ಹೊಸದಿಲ್ಲಿ: ಇನ್ನು ಮುಂದೆ ಸೋಂಕಿತ ಎಲ್ಲಿಯೇ ಸಾವನ್ನಪ್ಪಿರಲಿ ಹಾಗೂ ಕೊರೊನಾ ಬಂದು, ಇತರ ಯಾವುದೇ ರೋಗಗಳ ಕಾರಣದಿಂದ ಸಾವನ್ನಪ್ಪಿದರೂ, “ಕೊರೊನಾದಿಂದಲೇ ಮೃತಪಟ್ಟಿದ್ದಾರೆ’ ಎಂಬ ಪ್ರಮಾಣಪತ್ರ ಸಿಗಲಿದೆ.
ಕೆಲವು ರಾಜ್ಯ ಸರಕಾರಗಳು ಮೃತಪಟ್ಟವರ ಮಾಹಿತಿಯನ್ನು ಅಡಗಿಸಿ ಇಡುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.
ಸುಮಾರು 6 ರಾಜ್ಯಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಅಡಗಿಸಿ ಇಡಲಾಗಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸುಮಾರು 183 ಪುಟಗಳ ಅಫಿಡವಿಟ್ ಅನ್ನು ಕೇಂದ್ರ ಸರಕಾರ ಸಲ್ಲಿಸಿದೆ. ಇದಷ್ಟೇ ಅಲ್ಲ, ಇಂಥ ಪ್ರಮಾಣ ಪತ್ರ ನೀಡಲು ನಿರಾಕರಿಸುವ ವೈದ್ಯರ ಮೇಲೆ ಕಠಿನ ಕ್ರಮ ತೆಗೆದುಕೊಳ್ಳುವುದಾಗಿಯೂ ಅದು ಹೇಳಿದೆ.
ಸದ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರಿಗೆ ಮಾತ್ರ ಕೊರೊನಾ ಸಾವು ಪ್ರಮಾಣ ಪತ್ರ ನೀಡಲಾಗುತ್ತಿದೆ. ಕೆಲವರು ಕೊರೊನಾದಿಂದಾಗಿಯೇ ಮನೆಯಲ್ಲಿ ಸಾವನ್ನಪ್ಪಿದರೂ, ಕೊರೊನಾದಿಂದಲೇ ಸಾವು ಎಂಬ ಪ್ರಮಾಣ ಪತ್ರ ನೀಡುತ್ತಿರಲಿಲ್ಲ.
4 ಲಕ್ಷ ನೀಡಲು ಅಸಾಧ್ಯ: ಕೊರೊನಾದಿಂದ ಮೃತಪಟ್ಟ ಎಲ್ಲರಿಗೂ 4 ಲಕ್ಷ ರೂ. ಪರಿಹಾರ ನೀಡಲು ಅಸಾಧ್ಯ ಎಂದು ಕೇಂದ್ರ ಹೇಳಿದೆ. 183 ಪುಟಗಳ ಅಫಿಡವಿಟ್ ನಲ್ಲಿ ಈ ಅಂಶವೂ ಸೇರಿದ್ದು, ಕೊರೊನಾ ಪರಿಹಾರ ನೈಸರ್ಗಿಕ ವಿಕೋಪಗಳ ಪರಿಧಿಗೆ ಬರುವುದಿಲ್ಲ ಎಂದಿದೆ. ಭೂಕಂಪ ಅಥವಾ ಪ್ರವಾಹದಂಥ ಸಂದರ್ಭದಲ್ಲಿ ಮಾತ್ರ ಸಂತ್ರಸ್ತರಿಗೆ 4 ಲಕ್ಷ ರೂ.ಗಳ ಪರಿಹಾರ ನೀಡಬಹುದು. ಅದಕ್ಕೆ ಭಾರಿ ಮೊತ್ತ ಅಗತ್ಯವಿದ್ದು, ಸದ್ಯ ಅದನ್ನು ಹೊಂದಿಸುವುದು ಕಷ್ಟವೆಂದಿದೆ ಸರಕಾರ.