ಹಾವೇರಿ: ನೆರೆ ಪರಿಹಾರ ಹಂಚಿಕೆಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಕೋಟ್ಯಂತರ ರೂ.ಗಳ ಭ್ರಷ್ಟಾಚಾರದ ತನಿಖೆ ಕೋವಿಡ್ ಬಿರುಗಾಳಿಯಲ್ಲಿ ತೇಲಿ ಹೋಗುವ ಶಂಕೆ ವ್ಯಕ್ತವಾಗಿದ್ದು, ಭ್ರಷ್ಟ ಅಧಿಕಾರಿ, ನೌಕರರಿಗೆ ಕೋವಿಡ್ ಪರೋಕ್ಷವಾಗಿ ರಕ್ಷಣೆ ನೀಡಿತೆ ಎಂಬ ಚರ್ಚೆ ವ್ಯಾಪಕವಾಗಿ ನಡೆದಿದೆ.
ಕಳೆದ ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಸಂಭವಿಸಿದ ನೆರೆ ಮತ್ತು ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ಕೊಡಲು ಸರ್ಕಾರ ಬಿಡುಗಡೆ ಮಾಡಿದ್ದ ಹಣದಲ್ಲಿ 55 ಕೋಟಿ ರೂ.ಗಳಿಗೂ ಅಧಿಕ ಹಣ ಅಧಿಕಾರಿ, ನೌಕರರ ದುರಾಸೆಯಿಂದ ರೈತರ ಕೈ ಸೇರದೇ ಅನ್ಯರ ಪಾಲಾಗಿತ್ತು. ಯಾರಧ್ದೋ ಪಹಣಿ, ಇನ್ಯಾರಧ್ದೋ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಬ್ರಹ್ಮಾಂಡ ಭ್ರಷ್ಟಾಚಾರವೇ ಎಸಗಲಾಗಿತ್ತು. ಜಿಲ್ಲಾಡಳಿತ ಈ ಅಕ್ರಮದ ತನಿಖೆಯನ್ನು ಪೊಲೀಸ್ ಇಲಾಖೆಗೆ ವಹಿಸಿತ್ತು. ಆದರೆ, ಈ ತನಿಖೆಗೆ ಕೊರೊನಾ ಲಾಕ್ ಡೌನ್‌ನಿಂದ ಹಿನ್ನಡೆಯಾಗಿದೆ. ಲಾಕ್‌ಡೌನ್ ಮುಗಿದ ಬಳಿಕವಾದರೂ ಈ ಭ್ರಷ್ಟಾಚಾರ ಪ್ರಕರಣ ಜೀವ ಪಡೆಯುತ್ತದೆಯೋ ಅಥವಾ ಅಲ್ಲಿಗೇ ಮುಚ್ಚಿ ಹೋಗುತ್ತದೆಯೋ ಎಂಬ ಸಂಶಯ ರೈತರಲ್ಲಿ ಮೂಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪರಿಹಾರ ನಿಧಿ ಮಾರ್ಗಸೂಚಿ ಪ್ರಕಾರ ಕೃಷಿ, ತೋಟಗಾರಿಕೆ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಫಾರ್‌ಂ-1ನ್ನು ಭರ್ತಿ ಮಾಡಿಕೊಂಡು ಜಂಟಿಯಾಗಿ ಮೂವರು ಸಹಿ ಮಾಡಿ ಬಳಿಕವಷ್ಟೇ ಪರಿಹಾರ ಹಾಕಬೇಕಿತ್ತು. ಆದರೆ, ಜಂಟಿ ಸಮೀಕ್ಷೆಯ ಅಧಿಕಾರಿಗಳು ಫಾರಂ ಭರ್ತಿ ಮಾಡದೇ ಬೇಕಾಬಿಟ್ಟಿ ಲಾಗಿನ್ ಆಗಿ ಹಣ ಹಂಚಿಕೆ ಮಾಡಿದ್ದರು. ಇದರಿಂದ ಸಾವಿರಾರು ಅರ್ಹ ರೈತರು ಪರಿಹಾರ ವಂಚಿತರಾಗಿದ್ದಾರೆ.
ಯಾರಧ್ದೋ ದುಡ್ಡು ಇನ್ಯಾರಿಗೋ: ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ 3,71,459 ಹೆಕ್ಟೇರ್ ಪ್ರದೇಶದಲ್ಲಿ 3,10,537 ಹೆಕ್ಟೇರ್ ಪ್ರದೇಶ ಅಂದರೆ ಶೇ. 83.60ರಷ್ಟು ಹಾನಿಯಾಗಿದೆ ಎಂಬ ಸಮೀಕ್ಷಾ ವರದಿ ಆಧರಿಸಿ ಸರ್ಕಾರ 202 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿತ್ತು. ಸರ್ಕಾರದ ಮಾರ್ಗಸೂಚಿ ಪ್ರಕಾರ ರೈತರ ಬೆಳೆ ಎಷ್ಟೇ ಹಾನಿಯಾಗಿದ್ದರೂ ಕೇವಲ ಎರಡು ಹೆಕ್ಟೇರ್ ಪ್ರದೇಶದ ಹಾನಿಗೆ ಪರಿಹಾರ ಕೊಡಲು ಮಾತ್ರ ಅವಕಾಶವಿದೆ. ಆದರೆ, ಜಿಲ್ಲೆಯಲ್ಲಿ ಎರಡು ಹೆಕ್ಟೇರ್ ಗಿಂತಲೂ ಹೆಚ್ಚಿರುವ 6,501 ಫಲಾನುಭವಿಗಳಿಗೆ ಬೇರೆ ಬೇರೆ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಮಾಹಿತಿ ಲಗತ್ತಿಸಿ 18,48,08,974 ರೂ. ಪರಿಹಾರ ವಿತರಣೆ ಮಾಡಿರುವುದು ಪತ್ತೆಯಾಗಿತ್ತು. ಗ್ರಾಮಲೆಕ್ಕಿಗರು, ತಹಶೀಲ್ದಾರರರು ದಾಖಲೆ ಸರಿಯಾಗಿ ಪರಿಶೀಲಿಸದೆ36,49,29,342 ರೂ. ಹಣ ಪಾವತಿಸಿರುವುದು ಸಹ ಬೆಳಕಿಗೆ ಬಂದಿತ್ತು. ತನಿಖೆಯಿಂದ ಇನ್ನೂ ಹಲವು
ಪ್ರಕರಣಗಳು ಹೊರಬೀಳಬೇಕಿತ್ತು. ಆದರೆ, ಕೋವಿಡ್ ಲಾಕ್‌ಡೌನ್‌ನಿಂದಾಗಿ ತನಿಖೆ ನಿಧಾನಗೊಂಡು ಹಲವು “ಕುಳ’ಗಳು ಸದ್ಯಕ್ಕೆ ತಪ್ಪಿಸಿಕೊಂಡಿವೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ: ಪರಿಹಾರದ ಹಣವನ್ನು ಯಾರ್ಯಾರಧ್ದೋ ಖಾತೆಗೆ ಹಾಕಿದ್ದ ಜಿಲ್ಲೆಯ ನಾಲ್ವರು ಗ್ರಾಮ ಲೆಕ್ಕಿಗರು, ಮೂವರು ಗ್ರಾಮ ಸಹಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ರಾಣಿಬೆನ್ನೂರ ತಾಲೂಕಿನಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಕರೇಕಟ್ಟಿ ಗ್ರಾಮಕ್ಕೆ ಹೋಗಿರುವ ಗ್ರಾಮಲೆಕ್ಕಿಗ ಇಲ್ಲಿಯ ಹಳೇ ಲಾಗಿನ್ ಬಳಸಿ ಯಾರ್ಯಾರಿಗೋ ಹಣ ವರ್ಗಾಯಿಸಿದ ದೊಡ್ಡ ಅಕ್ರಮದ ತನಿಖೆ ಪೊಲೀಸರಿಗೆ ವಹಿಸಲಾಗಿತ್ತು.
ಇದೆಲ್ಲವೂ ಲಾಕ್‌ಡೌನ್‌ಗಿಂತ ಮೊದಲೇ ಆಗಿತ್ತು. ನಂತರ ಇಡೀ ಪೊಲೀಸ್ ಇಲಾಖೆ ಕೊರೊನಾ ಲಾಕ್ ಡೌನ್ ನಿಯಮ ಪಾಲನೆಯಲ್ಲಿ ನಿರತವಾಯಿತು. ಲಾಕ್‌ಡೌನ್ ನಿರ್ಬಂಧ ಸಡಿಲವಾಗುತ್ತಿದ್ದಂತೆ ಈ ಭ್ರಷ್ಟಾಚಾರದ ತನಿಖೆಯೂ ಚುರುಕುಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂಬುದು ರೈತರ ಆಗ್ರಹ.
ನೆರೆ ಪರಿಹಾರ ವಿತರಣೆಯಲ್ಲಿ ಆಗಿರುವ ಅಕ್ರಮ ಕುರಿತು ತನಿಖೆ ಮಾಡಲು ಪೊಲೀಸ್ ಇಲಾಖೆಗೆ ವಹಿಸಲಾಗಿದೆ. ಈಗಾಗಲೇ ಕೆಲವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಲಾಕ್‌ಡೌನ್ ಬಳಿಕ ತನಿಖೆ ಇನ್ನಷ್ಟು ಚುರುಕುಗೊಳ್ಳಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ. –
ಕೃಷ್ಣ ಭಾಜಪೇಯಿ, ಜಿಲ್ಲಾಧಿಕಾರಿ
ನೆರೆ ಪರಿಹಾರ ವಿತರಣೆಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಮೂರು ತಿಂಗಳಾದರೂ ತಪ್ಪಿತಸ್ಥರ ಮೇಲೆ ಕ್ರಮ ಆಗಿಲ್ಲ. ಕೋವಿಡ್ ಲಾಕ್‌ಡೌನ್ ನೆಪವೊಡ್ಡಿ ಈ ಪ್ರಕರಣವನ್ನು ಇಲ್ಲಿಗೇ ಮರೆಮಾಚಲು ಯತ್ನಿಸಿದರೆ ನಾವು ಸುಮ್ಮನಿರುವುದಿಲ್ಲ. ಮುಂದಿನ 15 ದಿನಗಳಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಆಗದಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಆಗಲಿದೆ. –
ರಾಮಣ್ಣ ಕೆಂಚಳ್ಳೇರ, ರೈತ ಮುಖಂಡ
-ಎಚ್.ಕೆ. ನಟರಾಜ