Advertisement

ಕೋವಿಡ್ ಆತಂಕ ಬೇಡ, ಜಾಗೃತಿ ಇರಲಿ

08:06 AM Jun 05, 2020 | Suhan S |

ಶಿವಮೊಗ್ಗ: ಕೋವಿಡ್ ಸೋಂಕಿನ ಕುರಿತು ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ. ಬದಲಾಗಿ ಎಚ್ಚರಿಕೆಯಿಂದಿರಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಹೇಳಿದರು.

Advertisement

ತಮ್ಮ ಕಚೇರಿಯಲ್ಲಿ ಕೋವಿಡ್ ಜನಜಾಗೃತಿಗಾಗಿ ಜಿಲ್ಲಾಡಳಿತ, ನೆಹರೂ ಯುವ ಕೇಂದ್ರ ಹಾಗೂ ಸ್ಪಂದನ ಟ್ರಸ್ಟ್‌ ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಿಜಿಟಲ್‌ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಕರೊಂದಿಗೆ ಅವರು ಸಮಾಲೋಚನೆ ನಡೆಸಿದರು.

ಇತ್ತೀಚೆಗೆ ಸರ್ಕಾರವು ಪ್ರಕಟಿಸಿದ 4ನೇ ಮಾರ್ಗಸೂಚಿಯಂತೆ ಎಲ್ಲರೂ ತಮ್ಮ ಹಾಗೂ ಇತರರ ಸುರಕ್ಷತೆಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಬದುಕುವುದನ್ನು ರೂಢಿಸಿಕೊಳ್ಳಬೇಕೆಂದರು. ಕೆಮ್ಮು, ನೆಗಡಿ, ಜ್ವರ ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳು ಸಮೀಪದ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಕ್ಷೇಮ ಎಂದ ಅವರು, ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರವು ಹೊರಡಿಸಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಕೈಗಳನ್ನು ನಿಯಮಿತವಾಗಿ ತೊಳೆಯುವುದನ್ನು ರೂಢಿಸಿಕೊಳ್ಳಬೇಕು. ಈಗಾಗಲೇ ಸೋಂಕಿಗೆ ಒಳಗಾಗಿ ಗುಣಮುಖರಾಗಿ ಹೊರಬಂದವರಿಗೆ ಸಾಮಾಜಿಕವಾಗಿ ದೊರೆಯಬಹುದಾದ ಎಲ್ಲಾ ರೀತಿಯ ಸ್ಥಾನಮಾನ ಗೌರವಗಳನ್ನು ನೀಡಿ, ಅವರ ನೆಮ್ಮದಿ ಬದುಕಿಗಾಗಿ ಸಹಕರಿಸುವಂತೆ ಅವರು ಮನವಿ ಮಾಡಿದರು.

ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಉಲ್ಲಾಸ್‌ ಟಿ.ಕೆ. ಮಾತನಾಡಿ, ಸಾರ್ವಜನಿಕರು ವಿಶೇಷವಾಗಿ ಮಕ್ಕಳು ಮತ್ತು ವಯೋವೃದ್ಧರು ಅನಗತ್ಯವಾಗಿ ಮನೆಯಿಂದ ಹೊರಹೋಗುವುದನ್ನು ನಿಯಂತ್ರಿಸಬೇಕು. ಸರ್ಕಾರವು ಹೊರಡಿಸಿರುವ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಸೋಂಕಿನೊಂದಿಗೆ ಬದುಕಲೇಬೇಕಾದ ಅನಿವಾರ್ಯತೆ ಇರುವುದರಿಂದ ಎಚ್ಚರಿಕೆಯ ಕ್ರಮಗಳನ್ನುಅನುಸರಿಸಲೆಬೇಕೆಂದರು. ಸಂವಾದದಲ್ಲಿ ಅಸಂಖ್ಯಾತ ಯುವಕರು,ಸ್ಪಂದನಾ ಸಂಸ್ಥೆಯ ಸ್ವಯಂಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next