Advertisement

ಮಳೆಗಾಲದ ಸಿದ್ಧತೆ ಮೇಲೆ ಕೋವಿಡ್ ಕರಿಛಾಯೆ!

01:21 PM Apr 09, 2020 | Sriram |

ಉಡುಪಿ: ಕೋವಿಡ್ 19ದಿಂದಾಗಿ ಮಳೆಗಾಲಕ್ಕೆ ಮೊದಲು ನಡೆಯಬೇಕಿದ್ದ ವಿವಿಧ ರೀತಿಯ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗಿದೆ. ಜನ ಮತ್ತು ಸಾಮಗ್ರಿ ಎರಡೂ ಸಿಗದೆ ತುರ್ತು ಕೆಲಸ ಮಾಡಲಾಗದೆ ಮಳೆಗಾಲವನ್ನು ಹೇಗೆ ಎದುರಿಸುವುದು ಎಂಬ ಆತಂಕ ಶುರುವಾಗಿದೆ.

Advertisement

ಸಾಮಾನ್ಯವಾಗಿ ಜನರು ಈ ಸಮಯದಲ್ಲಿ ಮುಂದಿನ ಮಳೆಗಾಲಕ್ಕೆ ಸಂಬಂಧಿಸಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಮನೆಯ ಗೋಡೆ, ಮಾಡು ರಿಪೇರಿ ಮಾಡುವುದು. ಸುತ್ತಲಿನ ಪರಿಸರ ಸ್ವತ್ಛಗೊಳಿಸುವುದು ಇತ್ಯಾದಿ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಅದೆಲ್ಲವೂ ನಡೆಯುತ್ತಿಲ್ಲ. ಅದಕ್ಕೆ ಬೇಕಾದ ಕಚ್ಚಾವಸ್ತುಗಳ ಅಂಗಡಿಯೂ ತೆರೆಯುತ್ತಿಲ್ಲ. ಇದರಿಂದ ಕೆಲಸ ಮಾಡುವವರಿಗೆ ಮತ್ತು ಮಾಡಿಸುವವರಿಗೆ ಸಮಸ್ಯೆಯಾಗಿದೆ. ಗ್ರಾಮೀಣ ಪರಿಸರದ ಕೃಷಿ ಕೆಲಸ ಕಾರ್ಯಗಳಿಗೂ ಈಗ ಜನ ಸಿಗುತ್ತಿಲ್ಲ.

ಅಧಿಕಾರಿಗಳೂ ಬ್ಯುಸಿ
ಮಳೆಗಾಲದ ಪೂರ್ವ ಸಿದ್ಧತೆ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ಈ ಸಮಯವನ್ನು ಸಂಪೂರ್ಣ ಸೋಂಕು ತಡೆ ನಿರ್ವಹಣೆಗಾಗಿಯೇ ಮೀಸಲಿಟ್ಟಿದ್ದಾರೆ. ಮಳೆಗಾಲದ ಸಿದ್ಧತೆ ಬಗ್ಗೆ ಅಧಿಕಾರಿಗಳು ಯೋಜನೆ ಹಾಕಿಕೊಂಡಿಲ್ಲ, ಸಾಮಾನ್ಯವಾಗಿ ಎಪ್ರಿಲ್‌-ಮೇ ತಿಂಗಳು ಬಂತೆಂದರೆ ಅಧಿಕಾರಿಗಳು ಮುಂಬರುವ ಜೂನ್‌ ತಿಂಗಳಿನಿಂದ ಶುರುವಾಗುವ ಮಳೆಗಾಲ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಕಳೆದೆರಡು ದಿನಗಳಿಂದ ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆಯೂ ಆಗಿದೆ. ಮತ್ತೆ ಬೇಸಗೆ ಮಳೆ ಅಬ್ಬರಿಸುವ ನಿರೀಕ್ಷೆಯೂ ಇದೆ.

ಅಧಿಕಾರಿಗಳಿಗೆ ಒತ್ತಡ
ಕೃಷಿ ಇಲಾಖೆಯು ರೈತರಿಗೆ ಕೃಷಿ ಸೌಲಭ್ಯ ಕಲ್ಪಿಸಲು ತೊಡಗಿಕೊಂಡರೆ, ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗ ತಡೆಗೆ ಕ್ರಮ ಕೈಗೊಳ್ಳುವಲ್ಲಿ ಮಗ್ನವಾಗಿದೆ. ಇನ್ನೊಂದೆಡೆ ಬಹುತೇಕ ಇಲಾಖೆಗಳ ಸಿಬಂದಿ ಕಚೇರಿಗೆ ಬರಲಾಗದೆ ಮನೆಯಲ್ಲಿಯೇ ಇದ್ದಾರೆ. ಇದರಿಂದ ಬಹುತೇಕ ಕೆಲಸ ಕಾರ್ಯ ಗಳು ಸ್ಥಗಿತವಾಗಿವೆ.

ಏನೇನು ಆಗಬೇಕು?
ಸ್ಥಳೀಯ ಸಂಸ್ಥೆಗಳು ಗ್ರಾಮ, ನಗರದ ಗಟಾರಗಳನ್ನು ಸ್ವತ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕಿದೆ. ರಸ್ತೆ ಬದಿ ಚರಂಡಿ ನಿರ್ಮಾಣ, ಹಳೆಯ ಮರ, ಬೀಳಬಹುದಾದ ಮರಗಳನ್ನು ಗುರುತಿಸಿ ಅವುಗಳನ್ನು ತೆಗೆಸಲು ಕ್ರಮ ಕೈಗೊಳ್ಳಬೇಕು. ತಾಲೂಕಾಡಳಿತಗಳು ನೆರೆ ಬರಬಹುದಾದ ಗ್ರಾಮಗಳಲ್ಲಿ ಕೈಗೊಳ್ಳಬಹುದಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಆಲೋಚಿಸಬೇಕು. ಮಳೆಗಾಲ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ತೆರೆಯುವುದು ಸೇರಿದಂತೆ ಇನ್ನಿತರ ಕ್ರಮಗಳ ಬಗ್ಗೆ ಯೋಜನೆ ಮಾಡಿಕೊಳ್ಳಬೇಕಿದೆ.

Advertisement

ಸಿದ್ದತೆ ಕುರಿತ ಸೂಚನೆ
ಮುಂಗಾರು ಸಿದ್ಧತೆ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಎರಡು ಸುತ್ತಿನ ಸಭೆ ನಡೆಸಿದ್ದೇವೆ. ಮಳೆಗಾಲಕ್ಕೆ ಏನೆಲ್ಲ ಸಿದ್ಧತೆಗಳನ್ನು ತಮ್ಮ ವ್ಯಾಪ್ತಿಯಲ್ಲಿ ನಡೆಸಬೇಕು ಅನ್ನುವ ಬಗ್ಗೆ ಸಂಬಂದಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಜಿ. ಜಗದೀಶ್‌
ಜಿಲ್ಲಾಧಿಕಾರಿ ಉಡುಪಿ.

ಸಾಮಗ್ರಿ ಸಿಗದೆ ಬಾಕಿ
ಹಿಂದಿನ ವರ್ಷ ಮನೆ ದುರಸ್ತಿ ಪಡಿಸಿರಲಿಲ್ಲ. ಈ ಬಾರಿ ಮಾಡಬೇಕು ಅಂದುಕೊಂಡಿದ್ದೆವು. ಕೂಲಿ ಕಾರ್ಮಿಕರು ಸಿಕ್ಕಿದರೂ, ದುರಸ್ತಿಗೆ ಬೇಕಾದ ಆವಶ್ಯಕ ಸಾಮಗ್ರಿ ಸಿಗದೆ ಬಾಕಿಯಾಗಿದೆ.
-ರಮೇಶ್‌ ಬ್ರಹ್ಮಾವರ

Advertisement

Udayavani is now on Telegram. Click here to join our channel and stay updated with the latest news.

Next