Advertisement

ಮಾಸ್ಕ್ ಧಾರಣೆ; ಜನಜಾಗೃತಿ ಅಭಿಯಾನ

11:21 AM May 12, 2021 | Girisha |

ಮುದ್ದೇಬಿಹಾಳ: ಪಟ್ಟಣದ ಪೀಲೇಕಮ್ಮ ನಗರ ಬಡಾವಣೆಯಲ್ಲಿ ಅಲ್ಲಿನ ಯುವ ಬಳಗದ ವತಿಯಿಂದ ಕಿರುತೆರೆ ಹಾಸ್ಯ ಕಲಾವಿದ ಗೋಪಾಲ ಹೂಗಾರ ನೇತೃತ್ವದ ಕಲಾ ಸಿಂಚನ ಕಲಾವಿದರ ಬಳಗದವರ ಯಮ-ಚಿತ್ರಗುಪ್ತ-ಕಿಂಕರರಿಂದ ಮಾಸ್ಕ್ ಧರಿಸುವ ಕುರಿತು ಜನಜಾಗೃತಿ ಅಭಿಯಾನ ನಡೆಯಿತು.

Advertisement

ಈ ವೇಳೆ ಕಲಾ ತಂಡದ ಸದಸ್ಯರು ಬಡಾವಣೆಯ ಬೀದಿ ಬೀದಿಗಳಲ್ಲಿ ಸಂಚರಿಸಿ ಕೊರೊನಾ ಎರಡನೇ ಅಲೆಯಿಂದ ನಮ್ಮ ಪ್ರಾಣ ಕಾಪಾಡಿಕೊಳ್ಳಲು ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಪಾಲಿಸುವ ಹಾಗೂ ಆಗಾಗ ಹ್ಯಾಂಡ್‌ ಸ್ಯಾನಿಟೈಸ್‌ ಮಾಡಿಕೊಳ್ಳುವ ಅಗತ್ಯದ ಕುರಿತು ಪ್ರದರ್ಶನ ನೀಡಿ ಗಮನ ಸೆಳೆದರು.

ಯಮನ ಪಾತ್ರಧಾರಿ ಗೋಪಾಲ ಹೂಗಾರ ಅವರು ಅಬ್ಬರದ ಡೈಲಾಗ್‌ ಹೊಡೆಯುತ್ತ, ಯಮನಂತೆ ಹೂಂಕರಿಸುತ್ತ ಸಂಚರಿಸಿ ಮಾಸ್ಕ್ ಧರಿಸದಿದ್ದರೆ ಮುಂದಾಗುವ ಭಯಂಕರ ಪರಿಣಾಮವನ್ನು ಮನ ಮುಟ್ಟುವಂತೆ ವಿವರಿಸಿ ಜಾಗೃತಿ ಮೂಡಿಸಿದರು. ಸಮಾಜ ಸೇವಕ ಸೀತಾರಾಂ ರಾಠೊಡ ಅವರ ನೇತೃತ್ವದಲ್ಲಿ ನಡೆದ ಅಭಿಯಾನದುದ್ದಕ್ಕೂ ಪಿಲೇಕಮ್ಮ ನಗರ ಬಡಾವಣೆಯ ಜನತೆ ಜಾಗೃತರಾಗಿದ್ದು ಮಾಸ್ಕ್ ಧರಿಸಿಯೇ ಹೊರಗೆ ಬರುವಂತೆ ಮನವೊಲಿಸಿ ಜನತೆಗೆ ನೂರಾರು ಮಾಸ್ಕ್ಗಳನ್ನು ಉಚಿತವಾಗಿ ವಿತರಿಸಿದರು. ಅಭಿಯಾನ ಸಂಘಟಕರಾದ ಜಿಲಾನಿ ಮಕಾನದಾರ, ಪವನ ಝಿಂಗಾಡೆ, ಶಫಿಕ್‌ ನಿಡಗುಂದಿ, ರಫಿಕ್‌ ನಿಡಗುಂದಿ, ಕಾಶೀನಾಥ್‌ ಚಬ್ಬಿ, ಯೂನುಸ್‌, ಜಮೀರ ನದಾಫ್‌, ರಾಜು ಭೋವಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಚಿತ್ರಗುಪ್ತನಾಗಿ ದಾದಾಪೀರ ಹಡಲಗೇರಿ, ಕೊರೊನಾ ವೈರಸ್‌ ಪಾತ್ರಧಾರಿಯಾಗಿ ಸಂದೀಪ ಹಿರೇಮಠ, ಯಮನ ಕಿಂಕರರಾಗಿ ವೀರೇಶ ಲಮಾಣಿ (ಕೌದಿ ವೀರೇಶ), ಪ್ರಶಾಂತ ಕುಂದರಗಿ, ಮಾಸ್ಕ್ ವಿತರಿಸಿ ಜನರ ಪ್ರಾಣ ಕಾಪಾಡುವ ಶರಣರ ಪಾತ್ರಧಾರಿಯಾಗಿ ಕಿರುತೆರೆ ಹಾಸ್ಯ ಕಲಾವಿದ ಮುನೀರ ಅವಟಿಗೇರ, ಸೂಕ್ತ ಚಿಕಿತ್ಸೆ ನೀಡಿ ರೋಗಿಗಳನ್ನು ಪ್ರಾಣಾಪಾಯದಿಂದ ಪಾರು ಮಾಡುವ ವೈದ್ಯರ ಪಾತ್ರಧಾರಿಯಾಗಿ ಗಣೇಶ ಝಿಂಗಾಡೆ ಜನಮೆಚ್ಚುವ ಪ್ರದರ್ಶನ ನೀಡಿದರು.

ರಾಜ್ಯದಲ್ಲೇ ವಿನೂತನ: ಈ ಹಿಂದೆ ಮುದ್ದೇಬಿಹಾಳ ಠಾಣೆಯಲ್ಲೇ ಪಿಎಸೈ ಆಗಿ ಸದ್ಯ ಬೇರೆಡೆ ವರ್ಗಾವಣೆಗೊಂಡಿರುವ ಮಲ್ಲಪ್ಪ ಮಡ್ಡಿ ಮಾತನಾಡಿ, ಇಂತಹ ಪ್ರಾಯೋಗಿಕ, ರೂಪಣಾತ್ಮಕ ಜಾಗೃತಿ ಅಭಿಯಾನಗಳು ಜನರ ಮನಸ್ಸಿನ ಮೇಲೆ ತಕ್ಷಣ ಪರಿಣಾಮ ಬೀರಿ ಹೆಚ್ಚು ಉಪಯುಕ್ತ ಎನ್ನಿಸಿಕೊಳ್ಳುತ್ತವೆ. ಇಡಿ ರಾಜ್ಯದಲ್ಲಿ ಇಂಥದ್ದೊಂದು ವಿನೂತನ ಜಾಗೃತಿ ಕಾರ್ಯಕ್ರಮ ಮುದ್ದೇಬಿಹಾಳದಲ್ಲಿ ನಡೆಯುತ್ತಿರುವುದು ಮೆಚ್ಚುವಂಥದ್ದು. ಕಲಾವಿದರ ನೈಜ ಅಭಿನಯ ಮನಮುಟ್ಟುವಂಥದ್ದು. ಜನರು ಇದರಿಂದ ಜಾಗೃತರಾಗಿ ನಿಯಮ ಪಾಲಿಸಿ ಕೊರೊನಾದಿಂದ ತಮ್ಮನ್ನು ಕಾಪಾಡಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next