ಬೀದರ : ಗಡಿನಾಡು ಬೀದರನಲ್ಲಿ ಎರಡನೇ ಅಲೆ ರೂಪದಲ್ಲಿ ಅಪ್ಪಳಿಸಿರುವ ಹೆಮ್ಮಾರಿ ಕೊರೊನಾ ತನ್ನ ಆರ್ಭಟ ಮತ್ತೆ ಮುಂದುವರೆಸಿದೆ. ಹೊಸದಾಗಿ ಶುಕ್ರವಾರ ಮತ್ತೆ 40 ಹೊಸ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದರೆ, ಓರ್ವ ವೃದ್ಧೆ ಸಾವು ಸಂಭವಿಸಿದೆ. ಕೇವಲ ಆರು ದಿನಗಳಲ್ಲಿ 250 ಸೋಂಕಿತರು ಪತ್ತೆಯಾಗಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ತನ್ನ ಕೆನ್ನಾಲಿಗೆ ಚಾಚುತ್ತಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೀದರ ಜಿಲ್ಲೆಗೂ ನಿಧಾನವಾಗಿ ಹಬ್ಬುತ್ತಿದೆ ಎಂಬ ಆತಂಕ ಬಿಸಿಲೂರಿನ ಜನರನ್ನು ಕಾಡಲಾರಂಭಿಸಿದೆ. ಸೋಂಕಿತರ ಕೇಸ್ ಗಳು ಕುಸಿಯುತ್ತ ಬಂದಿದ್ದರಿಂದ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದರು. ಇದರಿಂದ ಸಾಮಾನ್ಯ ಜನಜೀವನ ಮೊದಲಿನಂತೆ ಯಥಾಸ್ಥಿತಿಗೆ ತಲುಪುತ್ತಿತ್ತು.
ಆದರೆ, ಈಗ ಮತ್ತೂಮ್ಮೆ ಕೋವಿಡ್ ಕಂಟಕವಾಗಿ ಪರಿಣಮಿಸುತ್ತಿದ್ದು, ಎರಡು ದಿನದಲ್ಲಿ ಇಬ್ಬರನ್ನು ಬಲಿ ಪಡೆದಿದೆ. ಸೋಂಕಿಗೆ ಗುರುವಾರ 47 ವರ್ಷದ ನ್ಯಾಯವಾದಿ ಮೃತಪಟ್ಟಿದ್ದರೆ, ಶುಕ್ರವಾರ 75 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಸಾರಿ ಹಿನ್ನೆಲೆ ಹೊಂದಿದ್ದ ಈಕೆ ಮಾ. 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಾ. 14ರಿಂದ ಆರು ದಿನಗಳಲ್ಲಿ 250 ಪಾಸಿಟಿವ್ ಕೇಸ್ ವರದಿಯಾಗಿವೆ. ಮಾ. 14 ರಂದು 36, 15ಕ್ಕೆ 27, 16ಕ್ಕೆ 52, 17ಕ್ಕೆ 55 ಮತ್ತು 18ಕ್ಕೆ 41 ಸೋಂಕಿತರು ಪತ್ತೆಯಾಗಿದ್ದಾರೆ.
ನ್ಯಾಯಾಧೀಶರು ಸೇರಿ ಸಿಬ್ಬಂದಿಗೆ ಸೋಂಕು ತಗುಲಿರುವುದು ಮತ್ತು ನ್ಯಾಯವಾದಿ ಸಾವು ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಪರಿಸರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಮಾ. 22ರವರೆಗೆ ಕೋರ್ಟ್ ಎಲ್ಲ ಶ್ರೇಣಿ ನ್ಯಾಯಾಲಯಗಳಲ್ಲಿ ಕಲಾಪಗಳನ್ನು ಬಂದ್ ಮಾಡಲಾಗಿದೆ. ಅಷ್ಟೇ ಅಲ್ಲದೆ ನಗರಸಭೆ ಸಿಬ್ಬಂದಿಗೆ ಪಾಸಿಟಿವ್ ಬಂದಿರುವುದರಿಂದ ಇಡೀ ಕಚೇರಿಯನ್ನು ಸೀಲ್‌ಡೌನ್ ಮಾಡಿ ಸ್ಯಾನಿಟೈಜ್ ಮಾಡಲಾಗಿದೆ.
ಕಚೇರಿ ಮುಖ್ಯ ದ್ವಾರದದಲ್ಲಿ ಸೀಲ್‌ಡೌನ್ ಫಲಕ ಹಾಕಲಾಗಿದೆ. ಸೋಂಕಿತರ ಸಂಪರ್ಕ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿ, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಶನಿವಾರದವರೆಗೆ ಕಚೇರಿ ಸೀಲ್ ಡೌನ್ ಇರಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗಿದೆ.