ಕೊಪ್ಪಳ: ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕರ್ಫ್ಯೂ ಜಾರಿ ಮಾಡಿದ್ದರೆ, ಜನರು ಮೊದಲೆರಡು ದಿನ ನಿಯಮ ಪಾಲಿಸಿ ಈಚೆಗೆ ನಿಯಮ ಪಾಲಿಸುವುದನ್ನೇ ಮರೆತಿದ್ದಾರೆ.
ಸಂತೆ ಮಾರುಕಟ್ಟೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಜನರು ಪೊಲೀಸರ ಭಯವನ್ನೂ ಲೆಕ್ಕಿಸದೇ, ಎಲ್ಲೆಂದರಲ್ಲಿ ಸುತ್ತಾಟ ನಡೆಸಿದ್ದು ಕಂಡು ಬಂತು. ನಗರದ ಜವಾಹರ ರಸ್ತೆ, ಗಡಿಯಾರ ಕಂಬ, ಬಸವೇಶ್ವರ ವೃತ್ತ, ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸದ್ದಿಲ್ಲದೇ ಜನ ಸಂಚಾರ ನಡೆಯುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಪ್ರತಿ ದಿನ ಬೆಳಗ್ಗೆ 6 ರಿಂದ 10 ಗಂಟೆವರೆಗೂ ಅವಕಾಶ ನೀಡಿದೆ. ಆದರೆ ಜನರು ಬೆಳಗ್ಗೆ ಅಗತ್ಯ ವಸ್ತುಗಳು ಸಿಗುತ್ತೋ ? ಇಲ್ಲವೋ? ಎನ್ನುವ ಭಯದಲ್ಲಿಯೇ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಹೀಗಾಗಿ ಜನರ ಗುಂಪು ಎಲ್ಲೆಂದರಲ್ಲಿ ಕಂಡು ಬರುತ್ತಿದೆ.
ಮಾರುಕಟ್ಟೆಗಳಲ್ಲಿ ಜನರು ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ಕಾಟಾಚಾರಕ್ಕೆ ಗದ್ದಕ್ಕೆ ಮಾಸ್ಕ್ ಧರಿಸಿ ಎಲ್ಲೆಂದರಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಜನರ ಗುಂಪಿನಲ್ಲಿಯೇ ಮಾಸ್ಕ್ ತೆಗೆದು ಮಾತನಾಡುವ ಪ್ರವೃತ್ತಿ ಜನರಲ್ಲಿ ಕಾಣುತ್ತಿದ್ದೇವೆ.
ಇನ್ನೂ ನಗರದಲ್ಲಿ ಬಟ್ಟೆ ಸೇರಿದಂತೆ ಇತರೆ ಅಂಗಡಿಗಳ ಮಾಲೀಕರು ಪೊಲೀಸರು, ನಗರಸಭೆ ಅಧಿ ಕಾರಿಗಳ ಕಣ್ತಪ್ಪಿಸಿ ವ್ಯಾಪಾರ-ವಹಿವಾಟು ನಡೆಯುತ್ತಿರುವುದನ್ನು ಗಮನಿಸಿದ ನಗರಸಭೆ ಪೌರಾಯುಕ್ತ ಮಂಜುನಾಥ ಕೆಲವು ಅಂಗಡಿಗಳ ಸ್ಥಳ ಪರಿಶೀಲಿಸಿ ಸೀಜ್ ಮಾಡಿದರು.
ಇನ್ನೂ ನಗರದ ಜೆಪಿ ಮಾರುಕಟ್ಟೆಯಲ್ಲಿ ಬೆಳಗ್ಗೆ 10 ಗಂಟೆ ಅವಧಿ ಮೀರಿಯೂ ತರಕಾರಿ ವ್ಯಾಪಾರ-ವಹಿವಾಟು ನಡೆಯುತ್ತಿರುವುದನ್ನು ಗಮನಿಸಿದ ಪೊಲೀಸ್ ಪಡೆ ಎಲ್ಲೆಡೆ ಸುತ್ತಾಟ ನಡೆಸಿ ಬೆತ್ತ ಬೀಸಿ ಅಂಗಡಿ-ಮುಂಗಟ್ಟು ಬಂದ್ ಮಾಡುವಂತೆಯೂ ಸೂಚನೆ ನೀಡಿದರು. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಮ ಕ್ರಮೇಣ ಪಾಲನೆಯಾಗುತ್ತಿಲ್ಲದಿರುವುದೇ ಬೇಸರದ ಸಂಗತಿ. ಜನರು ಜಾಗೃತರಾಗುವ ಜತೆಗೆ ಜಿಲ್ಲಾಡಳಿತ ಮತ್ತಷ್ಟು ಜಾಗೃತಿಯಾಗುವ ಅವಶ್ಯಕತೆ ಇದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.