Advertisement
ಪಟ್ಟಣದ ನಿವಾಸಿ 52 ವರ್ಷದ ಮಹಿಳೆಯೊಬ್ಬರು ಕೋವಿಡ್ ನಿಂದ ಬುಧವಾರ ತಡ ರಾತ್ರಿ ಮೃತರಾದರು. ಈ ಹಿನ್ನೆಲೆ ಸಂಬಂಧಿಕರು ಸರಿಯಾದ ಚಿಕಿತ್ಸೆ ನೀಡಿಲ್ಲ, ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಗಿರೀಶ್ ಎಂಬಾತ ಆಕ್ಸಿಜನ್ ಸಿಲಿಂಡರ್ ನಿಂದ ಹಲ್ಲೆಗೆ ಯತ್ನಿಸಿ ಆಸ್ಪತ್ರೆಯ ಕಿಟಕಿಯ ಗಾಜನ್ನು ಒಡೆದು ಹಾಕಿ ಗಲಾಟೆ ಮಾಡಿದ್ದು, ಕಿಟಕಿಗೆ ಹೊಡೆದ ರಭಸಕ್ಕೆ ಗಿರೀಶ್ ಗೆ ಕೈಗೆ ಗಾಜು ಚುಚ್ಚಿ ತೀವ್ರ ಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರಕ್ಕೆ ಕರೆದೋಯ್ಯಲಾಗಿದೆ ಎಂದು ತಿಳಿದು ಬಂದಿದೆ.
Related Articles
Advertisement
ಘಟನೆಯಿಂದ ವೈದ್ಯರು ಆಸ್ಪತ್ರೆಯ ಸಿಬ್ಬಂದಿ ಆತಂಕಗೊಂಡು ಕರ್ತವ್ಯ ನಿರ್ವಹಿಸುವುದಿಲ್ಲ. ನಾವು ಅವರನ್ನು ಆದಷ್ಟು ಉಳಿಸಿಕೊಳ್ಳುವ ಯತ್ನ ಮಾಡಿದ್ದೇವೆ. ಆದರೆ ಇದನ್ನು ತಿಳಿಯದೆ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದರೆ ಹೇಗೆ ನಮಗೆ ರಕ್ಷಣೆ ಇಲ್ಲದ ಮೇಲೆ ಏಕೆ ಕರ್ತವ್ಯ ನಿರ್ವಹಿಸಬೇಕು ಎಂದು ಆಸ್ಪತ್ರೆಯಿಂದ ಹೊರ ನಡೆದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರವಿಶಂಕರ್, ಪೊಲೀಸ್ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ಸ್‍ಪೆಕ್ಟರ್ ರಾಜೇಂದ್ರ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಆಸ್ಪತ್ರೆಯ ಸಿಬ್ಬಂದಿಗಳನ್ನು ಸಮಾಧಾನಪಡಿಸಿದರು. ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ ಹಿನ್ನೆಲೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಘಟನೆ ನಂತರ ಮಹಿಳೆ ಮೃತ ದೇಹವನ್ನು ಅವರ ಜಮೀನಿಗೆ ರವಾನಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರವಿಶಂಕರ್, ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಲು ಹೋರಾಡುತ್ತಿದ್ದಾರೆ. ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಅವರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಕುಟುಂಬಸ್ಥರನ್ನು ಕಳೆದುಕೊಂಡವರಿಗೆ ಅತಿಯಾದ ನೋವಿರುತ್ತದೆ. ಆ ಸಂದರ್ಭದಲ್ಲಿ ಯಾರೂ ಉದ್ರಿಕ್ತರಾಗಿ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಬಾರದು ಎಂದು ತಿಳಿ ಹೇಳಿದರು.
ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿ ಕಿಟಕಿ ಗಾಜುಗಳನ್ನು ಹೊಡೆದು ಹಾಕಿದ ವ್ಯಕ್ತಿ ಕೈಗೆ ತೀವ್ರತರವಾದ ಗಾಯವಾಗಿದ್ದು, ಸದ್ಯ ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಮೇಲೆ ಆಸ್ಪತ್ರೆಯ ಸಿಬ್ಬಂದಿಗಳು ದೂರು ನೀಡಿಲ್ಲ. ದೂರು ನೀಡಿದರೆ ದಾಖಲಿಸಿ ಕ್ರಮ ವಹಿಸಲಾಗುವುದು.
– ಜೆ.ರಾಜೇಂದ್ರ, ಸಬ್ ಇನ್ಸ್ಪೆಕ್ಟರ್