ಮಂಗಳೂರು: ಕೋವಿಡ್ ಸೋಂಕಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ ಹೆಚ್ಚಳದ ಆತಂಕ ಎದುರಾಗಿದ್ದರೂ ಕೋವಿಡ್ ನಿಯಂತ್ರಣ ಸಂಬಂಧ ಸರಕಾರದಿಂದ ನಿನಿಯೋಜನೆಗೊಂಡಿರುವ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ಮಾತ್ರ ಈಗ ಜಿಲ್ಲೆಯಲ್ಲಿ ಕಾಣಿಸುತ್ತಿಲ್ಲ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ವರದಿಯಾಗುತ್ತಿದ್ದಂತೆ ಬೆಂಗಳೂರಿನಿಂದ ದೌಡಾಯಿಸಿ ರೋಗ ವ್ಯಾಪಕವಾಗದಂತೆ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರ ಪ್ರಶಂಸೆಗೆ ಪಾತ್ರರಾದವರು ಪೊನ್ನುರಾಜ್. ಆದ್ದರಿಂದ ಈಗ ಅವರು ಕಾಣಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಮುತುವರ್ಜಿ ವಹಿಸಿದ್ದ ಅವರು ಕಾಸರಗೋಡಿನಿಂದ ಜಿಲ್ಲೆಗೆ ವಾಹನಗಳ ಪ್ರವೇಶಕ್ಕೆ ಕೇರಳ ತೀವ್ರ ಲಾಬಿ ಮಾಡಿದಾಗ ಅದನ್ನು ದಿಟ್ಟವಾಗಿ ಎದುರಿಸುವ ಜತೆಗೆ ಸೆಂಟ್ರಲ್ ಮಾರ್ಕೆಟ್ ಸ್ಥಳಾಂತರ ಮತ್ತಿತರ ವಿವಾದಗಳನ್ನು ಸಮರ್ಥವಾಗಿ ನಿಭಾಯಿಸಿ ಬಗೆಹರಿಸಿದ್ದರು.
ಪ್ರಸ್ತುತ ಸೋಂಕಿಗೆ ಇಬ್ಬರು ಬಲಿಯಾಗಿರುವಾಗ ಅವರ ಅಂತ್ಯಸಂಸ್ಕಾರ ಇತ್ಯಾದಿ ಪ್ರಕ್ರಿಯೆಗಳು ವಿವಾದಕ್ಕೆಡೆಯಾಗಿದ್ದು, ಪರಿಸ್ಥಿತಿ ಗಂಭೀರವಾಗುತ್ತಿರುವಾಗ ಅವನ್ನೆಲ್ಲ ನಿಭಾಯಿಸಲು ಜಿಲ್ಲಾಡಳಿತ ಹೆಣಗಾಡಬೇಕಾಗಿ ಬಂದಿದೆ. ಒಂದುವೇಳೆ ಪೊನ್ನುರಾಜ್ ಅವರಂಥ ಅನುಭವಿ ಅಧಿಕಾರಿ ಜಿಲ್ಲೆಯಲ್ಲಿ ಇರುತ್ತಿದ್ದರೆ ಇಂತಹ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ನಿಭಾaಯಿಸುತ್ತಿದ್ದರು ಹಾಗೂ ಇಂಥಹ ಸಮಸ್ಯೆಗಳೇ ಎದುರಾಗು ತ್ತಿರಲಿಲ್ಲ ಎನ್ನುವುದು ಜನರ ಅಭಿಮತ.
ಪ್ರಸ್ತುತ ಅವರು ಬೆಂಗಳೂರಿನಲ್ಲಿಯೇ ಇದ್ದು, ದಕ್ಷಿಣ ಕನ್ನಡದ ಆಗುಹೋಗುಗಳ ಮೇಲೆ ನಿಗಾ ವಹಿಸಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.