Advertisement

Covid:ಆತಂಕ ಬೇಡ ಆದರೆ ಎಚ್ಚರಿಕೆ ಇರಲಿ

11:11 PM Dec 25, 2023 | Team Udayavani |

ರಾಜ್ಯದಲ್ಲಿ ಕೋವಿಡ್‌ ಮತ್ತೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಸೋಂಕು ಪ್ರಕರಣಗಳ ಸಂಖ್ಯೆ ಮೂರಂಕಿ ತಲುಪಿದೆ. ಈ ಮಧ್ಯೆ ರೂಪಾಂತರಿ ತಳಿ ಜೆಎನ್‌1 ಸೋಂಕು ಇರುವುದು ಕೂಡ ದೃಢಪಟ್ಟಿದೆ. ಇದೇ ವೇಳೆ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬೆಂಗಳೂರು ಸೇರಿದಂತೆ ಮಹಾನಗರಗಳು ಮತ್ತು ನಗರಗಳು ಸಜ್ಜಾಗುತ್ತಿವೆ. ಇಂತಹ ಸಂದರ್ಭದಲ್ಲಿ ಆತಂಕಕ್ಕೊಳಗಾಗುವುದಕ್ಕಿಂತ ಜಾಗರೂಕತೆ ಆವಶ್ಯಕತೆ ಹೆಚ್ಚಿದೆ.

Advertisement

ಕೋವಿಡ್‌ ನಮಗೆ ಹೊಸದಲ್ಲ; ಅದರ ತೀವ್ರತೆ ಮತ್ತು ಪರಿಣಾಮಗಳನ್ನು ಎದುರಿಸಿದ ಅನುಭವ ಇದೆ. ಕೊರೊನಾ ವೈರಸ್‌ ಬಂದುಹೋದ ಮೇಲೆ ಒಮಿಕ್ರಾನ್‌ ಸೇರಿದಂತೆ ಹಲವು ರೂಪಾಂತರಿ ತಳಿಗಳೂ ನಮಗೇ ಅರಿವಿಲ್ಲದಂತೆ ಬಂದುಹೋಗಿವೆ. ಈಗ ಅದರ ಮುಂದುವರಿದ ಭಾಗವಾಗಿ ಜೆಎನ್‌1 ತಳಿ ಪತ್ತೆಯಾಗಿದೆ. ಆದಾಗ್ಯೂ ಅನುಭವದಿಂದ ಪಾಠ ಕಲಿತಂತಿಲ್ಲ. ಉದಾಸೀನ ಈಗಲೂ ಮುಂದುವರಿದಿದೆ. ಸಭೆ-ಸಮಾರಂಭಗಳು ಸೇರಿದಂತೆ ಹೆಚ್ಚು ಜನದಟ್ಟಣೆ ಇರುವ ಕಡೆಗಳಲ್ಲಿ 60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸುವುದು ಸೂಕ್ತ ಎಂದು ಸರಕಾರ ಹೇಳಿದೆ. ಆದರೆ ಅದನ್ನು ಅನುಸರಿಸುತ್ತಿರುವವರ ಸಂಖ್ಯೆ ಈಗಲೂ ತುಂಬಾ ವಿರಳ.
ವಾರದ ಹಿಂದಷ್ಟೇ ನೆರೆಯ ಕೇರಳಲ್ಲಿ ಕಾಣಿಸಿಕೊಂಡಿದ್ದ ಈ ತಳಿಯ ಸೋಂಕು ಪ್ರಕರಣಗಳು ಆಗಲೇ ರಾಜ್ಯಕ್ಕೆ ಕಾಲಿಟ್ಟಿವೆ. ತಜ್ಞರ ಪ್ರಕಾರ ಇದು ಅಪಾಯಕಾರಿ ಆಗಿಲ್ಲದಿರಬಹುದು. ಆದರೆ ಸೋಂಕಿನ ವೇಗ ತೀವ್ರ ಗತಿಯಲ್ಲಿದೆ ಎನ್ನಲಾಗುತ್ತಿದೆ. ಈ ನಡುವೆ ಕೋವಿಡ್‌ನಿಂದ ಬಳಲುತ್ತಿದ್ದ ಇಬ್ಬರು ಈಚೆಗೆ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತ ಸರಕಾರ ಸೋಂಕು ಪರೀಕ್ಷೆಗಳನ್ನು ಹೆಚ್ಚಿಸಿದೆ. ಹೊರರಾಜ್ಯಗಳಿಂದ ಬರುವ ಅದರಲ್ಲೂ ವಿಶೇಷವಾಗಿ ತಮಿಳುನಾಡು, ಕೇರಳದಿಂದ ಬರುವವರ ಮೇಲೆ ವಿಶೇಷ ನಿಗಾ ಇಟ್ಟಿದ್ದು, ಸ್ಕ್ರೀನಿಂಗ್‌ಗೆ ಒಳಪಡಿಸುತ್ತಿದೆ. ಸೋಂಕಿನ ಲಕ್ಷಣಗಳು ಕಂಡುಬಂದರೆ, ಪರೀಕ್ಷೆಗೆ ಸೂಚಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ 344 ಸಕ್ರಿಯ ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜನ್‌ ಒಳಗೊಂಡಂತೆ ಪೂರ್ವಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.

ಸೋಂಕು ಪ್ರಕರಣಗಳ ಹಿನ್ನೋಟ ನೋಡಿದರೆ, ಸಾಮಾನ್ಯವಾಗಿ ವರ್ಷಾಂತ್ಯಕ್ಕೆ ಕೋವಿಡ್‌ ವ್ಯಾಪಕವಾಗಿ ಹರಡುವುದನ್ನು ಕಾಣಬಹುದು. ಈಗ ಮತ್ತೂಂದು ವರ್ಷಾಂತ್ಯಕ್ಕೆ ದಿನಗಣನೆ ಶುರುವಾಗಿದ್ದು, ಹೊಸ ವರ್ಷ ಬರಮಾಡಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಯಾವುದೇ ಸಂಭ್ರಮಾಚರಣೆಗೆ ಸರಕಾರವೂ ನಿರ್ಬಂಧ ವಿಧಿಸಿಲ್ಲ. ಆದರೆ ಮುನ್ನೆಚ್ಚರಿಕೆ ಇರಲಿ ಎಂದು ಸೂಚ್ಯವಾಗಿ ಹೇಳಿದೆ. ಆ ಎಚ್ಚರಿಕೆ ಯಾವಾಗಲೂ ಜಾಗೃತವಾಗಿರಬೇಕು. ಕೋವಿಡ್‌ ನಿಯಂತ್ರಣಕ್ಕೆ ಪರಿಣಾಮಕಾರಿ ಅಸ್ತ್ರವೆಂದರೆ ಅದು- ಮಾಸ್ಕ್. ಇದನ್ನು ಮನಗಾಣುವುದರ ಜತೆಗೆ ಅನುಸರಿಸಬೇಕು. ಧಾರ್ಮಿಕ ಕ್ಷೇತ್ರಗಳು, ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವವರು ಮಾಸ್ಕ್ ಧರಿಸಬೇಕು. ಲಕ್ಷಣಗಳು ಕಂಡುಬಂದರೆ, ತತ್‌ಕ್ಷಣ ಸ್ವಯಂ ಐಸೋಲೇಟ್‌ ಆಗಿ ಸೋಂಕಿಗೆ ಅವಕಾಶ ನೀಡಬಾರದು.

ಅದೇ ರೀತಿ ಸರಕಾರ ಕೂಡ ಯುದ್ಧದ ಸಂದರ್ಭದಲ್ಲಿ ಶಸ್ತ್ರಾಭ್ಯಾಸಕ್ಕೆ ಮುಂದಾಗದೆ, ಸಚಿವ ಸಂಪುಟದ ಉಪಸಮಿತಿಯು ನಿರಂತರವಾಗಿ ಸೋಂಕಿನ ಮೇಲೆ ನಿಗಾ ಇಟ್ಟು, ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕೋವಿಡ್‌ 1 ಮತ್ತು 2ನೇ ಅಲೆಗಳು ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಅದರಿಂದ ಈಗಷ್ಟೇ ಎಚ್ಚೆತ್ತುಕೊಳ್ಳಲಾಗುತ್ತಿದೆ. ಅದು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next