Advertisement

ಸೋಂಕು ಭಾರೀ ಇಳಿಕೆ : ರಾಜ್ಯ, ದೇಶದಲ್ಲಿ ತಗ್ಗುತ್ತಿರುವ ಕೋವಿಡ್ ಅಲೆ

02:27 AM May 26, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಸತತ ನಾಲ್ಕನೇ ದಿನ ಕೊರೊನಾ ಹೊಸ ಪ್ರಕರಣಗಳು ಇಳಿಕೆಯಾಗಿವೆ. ಸಾವು ಏರಿಕೆಯಾಗಿದ್ದು, ಶೇ. 2.58 ಮರಣ ದರ ವರದಿಯಾಗಿದೆ.

Advertisement

ಮಂಗಳವಾರ 22,758 ಮಂದಿಗೆ ಸೋಂಕು ತಗಲಿದ್ದು, 588 ಮಂದಿಯ ಸಾವಾಗಿದೆ. 38,224 ಮಂದಿ ಗುಣಮುಖರಾಗಿದ್ದಾರೆ. ಸೋಮವಾರಕ್ಕೆ ಹೋಲಿಸಿದರೆ ಪರೀಕ್ಷೆ ಒಂದು ಸಾವಿರದಷ್ಟು (1.08 ಲಕ್ಷ) ಕಡಿಮೆಯಾಗಿವೆ. ಹೊಸ ಪ್ರಕರಣಗಳು ಎರಡೂವರೆ ಸಾವಿರ ತಗ್ಗಿವೆ. ಆದರೆ ಸಾವು 59 ಹೆಚ್ಚಿದೆ. ಒಟ್ಟು ಪ್ರಕರಣಗಳು 24.72 ಲಕ್ಷಕ್ಕೆ ಹೆಚ್ಚಿದ್ದು, 20.22 ಲಕ್ಷ ಮಂದಿ ಗುಣಮುಖ ರಾಗಿದ್ದಾರೆ. 26,399 ಮಂದಿಯ ಸಾವಾಗಿದೆ. 4.24 ಲಕ್ಷ ಮಂದಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ.

32 ಸಾವಿರ ಇದ್ದ ಸೋಂಕು ಪ್ರಕರಣ ಗಳು ಮೇ 22ರಿಂದ ನಾಲ್ಕು ದಿನಗಳಲ್ಲಿ ಕ್ರಮ ವಾಗಿ 31 ಸಾವಿರ, 26 ಸಾವಿರ, 25 ಸಾವಿರ, 22 ಸಾವಿರ ಆಸುಪಾಸಿಗೆ ತಗ್ಗಿವೆ. ಎ. 21ರ ಅನಂತರ ಇದೇ ಮೊದಲು 23 ಸಾವಿರಕ್ಕಿಂತ ಕಡಿಮೆ ಪ್ರಕರಣ ವರದಿಯಾಗಿವೆ. ಪಾಸಿಟಿವಿಟಿ ದರ ಗರಿಷ್ಠ ಶೇ.21ಕ್ಕೆ ಇಳಿದಿದೆ. ಸತತ 4ನೇ ದಿನ ಸೋಂಕು ಇಳಿಮುಖ ಮತ್ತು ಪಾಸಿಟಿವಿಟಿ ದರವೂ ತಗ್ಗಿರುವುದು ಸಮಾಧಾನಕರ ಬೆಳವಣಿಗೆ.

ಗರಿಷ್ಠ ಮರಣ ದರ
ರಾಜ್ಯದಲ್ಲಿ ಸೋಂಕುಪೀಡಿತರ ಸರಾಸರಿ ಮರಣ ದರ ಮಾತ್ರ ಶೇ. 1ರಷ್ಟಿದೆ. ಆದರೆ ಕಳೆದ ಮೂರು ದಿನಗಳಿಂದ ಮರಣ ದರ ಶೇ. 2ಕ್ಕೂ ಅಧಿಕ ವರದಿಯಾಗುತ್ತಿದೆ. ರವಿವಾರ ಮೊದಲ ಬಾರಿಗೆ ಮರಣ ದರ ಶೇ. 2.4, ಸೋಮವಾರ ಶೇ. 2.1ರಷ್ಟು ವರದಿಯಾಗಿತ್ತು. ಮಂಗಳವಾರ ಮತ್ತಷ್ಟು ಹೆಚ್ಚಿದ್ದು, ಹಿಂದೆಂದಿಗಿಂತಲೂ ಅಧಿಕ ಶೇ. 2.58 ದಾಖಲಾಗಿದೆ. ಅಂದರೆ ಸೋಂಕು ದೃಢಪಟ್ಟ ಒಂದು ಸಾವಿರ ಜನರಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ.

ದೇಶ ದಲ್ಲೂ ಇಳಿಕೆ
ತಿಂಗಳ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಸೋಂಕು 2 ಲಕ್ಷಕ್ಕಿಂತ ಕಡಿಮೆಯಾಗಿದೆ. ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನ ವರೆಗೆ ಒಟ್ಟು 1,96,427 ಲಕ್ಷ ಪ್ರಕರಣಗಳು ದೃಢಪಟ್ಟಿವೆ. ಒಟ್ಟು 3,26,850 ಮಂದಿ ಚೇತರಿಸಿಕೊಂಡಿದ್ದಾರೆ. ಸಾವಿನ ಸಂಖ್ಯೆ 21 ದಿನಗಳ ಬಳಿಕ 4 ಸಾವಿರಕ್ಕಿಂತ ಕೆಳಗೆ ಇಳಿದಿದೆ. ಮಂಗಳವಾರ 3,511 ಮಂದಿ ಸಾವನ್ನಪ್ಪಿದ್ದಾರೆ.

Advertisement

ದೇಶದಲ್ಲಿ ಈಗ 25,86,782 ಸಕ್ರಿಯ ಪ್ರಕರಣಗಳಿವೆ. 2,40,54,861 ಮಂದಿ ಗುಣ ಹೊಂದಿದ್ದಾರೆ. ಒಟ್ಟು 3,07,231 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಶೇ.1.14ರಷ್ಟು ಮರಣ ಪ್ರಮಾಣ ದರವಿದೆ. ಪಾಸಿಟಿವಿಟಿ ದರ ಶೇ.9.60ಕ್ಕೆ ಇಳಿದಿದೆ. ಚೇತರಿಕೆ ದರ ಶೇ.89.26ಕ್ಕೆ ಏರಿದೆ.

ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ದಿಲ್ಲಿ, ಕೇರಳ, ಪಂಜಾಬ್‌, ಉತ್ತರ ಪ್ರದೇಶ, ಪ.ಬಂಗಾಲ, ಉತ್ತರಾಖಂಡ ಮತ್ತು ರಾಜಸ್ಥಾನಗಳಲ್ಲಿ ಹೆಚ್ಚಿನ ಮರಣ ಪ್ರಮಾಣವಿದೆ. ಮಹಾರಾಷ್ಟ್ರ, ಕರ್ನಾಟಕ, ದಿಲ್ಲಿ, ತ.ನಾಡು, ಉ. ಪ್ರದೇಶ, ಪ. ಬಂಗಾಲಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next