Advertisement

ಮಂಗಳೂರು, ಉಡುಪಿ: ಕೋವಿಡ್ ಕರ್ಫ್ಯೂ ಜಾರಿ : ಅವಶ್ಯ ಸೇವೆಗಳಿಗೆ ಮಾತ್ರ ಅವಕಾಶ

12:36 AM Apr 11, 2021 | Team Udayavani |

ಮಂಗಳೂರು/ಉಡುಪಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ಉಡುಪಿ, ಮಣಿಪಾಲ ಹಾಗೂ ಮಲ್ಪೆ ಭಾಗದಲ್ಲಿ ಶನಿವಾರ ರಾತ್ರಿಯಿಂದ ಕೊರೊನಾ ರಾತ್ರಿ ಕರ್ಫ್ಯೂ ಹೇರಲಾಗಿದ್ದು, ಎ. 20ರ ವರೆಗೆ ರಾತ್ರಿ 10ರಿಂದ ಮುಂಜಾನೆ 5ರ ವರೆಗೆ ಜಾರಿಯಲ್ಲಿರುತ್ತದೆ.

Advertisement

ವಿಪತ್ತು ನಿರ್ವಹಣೆ ಕಾಯ್ದೆಯ ಅನ್ವಯ ಶನಿವಾರ ರಾತ್ರಿಯಿಂದ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಕೆಲವು ಅತ್ಯಾವಶ್ಯಕ ಸೇವೆಗಳಿಗೆ ಮಾತ್ರ ಅನುಮತಿ ಇರಲಿದ್ದು, ಉಳಿದಂತೆ ಎಲ್ಲ ಸೇವೆಗಳನ್ನು ಹಾಗೂ ಜನ, ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅವಕಾಶ ಇದೆ. ದೂರ ಸಂಪರ್ಕ ಮತ್ತು ಅಂತರ್ಜಾಲ ಸೇವಾ ಸಂಸ್ಥೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳ ಸಿಬಂದಿ ರಾತ್ರಿ ಪಾಳಿಯಲ್ಲಿ ಕಚೇರಿ ಗುರುತಿನ ಚೀಟಿ ಹೊಂದುವ ಮೂಲಕ ಸಂಚರಿಸಬಹುದು ಎಂದವರು ವಿವರಿಸಿದ್ದಾರೆ.

ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತಹ ಎಲ್ಲ ಕಾರ್ಖಾನೆಗಳು, ಕಂಪೆನಿಗಳು ಹಾಗೂ ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಬಸ್‌, ರೈಲು ಹಾಗೂ ವಿಮಾನದಲ್ಲಿ ದೂರ ಪ್ರಯಾಣಕ್ಕೆ ಅನುಮತಿ ಇದ್ದು, ಪ್ರಯಾಣಿಕರು ಅ ಧಿಕೃತ ಟಿಕೆಟ್‌ಗಳನ್ನು ತೋರಿಸಿ ಸಂಚರಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
– ಶಾಸಕ ಭರತ್‌ ಶೆಟ್ಟಿ ಮನವಿ

Advertisement

ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹಾಗೂ ಪೊಲೀಸ್ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದರು, ಅಲ್ಲದೆ ನಾಳೆಯಿಂದ ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ, ಸರಕಾರ ತಂದಿರುವ ಕಾನೂನುಗಳನ್ನು ಪಾಲಿಸಿ ಕೋವಿಡ್ ಸೋಂಕಿನಿಂದ ಮುಕ್ತರಾಗೋಣ ಎಂದು ಹೇಳಿದ್ದಾರೆ.

ಸುರತ್ಕಲ್‌: ಶನಿವಾರದಿಂದ ರಾತ್ರಿ ಕರ್ಫ್ಯೂ ಹೇರಿರುವ ಕಾರಣ ನಿಗದಿಯಾಗಿ ರುವ ಧಾರ್ಮಿಕ ಕಾರ್ಯ ಕ್ರಮಗಳಿಗೆ ಅಡ್ಡಿಯಾಗಲಿದ್ದು, ಕೊರೊನಾ ನಿರ್ಬಂಧ ಗಳನ್ನು ಪಾಲಿಸಿ ಅಂತಹ ಕಾರ್ಯಕ್ರಮ ಗಳನ್ನು ನಡೆಸಲು ಅವಕಾಶ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಹೇಳಿದರು. ರಾತ್ರಿ ಕರ್ಫ್ಯೂ ಕುರಿತಂತೆ ದ.ಕ. ಜಿಲ್ಲಾಧಿಕಾರಿಯವರೊಂದಿಗೆ ಶಾಸಕ ಡಾ| ಭರತ್‌ ಶೆಟ್ಟಿ ಚರ್ಚಿಸಿದರು.

ರಾತ್ರಿ 10 ಗಂಟೆಯೊಳಗೆ ಜಾತ್ರೆ, ಕೋಲ ಮುಗಿಸಿ
ಪೂರ್ವ ನಿರ್ಧರಿತ ಜಾತ್ರೆ, ಕೋಲ ಮತ್ತಿತರ ಕಾರ್ಯಕ್ರಮಗಳನ್ನು ರಾತ್ರಿ 10ರ ವೇಳೆಗೆ ಮುಗಿಸಬೇಕಾಗಿದೆ. ಇನ್ನು ಜಾತ್ರೆ, ಕೋಲ ಇತ್ಯಾದಿಗಳಿಗೆ ವಿನಾಯಿತಿ ನೀಡಬೇಕೆಂದು ಕೋರಿ ಜನಪ್ರತಿನಿಧಿಗಳು ನೀಡಿರುವ ಮನವಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಸಹಕರಿಸಿ
ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿರುವ ನೈಟ್‌ ಕರ್ಫ್ಯೂ ಪರಿಣಾಮಕಾರಿಯಾಗ ಬೇಕಾದರೆ ಸಾರ್ವಜನಿಕರ ಸಹಕಾರವೂ ಅಗತ್ಯ. ಪೊಲೀಸ್‌ ಸಿಬಂದಿ ಕೊರೊನಾ ಮಾರ್ಗಸೂಚಿ ಪಾಲಿಸಿ ಸಾರ್ವಜನಿಕರ ಜತೆ ಉತ್ತಮ ರೀತಿಯಲ್ಲಿ ನಡೆದುಕೊಂಡು ಕರ್ಫ್ಯೂ ಸಮರ್ಪಕವಾಗಿ ಜಾರಿಗೊಳಿಸಲು ಸೂಚಿಸಲಾಗಿದೆ. ಹಾಲು, ತರಕಾರಿ ಖರೀದಿಗೆ ಮುಂಜಾನೆ 5 ಗಂಟೆಯ ಅನಂತರವೇ ಅವಕಾಶ ಮಾಡಿಕೊಡಲಾಗುವುದು. ಅನಗತ್ಯ ಓಡಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. -ಎನ್‌. ಶಶಿಕುಮಾರ್‌, ಪೊಲೀಸ್‌ ಆಯುಕ್ತರು, ಮಂಗಳೂರು

ಉಡುಪಿ-ಮಣಿಪಾಲದ 5 ಕಡೆ ಚೆಕ್‌ಪೋಸ್ಟ್‌
ಉಡುಪಿ: ಕೊರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಕರ್ಫ್ಯೂ ವಿಧಿಸುವ ಬಗ್ಗೆ ಸರಕಾರ ತೀರ್ಮಾನಿಸಿದ್ದು, ಜಿಲ್ಲಾ ಪೊಲೀಸ್‌ ಇಲಾಖೆ ರಾತ್ರಿ ಕರ್ಫ್ಯೂಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಅದರಂತೆ ಮಲ್ಪೆ-ಉಡುಪಿ- ಮಣಿಪಾಲದಲ್ಲಿ ಒಟ್ಟು 5 ಕಡೆ ತಾತ್ಕಾಲಿಕ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ಹೆಚ್ಚುವರಿ ಪೊಲೀಸ್‌ ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಒಬ್ಬರು ಡಿವೈಎಸ್‌ಪಿ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ರಾತ್ರಿ 10ರ ಬಳಿಕ ಜನರು ಓಡಾಡದೇ ಸರಕಾರದ ನಿಯಮವನ್ನು ಪಾಲಿಸಬೇಕು. ನಿಯಮ ಮೀರಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಉಳಿದಂತೆ ಎಂದಿನಂತೆ ರಾತ್ರಿ ಗಸ್ತು, ಬೀಟ್‌ ಪೊಲೀಸ್‌ ವ್ಯವಸ್ಥೆ ನಿಗಾ ಇಡಲಿದೆ ಎಂದು ಎಸ್‌ಪಿ ಎನ್‌.ವಿಷ್ಣುವರ್ಧನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next