Advertisement

ಕೋವಿಡ್ ರಣಕೇಕೆ

03:41 PM Jul 06, 2020 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ ವೈರಸ್‌ ವಿಸ್ತರಣೆ ಮುಂದುವರಿದಿದ್ದು, ಜಿಟಿ ಜಿಟಿ ಮಳೆಯಲ್ಲೂ ನಗರದ ಜನರು ನಡುಗುವಂತೆ ಮಾಡಿದೆ. ಸಾರ್ವತ್ರಿಕ ಕರ್ಫ್ಯೂ ದಿನವಾದ ರವಿವಾರ ಬಾಗಲಕೋಟೆ ನಗರದಲ್ಲಿ ಐವರು, ಜಮಖಂಡಿ ನಗರದ ನಾಲ್ವರಿಗೆ ಜಿಲ್ಲಾ ಕೋವಿಡ್‌-19 ಆಸ್ಪತ್ರೆಯ ಟ್ರಾನೆಟ್‌ ಲ್ಯಾಬ್‌ನಲ್ಲಿ ಸೋಂಕು ಖಚಿತಗೊಂಡರೆ, ಬೆಂಗಳೂರಿನ ಲ್ಯಾಬ್‌ನಲ್ಲಿ ಮತ್ತೆ ನಾಲ್ವರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಈವರೆಗೆ ಅಧಿಕೃತವಾಗಿ ಘೋಷಣೆಯಾದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 230ಕ್ಕೆ ಏರಿಕೆಯಾಗಿದೆ.

Advertisement

ಇಬ್ಬರು ಖಾಸಗಿ ವೈದ್ಯರಿಗೆ ಸೋಂಕು: ನಗರದ ಟೆಂಗಿನಮಠ ಏರಿಯಾದ ಖಾಸಗಿ ವೈದ್ಯರಿಗೆ ಸೋಂಕು ತಗುಲಿರುವುದನ್ನು ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ. ಅಲ್ಲದೇ ನಗರದ ಮತ್ತೂಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವೈದ್ಯ, ವಿದ್ಯಾಗಿರಿ 17ನೇ ಕ್ರಾಸ್‌ನ ಓರ್ವ ವಕೀಲರು, ನವನಗರದ ಲೋಕಾಯುಕ್ತ ಕಚೇರಿಯ ಓರ್ವ ಮಹಿಳಾ ಸಿಬ್ಬಂದಿ, ಹಳೆಯ ನಗರದ ನೀರಿನ ಟಾಕಿ ಹತ್ತಿರದ ತರಕಾರಿ ಮಾರುವ ಮಹಿಳೆಯ ಪತಿಗೂ ಜಿಲ್ಲಾ ಲ್ಯಾಬ್‌ನಲ್ಲಿ ಕೋವಿಡ್‌ ದೃಢಪಟ್ಟಿದೆ. ಆದರೆ, ಅಧಿಕೃತ ಘೋಷಣೆ ಮಾಡಿಲ್ಲ. ಮುಂಜಾಗ್ರತ ಕ್ರಮವಾಗಿ ಇಬ್ಬರು ವೈದ್ಯರು, ವಕೀಲ, ಲೋಕಾಯುಕ್ತ ಕಚೇರಿ ಮಹಿಳಾ ಸಿಬ್ಬಂದಿ, ತರಕಾರಿ ಮಾರುವ ಮಹಿಳೆಯ ಪತಿಯ ಮನೆ ಸೇರಿದಂತೆ ಜಿಲ್ಲಾ ಲ್ಯಾಬ್‌ನಲ್ಲಿ ಖಚಿತಪಟ್ಟ ಸೋಂಕಿತರ ಮನೆ, ಆ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅವರೊಂದಿಗೆ ಸಂಪರ್ಕದಲ್ಲಿ ಇರುವವರ ಗಂಟಲು ದ್ರವ ಮಾದರಿ ಪಡೆಯಲಾಗುತ್ತಿದೆ. ವೈದ್ಯರು, ವಕೀಲರು, ಲೋಕಾಯುಕ್ತ ಸಿಬ್ಬಂದಿ ಸಹಿತ ಒಟ್ಟು ನಾಲ್ವರಿಗೂ ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಗಂಟಲು ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿದ್ದು, ಅದರ ವರದಿ ಬರಬೇಕಿದೆ.

ವೈದ್ಯನೊಂದಿಗೆ ಊಟ; ಮಾಜಿ ಸಚಿವರಿಗೆ ರಿಸ್ಕ್: ಹಳೆಯ ನಗರದ ಟೆಂಗಿನಮಠ ಏರಿಯಾದ ಖಾಸಗಿ ವೈದ್ಯನಿಗೆ ರವಿವಾರ ಜಿಲ್ಲಾ ಲ್ಯಾಬ್‌ನಲ್ಲಿ ಸೋಂಕು ಖಚಿತವಾಗುತ್ತಿದ್ದಂತೆ, ಅವರೊಂದಿಗೆ ಸಂಪರ್ಕದಲ್ಲಿದ್ದ ಹಲವು ಗಣ್ಯರಿಗೂ ಚಟಪಡಿಕೆ ಶುರುವಾಗಿದೆ. ಮಾಜಿ ಸಚಿವ, ಮಾಜಿ ಶಾಸಕರ ಸಹೋದರ ಸಹಿತ ನಾಲ್ವರು, ಈ ವೈದ್ಯರೊಂದಿಗೆ ಎರಡು ದಿನಗಳ ಹಿಂದೆ ಊಟ ಮಾಡಿದ್ದರು. ಆ ವೈದ್ಯ, ಬಹುತೇಕ ರಾಜಕೀಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ವೈದ್ಯನಿಗೆ ಸೋಂಕು ತಗುಲುವ ಎರಡು ದಿನ ಮುಂಚೆ ಯಾರು ಯಾರು ಸಂಪರ್ಕಕ್ಕೆ ಬಂದಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಅಲ್ಲದೇ ವೈದ್ಯನೊಂದಿಗೆ ಊಟ ಮಾಡಿದ ಹಿನ್ನೆಲೆ ಜಿಲ್ಲೆಯ ಮಾಜಿ ಸಚಿವರೊಬ್ಬರಿಗೆ ಹೋಂ ಕ್ವಾರಂಟೈನ್‌ ಆಗಲು ತಹಶೀಲ್ದಾರರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಕರ್ಫ್ಯೂ ಯಶಸ್ವಿ: ಲಾಕ್‌ಡೌನ್‌ ಸಡಿಲಿಕೆ ಬಳಿ, ಸರ್ಕಾರ ರವಿವಾರ ಪೂರ್ಣ ದಿನ ಕರ್ಫ್ಯೂ ಘೋಷಣೆ ಮಾಡಿದ್ದು, ಜಿಲ್ಲೆಯಾದ್ಯಂತ ಬಹುತೇಕ ಯಶಸ್ವಿಯಾಗಿದೆ. ರವಿವಾರ ರಜೆಯ ದಿನವೂ ಆಗಿದ್ದರಿಂದ ಜನರು ರಸ್ತೆಗಿಳಿಯಲಿಲ್ಲ. ಆದರೆ, ಜನರು ತಾವು ವಾಸಿಸುತ್ತಿದ್ದ ಮನೆಯ ಏರಿಯಾಗಳಲ್ಲೇ ವಾಕಿಂಗ್‌ ಹೆಸರಲ್ಲಿ ಮನೆಯಿಂದ ಹೊರ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು. ಜಿಲ್ಲೆಯ ವಿವಿಧ ಬಸ್‌ ನಿಲ್ದಾಣಗಳಿಂದ ಶನಿವಾರ ರಾತ್ರಿ ಹೋಗಿದ್ದ ಬಸ್‌ಗಳು, ರವಿವಾರ ಮರಳಿ ಬಂದವು. ಆದರೆ, ರವಿವಾರ ಇಡೀ ದಿನ ಸಾರಿಗೆ ಸಂಸ್ಥೆಯ ಬಸ್‌ಗಳು, ಆಟೋ, ಟಂಟಂ ಸಹಿತ ಯಾವುದೇ ವಾಹನಗಳ ಓಡಾಟ ಇರಲಿಲ್ಲ. ಕೆಲವೇ ಕೆಲವು ವ್ಯಕ್ತಿಗಳ

ಸಂಚಾರ, ಅಗತ್ಯ ವಾಹನಗಳ ಓಡಾಟಕ್ಕೆ ಪೊಲೀಸರು ಯಾವುದೇ ನಿರ್ಬಂಧ ಹೇರಲಿಲ್ಲ. ಕೆಲಸವಿಲ್ಲದೇ ಅನಗತ್ಯವಾಗಿ ಓಡಾಡುತ್ತಿದ್ದ ಹಲವರಿಗೆ ಪೊಲೀಸರು, ಎಚ್ಚರಿಕೆ ನೀಡಿ, ಮನೆಗೆ ಕಳುಹಿಸಿದ ಪ್ರಸಂಗಗಳೂ ನಡೆದವು.

Advertisement

ನಿರ್ಬಂಧಿತ ಪ್ರದೇಶ 27ಕ್ಕೆ ಏರಿಕೆ: ರವಿವಾರ ನಗರದ ವಕೀಲ, ಇಬ್ಬರು ವೈದ್ಯರು, ಲೋಕಾಯುಕ್ತ ಕಚೇರಿ ಸಿಬ್ಬಂದಿ, ತರಕಾರಿ ಮಾರುವ ಮಹಿಳೆಯ ಪತಿಗೆ ಜಿಲ್ಲಾ ಲ್ಯಾಬ್‌ನಲ್ಲಿ ಸೋಂಕು ದೃಢಪಟ್ಟಿದ್ದು, ಕಂಟೇನ್ಮೆಂಟ್‌ ಝೋನ್‌ ಗಳಿಂದ ಮುಕ್ತವಾಗಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ ಈಗ ಮತ್ತೆ 27 ಪ್ರದೇಶಗಳನ್ನು ಕಂಟೇನ್ಮೆಂಟ್‌ ಝೋನ್‌ಗಳೆಂದು ಘೋಷಿಸಿ, ಸಂಚಾರ ನಿಷೇಧಿಸಲಾಗಿದೆ.

ಜಮಖಂಡಿಯಲ್ಲಿ ಮತ್ತೆ ನಾಲ್ವರಿಗೆ ಸೋಂಕು: ಕಳೆದ ಜೂನ್‌ 26ರಂದು ವಿಜಯಪುರದಿಂದ ತನ್ನ ಪುತ್ರಿಯನ್ನು ಕರೆದುಕೊಂಡು ಬಂದ ಬಳಿಕ ಐಎಲ್‌ ಐದಿಂದ ಸೋಂಕು ದೃಢಪಟ್ಟಿದ್ದ ಜಮಖಂಡಿ ಮೋತಿಬಾ ಗಲ್ಲಿಯ 42 ವರ್ಷದ ಪುರುಷ ಪಿ-10643 ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಜನರಲ್ಲಿ ಮತ್ತೆ ನಾಲ್ವರಿಗೆ ಸೋಂಕು ತಗುಲಿದೆ.

ಬಾಗಲಕೋಟೆ ಹಳೆಯ ನಗರದ ನಾಯಕ ಕ್ಲಿನಿಕ್‌ ವೈದ್ಯರಿಗೆ ಕೋವಿಡ್ ಪಾಸಿಟಿವ್‌ ಬಂದಿದೆ. ಶಿರೂರ ಅಗಸಿ ರಸ್ತೆಯ ತೆಂಗಿನಮಠ ಪ್ರದೇಶದ ನಾಯಕ ಕ್ಲಿನಿಕ್‌ನ ವೈದ್ಯರೊಂದಿಗೆ ಸಂಪರ್ಕ ಹೊಂದಿದವರು ಜಿಲ್ಲಾ ಕೋವಿಡ್‌ -19 ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. –ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next