Advertisement
ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ. ಅವರಲ್ಲಿ 62 ಸೋಂಕಿತರು ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 17 ಮಂದಿಯಲ್ಲಿ 6 ಮಂದಿ ಐಸಿಯು ಹಾಗೂ 11ಮಂದಿ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ತೀವ್ರತೆ ಕಡಿಮೆಯಿದ್ದರೂ, ಸೋಂಕು ಹರಡುವ ಪ್ರಮಾಣ ಒಮಿಕ್ರಾನ್‌ಗಿಂತ ಅಧಿಕವಾಗಿರಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Related Articles
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನವೆಂಬರ್ ಮೊದಲ ಎರಡು ವಾರದಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದೆ. ಕಳೆದ ಆಗಸ್ಟ್ ಅಂತ್ಯಕ್ಕೆ ದಿನವೊಂದಕ್ಕೆ 2,600 ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಕೇವಲ ಒಂದರಿಂದ 3 ಪ್ರಕರಣಗಳು ವರದಿಯಾಗುತ್ತಿತ್ತು. ಆದರೆ ನ. 4 ರಿಂದ 10ರ ವರೆಗೆ 2,307 ಮಾದರಿಯನ್ನು ಪರೀಕ್ಷಿಸಿದಾಗ, 42 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ನ. 11ರಿಂದ 17ರ ವರೆಗೆ 2,619 ಮಂದಿಯನ್ನು ಪರೀಕ್ಷಿಸಿದ್ದು 81 ಮಂದಿಯಲ್ಲಿ ಸೋಂಕು ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ 44 ಪಾಸಿಟಿವ್ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ಕಣ್ಗಾವಲು ಪಡೆ ಬಿಡುಗಡೆಗೊಳಿಸಿ ವರದಿ ದೃಢಪಡಿಸಿದೆ.
Advertisement
ತುರ್ತು ಕೋವಿಡ್ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮಕ್ಕೆ ಸೂಚನೆ
ಕೇರಳದಲ್ಲಿ ಕೊರೊನಾ ಉಪತಳಿ ಜೆಎನ್-1ಗೆ ನಾಲ್ವರು ಸಾವಿಗೀಡಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಹಲವು ಮುಂಜಾಗ್ರತ ಕ್ರಮಗಳ ಜತೆಗೆ ರಾಜ್ಯದಲ್ಲಿ ಬುಧವಾರದಿಂದಲೇ ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸಲು ಮುಂದಾಗಿದೆ.
ಬೆಂಗಳೂರು ನಗರ ಹಾಗೂ ರಾಜ್ಯಕ್ಕೆ ಪ್ರತ್ಯೇಕವಾಗಿ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಮುಂದಿನ 2 ದಿನದಲ್ಲಿ 500ರಿಂದ 1000 ಮಾದರಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಿದೆ. ಮುಂದಿನ ಒಂದು ವಾರದೊಳಗೆ ಕನಿಷ್ಠ 5,000 ಮಾದರಿಯನ್ನು ಪರೀಕ್ಷೆ ಮಾಡುವ ಗುರಿ ಇದೆ. ವಿಶೇಷವಾಗಿ ಬೇರೆ ರಾಜ್ಯದ ಗಡಿಯನ್ನು ಹೊಂದಿಕೊಂಡಿರುವ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿ ಪ್ರತೀ ದಿನ 5,000 ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಿದೆ. ಇದರಿಂದ ಮುಂದಿನ ಶುಕ್ರವಾರದೊಳಗೆ ಪ್ರಕರಣಗಳ ಹರಡುವಿಕೆ ವೇಗವನ್ನು ಅಂದಾಜಿಸಲು ಸಾಧ್ಯವಿದೆ ಎನ್ನುವುದು ಇಲಾಖೆ ಲೆಕ್ಕಾಚಾರ.
ಸರ್ವೇಕ್ಷಣೆ ಕಣ್ಗಾವಲುಕೇಂದ್ರ ಸರಕಾರದ ಸೂಚನೆಯಂತೆ ಕೇರಳ ಹಾಗೂ ತಮಿಳುನಾಡಿಗೆ ಗಡಿ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಸರ್ವೇಕ್ಷಣೆಯನ್ನು ಹೆಚ್ಚಿಸುವುದರ ಜತೆಗೆ ಕೋವಿಡ್ ಪರೀಕ್ಷೆ ಹೆಚ್ಚಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಹೊರ ರಾಜ್ಯಗಳಿಂದ ಬಂದವರಲ್ಲಿ ಕೋವಿಡ್ ಲಕ್ಷಣಗಳಿದ್ದರೆ ಕಡ್ಡಾಯವಾಗಿ ಟೆಸ್ಟಿಂಗ್, ಸರಕಾರಿ, ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ದಾಖಲಾದ ಹೃದಯ ಸಂಬಂಧಿ, ಸಾರಿ ಹಾಗೂ ಐಎಲ್‌ಐ ಪ್ರಕರಣಗಳಲ್ಲಿ ಕಡ್ಡಾಯವಾಗಿ ರೋಗಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಿದೆ. ಜಿನೋಮ್ ಸಿಕ್ವೆನ್ಸಿಂಗ್
ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೋವಿಡ್ ಲಕ್ಷಣಗಳಿರುವವರಿಗೆ, ಗುಂಪು-ಗುಂಪಾಗಿ ಪಾಸಿಟಿವ್ ವರದಿಯಾಗುವ ಪ್ರದೇಶಗಳ, ಮೃತಪಟ್ಟ ಸೋಂಕಿತ ವ್ಯಕ್ತಿ, ತೀವ್ರ ಸ್ವರೂಪದ ರೋಗಲಕ್ಷಣಗಳನ್ನು ಹೊಂದಿರುವವರು, ಸಾರಿ ಪ್ರಕರಣಗಳು, ದೀರ್ಘ ಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರು ಹಾಗೂ ಎರಡು ಡೋಸ್ ಲಸಿಕೆ ಪಡೆದಿರುವ ಸೋಂಕಿತರ ಮಾದರಿಗಳನ್ನು ಹೋಲ್ ಜೀನೋಮ್ ಸಿಕ್ವೆನ್ಸಿಂಗ್ ಕಳುಹಿಸುವುದು ಕಡ್ಡಾಯ ಮಾಡಿದೆ. ಆಸ್ಪತ್ರೆಗಳ ಸಿದ್ಧತೆಗೆ ಸೂಚನೆ
ಆರೋಗ್ಯ ಇಲಾಖೆ ರಾಜ್ಯಾದ್ಯಂತ ಅಗತ್ಯ ಆರ್‌ಟಿಪಿಸಿಆರ್ ಟೆಸ್ಟಿಂಗ್ ಕಿಟ್ ಹಾಗೂ ವೈರಲ್ ಟ್ರಾನ್ಸ್ ಪೋರ್ಟ್ ಮಿಡಿಯಾ ಸರಬರಾಜು, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಔಷಧ, ಆಕ್ಸಿಜನ್, ಬೆಡ್ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದೆ. ಜಿಲ್ಲೆ, ತಾಲೂಕು, ಆಸ್ಪತ್ರೆಗಳಲ್ಲಿನ ಐಸಿಯು ಉಪಕರಣ, ಆಕ್ಸಿಜನ್ ಸಿಲಿಂಡರ್, ಪಿಎಸ್‌ಎ ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಷಿಜನ್ ಘಟಕಗಳ ವಾಸ್ತವ ವರದಿ ಹಾಗೂ ತಪಾಸಣೆ, ಅಗತ್ಯವಿರುವ ಕಡೆ ಯಂತ್ರೋಕರಣಗಳನ್ನು ದುರಸ್ತಿಗೊಳಿಸುವುದು ಸೇರಿದಂತೆ ತುರ್ತು ಕೋವಿಡ್ ಪರಿಸ್ಥಿತಿ ನಿಭಾಯಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಂಡ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.