಾಳ ಸಂತೆ ಯಲ್ಲಿ ಕೊರೊನಾ ಔಷಧಿಗಳು, ಆಕ್ಸಿಜನ್, ಬೆಡ್‌ಗಳನ್ನು ಭಾರಿ ಮೊತ್ತಕ್ಕೆ ಮಾರಾಟಕ್ಕಿಟ್ಟಿದ್ದಾರೆ. ಲಕ್ಷಾಂತರ ರೂ. ಲಾಭಗಳಿಸುತ್ತಿದ್ದಾರೆ. ಅದರಿಂದ ಬಡವರು, ನಿರ್ಗತಿಕರು, ಮಧ್ಯಮ ವರ್ಗದರು, ಅಮಾಯಕರು ಸೌಲಭ್ಯ ವಂಚಿತರಾಗಿ ಕೊರೊನಾ ಎರಡನೇ ಅಲೆಗೆ ಪ್ರಾಣ ತೆತ್ತಿದ್ದಾರೆ. ಇಂತಹ ದಂಧೆಕೋರರ ಸದೆ ಬಡಿಯಲು ಬೆಂಗಳೂರು ಪೊಲೀಸರು ಟೊಂಕ ಕಟ್ಟಿ ನಿಂತಿದ್ದು, ಇದುವರೆಗೂ 50ಕ್ಕೂ ಅಧಿಕ ಮಂದಿಗೆ ಕೊಳತೋಡಿಸಿ ದ್ದಾರೆ. ಈ ವೇಳೆ ದಂಧೆಕೋರರ ವಂಚನೆ ವಿಧಾನಕ್ಕೆ ಪೊಲೀಸರೆ ನಿಬ್ಬೆರಗಾಗಿದ್ದಾರೆ.
Related Articles
Advertisement
ಮತ್ತೂಂದೆಡೆ ಕೇಂದ್ರದಿಂದಲೂ ಕಡಿಮೆ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸಾವಿರಾರು ಮಂದಿ ಪ್ರಾಣವಾಯು ಸಿಗದೆ ಮೃತಪಡುತ್ತಿದ್ದಾರೆ. ಆದರೂ ಕೆಲವು ರಿಫೀಲ್ಲಿಂಗ್ ಘಟಕಗಳು ಆಕ್ಸಿಜನ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ಅಧಿಕ ಮೊತ್ತಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ.
ಖಾಲಿ ಸಿಲಿಂಡರ್ ಪ್ರತಿ 47 ಕೆ.ಜಿ ಸಿಲಿಂಡರ್ ಗೆ 3-4 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿರುವ ಆಕ್ಸಿಜನ್ ಉತ್ಪಾದನಾ ಘಟಕಗಳು, ರಿಫೀಲ್ಲಿಂಗ್ ಘಟಕಗಳ ಮೇಲೆ ಬೆಂಗಳೂರು ಪೊಲೀಸರು ನಿಗಾವಹಿಸಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆ
ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಅವ್ಯವಾಹತವಾಗಿ ನಡೆಯುತ್ತಿರುವ ದಂಧೆ ಎಂದರೇ ಅದುವೇ ಬೆಡ್ ದಂಧೆ. ನಗರದಲ್ಲಿರುವ ನೂರಾರು ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್‌ಗಳನ್ನು ಸರ್ಕಾರ ಕೋಟಾದಡಿ ಮೀಸಲಿಡಬೇಕು. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.80ರಷ್ಟು ಸ್ಥಳವನ್ನು ಕೊರೊನಾ ವಾರ್ಡ್‌ಗಳನ್ನಾಗಿ ಮಾರ್ಪಾಡಿಸಲಾಗಿದೆ. ಜತೆಗೆ ನಗರದ ಸಾಕಷ್ಟು ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಆದರೂ ನಗರದಲ್ಲಿ ಸಾವಿರಾರು ಮಂದಿ ಬೆಡ್ ಸಿಗದೇ ಮನೆ, ರಸ್ತೆ, ಆ್ಯಂಬುಲೆನ್ಸ್‌ಗಳಲ್ಲಿ ಪ್ರಾಣ ಬಿಡುತ್ತಿದ್ದಾರೆ. ಅದಕ್ಕೆ ಮುಖ್ಯಕಾರಣ ಬೆಡ್ ದಂಧೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಡ್ ನಿರ್ವಹಣೆಗಾಗಿ ಎಂಟು ವಲಯಗಳಲ್ಲಿ ವಾರ್ ರೂಮ್ ತೆರೆಯಲಾಗಿದ್ದು, ಬಿಬಿಎಂಪಿಯ ವೈದ್ಯಾಧಿಕಾರಿ ನೇತೃತ್ವದಲ್ಲಿ ಗುತ್ತಿಗೆ ಆಧಾರದ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಗಳು ಖಾಲಿ ಇವೆ. ಇಲ್ಲ ಎಂಬುದು ಆಯಾ ವಾರ್ ರೂಮ್ ನ ಸಿಬ್ಬಂದಿ ಬಳಿ ಮಾಹಿತಿ ಇರುತ್ತದೆ. ಆದರೂ ಕೆಲವೆಡೆ ಬೆಡ್ ಸಿಗುತ್ತಿಲ್ಲ
ವಂಚನೆ ವಿಧಾನ -1
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿ ಮತ್ತು ಆಸ್ಪತ್ರೆಗಳಲ್ಲಿನ ಮೆಡಿಕಲ್ ಸ್ಟೋರ್‌ಗಳಲ್ಲಿರುವ ಕೆಲಸಗಾರರು ರೋಗಿಯ ಹೆಸರಿನಲ್ಲಿ ಹೆಚ್ಚುವರಿಯಾಗಿ ಔಷಧಿ ಖರೀದಿಸುತ್ತಾರೆ. ಅನಂತರ ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಾರೆ.
ವಂಚನೆ ವಿಧಾನ -2
ಕೊರೊನಾದಿಂದ ಮೃತಪಟ್ಟಿರುವ, ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾದ ರೋಗಿಗಳ ಹೆಸರಿನಲ್ಲಿ ಹೆಚ್ಚುವರಿಯಾಗಿ ಆಸ್ಪತ್ರೆಗಳ ಕೆಲ ನರ್ಸ್ ಅಥವಾ ಸಿಬ್ಬಂದಿ ಔಷಧಿ ತರಿಸಿ ಕೊಳ್ಳುತ್ತಿದ್ದರು. ಅಲ್ಲದೆ, ವೈದ್ಯರು ನಾಲ್ಕು ಅಥವಾ ಆರು ರೆಮ್‌ಡೆಸಿವಿಯರ್ ಕೊಡುವಂತೆ ಸೂಚಿಸಿದರೆ, ಕೆಲ ಸಿಬ್ಬಂದಿ ಒಂದೆರಡು ದಿನಗಳಲ್ಲಿ ಸಾಯುವ ವ್ಯಕ್ತಿಗೆ ಕೊಟ್ಟರೇ ಏನು ಪ್ರಯೋಜನ ಎಂದು ಮೂರು ಅಥವಾ ನಾಲ್ಕು ಕೊಟ್ಟು ಒಂದೆರಡು ಔಷಧಿಯನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಅವುಗಳನ್ನು ಕೆಲ ಸ್ನೇಹಿತರ ಜತೆಗೆ ಬೇರೆ ಬೇರೆ ಆಸ್ಪತ್ರೆಗಳ ಮುಂಭಾಗ ಕೊರೊನಾ ರೋಗಿಗಳ ಸಂಬಂಧಿಕರನ್ನು ಪರಿಚಯಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ.
ವಂಚನೆ ವಿಧಾನ -3
ಔಷಧಿ ಮಾರಾಟ ಕಂಪನಿಯ ಪ್ರತಿನಿಧಿಗಳು ಸಹ ಮೆಡಿಕಲ್ ಸ್ಟೋರ್ ಅಥವಾ ಕಾಳಸಂತೆಯ ಮಧ್ಯವರ್ತಿಗಳ ಜತೆ ಸೇರಿಕೊಂಡು ಕೊರೊನಾ ಸೋಂಕಿತರ ಹೆಸರಿನಲ್ಲಿ ಹೆಚ್ಚುವರಿ ಔಷಧಿ ಬೇಕೆಂದು ಕಂಪನಿಗೆ ಆರ್ಡರ್ ಹಾಕಿ ತರಿಸಿಕೊಳ್ಳುತ್ತಿದ್ದಾರೆ. ಮತ್ತೂಂದೆಡೆ ಔಷಧಿ ಕಂಪನಿಗಳು ಕೂಡ ಅಧಿಕ ಲಾಭ ಪಡೆಯಲು ಕಾಳಸಂತೆಯ ಮುಖ್ಯ ಕಿಂಗ್‌ಪಿನ್‌ಗಳಿಗೆ ಬೇರೆ ಬೇರೆ ಹೆಸರಿನಲ್ಲಿ ನೇರವಾಗಿ ರೆಮ್‌ಡೆಸಿವಿಯರ್ ಕಳುಹಿಸುತ್ತಿದ್ದಾರೆ. ಅವರಿಂದ ಶೇ.10-20ರಷ್ಟು ಪಡೆದುಕೊಂಡು, ಇನ್ನುಳಿದ ಲಾಭವನ್ನು ಮಧ್ಯವರ್ತಿಗಳಿಗೆ ನೀಡುತ್ತಿದ್ದಾರೆ. ಇದೀಗ ಇದು ವ್ಯಾಪಕವಾಗಿ ವಿಸ್ತಾರಗೊಂಡಿದೆ.
ವಂಚನೆ ವಿಧಾನ -4
ಕೆಲ ಆಸ್ಪತ್ರೆ ಸಿಬ್ಬಂದಿ ರೆಮ್‌ಡೆಸಿವಿಯರ್ ಖಾಲಿ ಬಾಟಲಿಗೆ ಬೇರೆ ಗ್ಲೂಕೋಸ್ ಔಷಧಿ ಬೆರೆಸಿ ಅದನ್ನು 8-10 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಹೀಗೆ ಪೊಲೀಸರ ತನಿಖೆಯಲ್ಲಿ ದಂಧೆಕೋರರು ನಾನಾ ಮಾರ್ಗದಲ್ಲಿ ರೆಮ್‌ಡೆಸಿವಿಯರ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ವಿಧಾನವನ್ನು ಬಯಲಿ ಗೆಳೆಯುತ್ತಿ ದ್ದಾರೆ. ಆದರೂ ಅವ್ಯಾಹತ ವಾಗಿ ದಂಧೆ ನಡೆಯು ತ್ತಲೇ ಇದೆ. ಆದರೆ, ಇದಕ್ಕೆ ಸೂಕ್ತ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ಹೇಗೆ ನಡೆಯುತ್ತೆ ಬ್ಲಾಕಿಂಗ್?
ಬ್ಲಾಕಿಂಗ್ ಮಾದರಿ-1
ವಾರ್ ರೂಮ್ ನಲ್ಲಿರುವ ಸಿಬ್ಬಂದಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ, ಕೊರೊನಾ ಸೋಂಕು ದೃಢಪಟ್ಟು, ಕೊರೊನಾ ಲಕ್ಷಣಗಳಿಲ್ಲದೆ ಹೋಮ್ ಐಸೋಲೇಷನ್ ಆಗಿರುವವರು, ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ವ್ಯಕ್ತಿಗಳು ಹಾಗೂ ಕೊರೊನಾದಿಂದ ಮೃತಪಟ್ಟವರ ಪಟ್ಟಿ ಸಿದ್ಧಪಡಿಸಿ ಕೊಳ್ಳುತ್ತಿದ್ದರು. ಬಳಿಕ ಅವರ ಹೆಸರಿಗೆ ಬೆಡ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿ ಕೊಳ್ಳುತ್ತಿದ್ದರು. ಅದೇ ಕ್ಷಣದಲ್ಲಿ ಹಣಕ್ಕಾಗಿ ಅದೇ ಬೆಡ್‌ಗಳನ್ನು ಬೇರೆಯವರ ಹೆಸರಿಗೆ ನೋಂದಾಯಿಸುತ್ತಿದ್ದರು.
ಬ್ಲಾಕಿಂಗ್ ಮಾದರಿ-2
ಖಾಸಗಿ ಆಸ್ಪತ್ರೆಯ ಆರೋಗ್ಯ ಮಿತ್ರ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ತಮ್ಮನ್ನು ಸಂಪರ್ಕಿಸುವ ಕೊರೊನಾ ರೋಗಿಗಳ ಸಂಬಂಧಿಕರಿಗೆ ಬೆಡ್ ಕಾಯ್ದಿರಿಸುವುದಾಗಿ ಹೇಳುತ್ತಿದ್ದರು. ಅದಕ್ಕೂ ಮೊದಲು ತಮ್ಮ ಆಸ್ಪತ್ರೆಯಲ್ಲಿ ಖಾಲಿ ಇರುವ ಬೆಡ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳುತ್ತಿದ್ದರು. ಬಳಿಕ ಕೊರೊನಾ ಸೋಂಕಿತರ ಸಂಬಂಧಿಕರಿಂದ ಪ್ರತಿ ಬೆಡ್‌ಗೆ 1-1.50 ಲಕ್ಷ ರೂ. ವರೆಗೆ ಪಡೆದುಕೊಂಡು ಬೆಡ್ ಕೊಡುತ್ತಿದ್ದರು. ಹೀಗಾಗಿ ಅಮಾಯಕ ಮಂದಿಗೆ ಬೆಡ್ ಗಳು ಸಿಗುತ್ತಿರಲಿಲ್ಲ.
ಬ್ಲಾಕಿಂಗ್ ಮಾದರಿ-3
ವಾರ್ ರೂಮ್ ನಲ್ಲಿರುವ ಅಧಿಕಾರಿ-ಸಿಬ್ಬಂದಿ ಬಳಸುವ ಸಾಫ್ಟ್ ವೇರ್, ವೆಬ್ ಸೈಟ್ ನಲ್ಲಿಯೇ ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
60ಕ್ಕೂ ಹೆಚ್ಚು ಮಂದಿ ಬಂಧನ
ನಗರದಲ್ಲಿ ರೆಮ್‌ಡೆಸಿವಿಯರ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸರಿಂದ ಇದುವರೆಗೂ ನಗರದಲ್ಲಿ 60ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಆಕ್ಸಿಜನ್ ಮಾರಾಟ ಮಾಡಿದ ಒಬ್ಬನನ್ನು ಬಂಧಿಸಲಾಗಿದೆ. ಜತೆಗೆ ಬೆಡ್ ಬ್ಲಾಕಿಂಗ್ ನಲ್ಲಿ ಇಬ್ಬರು ವೈದ್ಯರು ಸೇರಿ ನಾಲ್ವರ ಬಂಧಿಸಲಾಗಿದೆ. 17 ಮಂದಿ ಅಮಾನತು ಮಾಡಲಾಗಿದೆ. ನಕಲಿ ಕೊರೊನಾ ವರದಿ ಕೊಡುತ್ತಿದ್ದ ಐವರನ್ನು ಬಂಧಿಸಲಾಗಿದೆ.
ರೆಮ್ ಡೆಸಿವಿಯರ್, ಬೆಡ್ ಬ್ಲಾಕಿಂಗ್, ಆಕ್ಲಿಜನ್ ಅನ್ನು ಅಕ್ರಮವಾಗಿ ಮಾರಾಟದ ಬಗ್ಗೆ ಮಾಹಿತಿ ಇದ್ದರೇ ಸಾರ್ವಜನಿಕರು ಸ್ಥಳೀಯ ಪೊಲೀಸರು ಅಥವಾ ಸಿಸಿಬಿಗೆ ಮಾಹಿತಿ ನೀಡಿ.
- ಸಂದೀಪ್ ಪಾಟೀಲ್, ಜಂಟಿ ಪೊಲೀಸ್ ಆಯುಕ್ತ, ಸಿಸಿಬಿ