Advertisement
4ಕಿಮೀ ದೂರವಿರುವ ಕರ್ಕಿಯ ನನ್ನ ಮನೆಯಿಂದ ಬಂದು ಎರಡು ತಾಸು ತಿಂಡಿ ಸಿದ್ಧತೆ ಮಾಡಿ ನಾಲ್ಕು ತಾಸು ವ್ಯಾಪಾರ ಮಾಡಿ ಸ್ವತ್ಛಮಾಡಲು ಇನ್ನೆರಡು ತಾಸು ಬೇಕು. 10ಗಂಟೆಗೆ ಬಂದ್ ಮಾಡುವುದು ಹೇಗೆ, ಮನೆಗೆ ಹೋಗುವುದು ಹೇಗೆ, ನಾಲ್ಕು ತಾಸು ವ್ಯಾಪಾರಕ್ಕೆ ಅವಕಾಶಮಾಡಿ ಕೊಟ್ಟು ಆಸೆ ಹುಟ್ಟಿಸಿ ವ್ಯಾಪಾರ ಮಾಡದಂಥ ಪರಿಸ್ಥಿತಿ ತಂದಿರುವುದಕ್ಕೆ ಯಾರನ್ನು ಕೇಳ್ಳೋಣ ಎಂದು ಸಣ್ಣ ಹೊಟೆಲ್ ಮಾಲೀಕ ಗೌರೀಶ ನಾಯ್ಕ ಕರ್ಕಿ ಕೇಳಿದ್ದಾರೆ.
Related Articles
Advertisement
ಬೆಳೆದ ರೈತನಿಗೂ ಇಲ್ಲ, ನಮ್ಮಂಥ ಸಣ್ಣಪುಟ್ಟ ವ್ಯಾಪಾರಿಗಳಿಗೂ ಇಲ್ಲ, ಹೊಟ್ಟೆತುಂಬಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಎಲೆ ವ್ಯಾಪಾರಿಗಳಾದ ನಾಗೇಂದ್ರ, ಸುಬ್ರಹ್ಮಣ್ಯ, ತಿಮ್ಮಪ್ಪ ಗೌಡ ಮೊದಲಾದವರು. ಕಲ್ಯಾಣ ಮಂಟಪದಲ್ಲಿ ಮದುವೆ ಬೇಡ, 40ಜನ ಕರೆದು ಮನೆಯಲ್ಲಿ ಮಾಡ್ಕೊಳ್ಳಿ ಅಂತೀರಿ. ಜವಳಿ ಅಂಗಡಿ, ಬಂಗಾರದ ಅಂಗಡಿ ಬಾಗಿಲು ಬಂದ್, ವಾದ್ಯದವರು ಬರುವಂತಿಲ್ಲ, ನೆಂಟರು ಬರಲು ಬಸ್ ಇಲ್ಲ, ಎಲ್ಲ ರದ್ದು ಮಾಡಬಹುದಿತ್ತಲ್ಲ ಅಂದ್ರು ಮಾಗೋಡ ಶಿವರಾಮ ಹೆಗಡೆ. 10 ಗಂಟೆಗೆ ವ್ಯವಹಾರ ಬಂದ್ ಹೇಳಿ ಓಡಿಸ್ತೀರಿ, ಬ್ಯಾಂಕ್ 10 ಗಂಟೆ ನಂತರ ತೆರೆಯುತ್ತದೆ, ಸಿಬ್ಬಂದಿಗಳು ನೊಣ ಹೊಡೆಯುತ್ತಾರೆ, ನಾವು ಹೋಗುವಂತಿಲ್ಲ, ಇದೆಂತ ನಮೂನೆ ಎಂಬುದು ಸುಬ್ರಹ್ಮಣ್ಯ ಶೆಟ್ಟಯವರ ಪ್ರಶ್ನೆ. ಇವತ್ತು ಪೌರೋಹಿತ್ಯಕ್ಕೆ ಹೋಗುವುದು ಹೇಗೆ. 15 ಕಿಮೀ ದೂರ, ಹೋಗುವುದು-ಬರುವುದು ಸೇರಿ 30 ಆಯಿತು. ಬೈಕ್ ತಗೊಂಡು ಹೋಗೋಹಾಗಿಲ್ಲ, ಹೋದ್ರೂ ಭಯ. ಏನು ಮಾಡಲಿ ಎಂದು ಕಟ್ಟೆ ಶಂಕರ ಭಟ್ಟರು ಫೇಸ್ ಬುಕ್‌ನಲ್ಲೇ ಉಪಾಯ ಕೇಳಿದ್ದರು. ಬೆನ್ನಿಗೆ ಅಡಿಕೆಹಾಳೆ ಕಟ್ಟಿಕೊಂಡು ಹೋಗಿ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಹೀಗೆ ಉತ್ತರ ಸಿಗದ ಪ್ರಶ್ನೆಗಳ ಸರಣಿಯೇ ಇದೆ.
ಸೋಮವಾರ ಶಾಸಕ ದಿನಕರ ಶೆಟ್ಟಿ ಹೊನ್ನಾವರ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಬಂದಾಗ ಜೊತೆಯಲ್ಲಿ ತಹಶೀಲ್ದಾರ, ಸಿಪಿಐ ಮೊದಲಾದವರಿದ್ದರು. ಅವರಿಗೂ ಈ ಪ್ರಶ್ನೆ ಎದುರಾಯಿತು, ಉತ್ತರ ಯಾರ ಕೈಲೂ ಇರಲಿಲ್ಲ. ಬೆಳಗ್ಗೆ 4ತಾಸು ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಹೇಳಿ ವ್ಯಾಪಾರ ನಡೆಸಲು ಅಂಗಡಿಗಳಿಗೆ ಬರಲಾಗದಂತೆ ಜನವೂ ಬಂದು ಹೋಗಲು ಅನುಕೂಲವಾಗದಂತೆ ರೆಕ್ಕೆಪುಕ್ಕ ಕತ್ತರಿಸಿದ ಹಕ್ಕಿಯನ್ನಾಗಿಸಿ ನಮ್ಮನ್ನು ಹಾರಿಸಿದ್ದೇಕೆ ಎಂದು ಕೇಳುವ ಪ್ರಶ್ನೆಗೆ ಬಹುಶಃ ಸರ್ಕಾರದ ಕೈಲೂ ಉತ್ತರವಿಲ್ಲ. ಅದಕ್ಕಾಗಿ ಕೋವಿಡ್ ಭೂತವನ್ನು ತೋರಿಸಲಾಗುತ್ತಿದೆ ಅಷ್ಟೇ.