Advertisement

ಚಳಿಗಾಲ ಇನ್ನೂ ಅಪಾಯಕಾರಿ: ಚಳಿಯಲ್ಲಿ ಕೋವಿಡ್-19 ಸೋಂಕು ಇನ್ನಷ್ಟು ಹೆಚ್ಚಳ ಸಾಧ್ಯತೆ

01:50 PM Oct 12, 2020 | keerthan |

ಹೊಸದಿಲ್ಲಿ: ದೇಶದ ಒಟ್ಟಾರೆ ಕೋವಿಡ್-19 ಸ್ಥಿತಿ ನೋಡಿದರೆ, ದೈನಂದಿನ ಸೋಂಕಿನ ಸಂಖ್ಯೆಯಲ್ಲಿ ಕ್ರಮೇಣ ಇಳಿಕೆ ಕಾಣಿಸುತ್ತಿದೆ. ಸದ್ಯದ ಮಟ್ಟಿಗೆ ಇದು ಸಮಾಧಾನದ ಸಂಗತಿಯಾಗಿದ್ದರೂ, ದೇಶವು “ಕೋವಿಡ್-19 ಅಪಾಯ’ದಿಂದ ಸಂಪೂರ್ಣವಾಗಿ ದೂರವಾಗಿಲ್ಲ. ನಿಜವಾದ ಅಪಾಯ ಇರುವುದು ಮುಂದಿನ ದಿನಗಳಲ್ಲಿ!

Advertisement

ಹೌದು. ಕೆಲವೇ ದಿನಗಳಲ್ಲಿ ದೇಶವು ಸರಣಿ ಹಬ್ಬಗಳಿಗೆ ಸಾಕ್ಷಿಯಾಗಲಿದೆ. ಅದರೊಂದಿಗೆ, ಚಳಿಗಾಲವೂ ಜತೆಯಾಗಲಿದೆ. ಚಳಿಯ ವಾತಾವರಣದಲ್ಲಿ ಕೋವಿಡ್-19 ವೈರಸ್‌ನ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಸ್ವತಃ ಕೇಂದ್ರ ಆರೋಗ್ಯ ಸಚಿವರೇ ಇಂಥದ್ದೊಂದು ಎಚ್ಚರಿಕೆ ನೀಡಿದ್ದಾರೆ.

ವಾತಾವರಣದಲ್ಲಿ ಚಳಿಯ ಪ್ರಮಾಣ ಜಾಸ್ತಿಯಾದಂತೆ, ಶ್ವಾಸಕೋಶ ಅಥವಾ ಉಸಿರಾಟದ ಸಮಸ್ಯೆಗಳು ಉಲ್ಬಣಿಸುತ್ತವೆ. ಸೋಂಕು ಕೂಡ ಉಸಿರಾಟ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವ ಕಾರಣ, ಚಳಿಗಾಲದಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯವಿದೆ. ಈ ಬಗ್ಗೆ ಎಲ್ಲರೂ ಅತ್ಯಂತ ಎಚ್ಚರಿಕೆಯಿಂದಿರಬೇಕು ಎಂದು ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.

ಇದನ್ನೂ ಓದಿ:ಈ ಬಾರಿ ಮನೆಯಲ್ಲೇ ಹಬ್ಬ ಆಚರಿಸಿ! ಕೇಂದ್ರ ಆರೋಗ್ಯ ಸಚಿವರ ಸಲಹೆ

ಯುಕೆಯಲ್ಲೂ ಇದೇ ಸ್ಥಿತಿ: ಇದಕ್ಕೆ ಯುನೈಟೆಡ್‌ ಕಿಂಗ್‌ಡಮ್‌(ಯುಕೆ) ಅನ್ನು ಉದಾಹರಣೆಯಾಗಿ ನೀಡಿರುವ ಅವರು, “ಸೋಂಕಿನ ಪ್ರಮಾಣ ತಗ್ಗಿದ್ದ ಯು.ಕೆ.ಯಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ಮತ್ತೂಂದು ಹಂತದ ವ್ಯಾಪಿಸುವಿಕೆ ಶುರುವಾಗಿದೆ. ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಹಾಗೆಂದು ಭಾರತದಲ್ಲಿಯೂ ಇದೇ ಸ್ಥಿತಿ ತಲೆದೋರಲಿದೆ ಎಂದು ಖಚಿತವಾಗಿ ಹೇಳಲಾರೆ. ಎಲ್ಲರೂ ಸೂಕ್ತ ಮುನ್ನೆಚ್ಚರಿಕೆ ವಹಿಸಿ, ಸರಕಾರದ ಮಾರ್ಗಸೂಚಿ ಪಾಲನೆ ಮಾಡಿದರೆ ಮುಂಬರುವ ಅಪಾಯದಿಂದ ನಮ್ಮನ್ನು ನಾವು ರಕ್ಷಿಸಿ ಕೊಳ್ಳಬಹುದು’ ಎಂದಿದ್ದಾರೆ ಹರ್ಷವರ್ಧನ್‌.

Advertisement

ವರದಿ ಆಧರಿಸಿ ನಿರ್ಧಾರ: ಭಾರತದಲ್ಲಿ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಬಗ್ಗೆ ಸರಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಲಸಿಕೆಯ ವೈದ್ಯಕೀಯ ಪ್ರಯೋಗದ ವರದಿ ಆಧರಿಸಿ ಈ ಕುರಿತು ನಿರ್ಧರಿಸಲಾಗುತ್ತದೆ ಎಂದು ಸಚಿವ ಹರ್ಷವರ್ಧನ್‌ ಹೇಳಿದ್ದಾರೆ. ಜತೆಗೆ ಅಗ್ಗದ ದರದ ಫೆಲೂಡಾ ಪೇಪರ್‌ ಸ್ಟ್ರಿಪ್‌ ಪರೀಕ್ಷೆಯನ್ನು ಇನ್ನು ಕೆಲವೇ ವಾರಗಳಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದೂ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next