Advertisement

ಧಾರವಾಡ: ಹಳ್ಳಿಗಳಲ್ಲಿನ ಸಾವಿನ ಸಂಖ್ಯೆ ಸಹಸ್ರದಾಚೆ

01:39 PM May 19, 2021 | Team Udayavani |

ವರದಿ: ಬಸವರಾಜ ಹೊಂಗಲ್‌

Advertisement

ಧಾರವಾಡ: ಗ್ರಾಮದ ಜನಸಂಖ್ಯೆ 4 ಸಾವಿರ ಇದ್ದರೆ ಅಲ್ಲಿ ಪ್ರತಿದಿನ ಒಬ್ಬರ ಸಾವು ಖಚಿತವಾಗುತ್ತಿದೆ. ಸಾವಿರ ಮಟ್ಟಿ ಗ್ರಾಮಗಳಲ್ಲಿ ಪ್ರತಿದಿನದ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಬಿಡದೇ ಕಾಡುತ್ತಿರುವ ಸತ್ತವರ ನೆರಳು, ಮಣ್ಣು ಮಾಡಲೂ ಬಿಡದ ಕೊರೊನಾ ಮಹಾಮಾರಿ, ಕೋವಿಡ್‌ ಪರೀಕ್ಷೆಗೆ ಮುಂದಾಗದ ಹಳ್ಳಿಗರು, ಇತರೆ ರೋಗಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿರುವ ಗ್ರಾಮೀಣರು. ಒಟ್ಟಿನಲ್ಲಿ ಹಳ್ಳಿಗಳಲ್ಲೀಗ ಸಾವಿನ ಸಂಖ್ಯೆ ಸಹಸ್ರ ದಾಟಿಯಾಗಿದೆ.

ಹೌದು. ಕೊರೊನಾ 1ನೇ ಅಲೆಯಲ್ಲಿ ಸುರಕ್ಷಿತವಾಗಿದ್ದ ಹಳ್ಳಿಗಳಲ್ಲಿ ಇದೀಗ ಕೋವಿಡ್‌-19 ಎರಡನೇ ಅಲೆ ಮರಣ ಮೃದಂಗ ಬಾರಿಸುತ್ತಿದ್ದು, ಗ್ರಾಮಗಳಲ್ಲಿನ ಮುಗª ಜೀವಗಳು ಸದ್ದಿಲ್ಲದೇ ಮಣ್ಣು ಸೇರುತ್ತಿವೆ. ಸದಾ ಹಸನ್ಮುಖೀಗಳಾಗಿ ಆರೋಗ್ಯವಂತ ಜೀವನ ನಡೆಸಿದ್ದ ಹಳ್ಳಿಗರಲ್ಲಿ ಸೂತಕದ ಛಾಯೆ ಅವರಿಸಿದ್ದು, ಎಲ್ಲೆಡೆ ಸ್ಮಶಾನ ಮೌನ ಆವರಿಸಿದೆ. ಒಂದು ಕಡೆ ಲಾಕ್‌ಡೌನ್‌ನಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು, ಬೆಳೆದ ಬೆಳೆಗಳಿಗೂ ಸೂಕ್ತ ಬೆಲೆ ಸಿಕ್ಕದೇ ಒದ್ದಾಡುತ್ತಿದ್ದರೆ, ಇನ್ನೊಂದೆಡೆ ಮನೆಗೊಬ್ಬರಿಗೆ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿದ್ದು, ಚಿಕಿತ್ಸೆ ಪಡೆಯಲು ಪರದಾಟ ನಡೆಸುವ ಸ್ಥಿತಿ ಹಳ್ಳಿಗಳಲ್ಲಿದೆ.

ಆರಂಭದಲ್ಲಿ ಬರೀ ನೆಗಡಿ, ಕೆಮ್ಮು ಎನ್ನುವ ಅಲಕ್ಷé ಇದೀಗ ಹಳ್ಳಿಗರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದು, ಸಾವಿನ ಸರಣಿಯೇ ಮುಂದುವರಿದಿದೆ. 50 ಸಾವಿರದತ್ತ ಸೋಂಕಿತರ ಸಂಖ್ಯೆ: ಈವರೆಗೂ ಜಿಲ್ಲೆಯಲ್ಲಿ 806 ಜನ ಮೃತಪಟ್ಟಿದ್ದಾಗಿ ಜಿಲ್ಲಾಡಳಿತ ಲೆಕ್ಕ ಇಟ್ಟಿದೆ. 45921 ಸಾವಿರ ಜನರಿಗೆ ಕೊರೊನಾ ವಕ್ಕರಿಸಿದ್ದು, ಈ ಪೈಕಿ 38,915 ಸಾವಿರಕ್ಕೂ ಅಧಿಕ ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಸದ್ಯಕ್ಕೆ 6198 ಸಕ್ರಿಯ ಪ್ರಕರಣಗಳು ಮೇ 18ರ ವರೆಗೆ ದಾಖಲಾಗಿವೆ. ಮೇ 1 ಮೇ 17ರವರೆಗೆ ಒಟ್ಟು ಕೊರೊನಾ 14,513 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 12,137 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸತ್ತವರ ಸಂಖ್ಯೆ 101ಎಂದಿದೆ. ಏಪ್ರಿಲ್‌ 2021ರಲ್ಲಿ ಒಟ್ಟು 7460 ಪ್ರಕರಣಗಳು ಪತ್ತೆಯಾಗಿದ್ದವು. ಈ ಪೈಕಿ 3963 ಜನರು ಗುಣಮುಖರಾದರೆ ಒಟ್ಟು 77 ಜನ ಮೃತಪಟ್ಟಿದ್ದಾರೆ. ಏ.1ರಿಂದ ಮೇ 15ರವರೆಗೆ ಹುಬ್ಬಳ್ಳಿ- ಧಾರವಾಡ ನಗರ ಪಾಲಿಕೆ ವ್ಯಾಪ್ತಿಯನ್ನು ಹೊರತು ಪಡಿಸಿ ತಾಲೂಕುವಾರು ನೋಡಿದಾಗ, 1705 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 123 ಜನ ಮರಣ ಹೊಂದಿದ್ದು, ಈ ಪೈಕಿ ಧಾರವಾಡ ತಾಲೂಕಿನಲ್ಲಿಯೇ ಅತ್ಯಧಿಕ 629 ಜನರಿಗೆ ಸೋಂಕು ದೃಢಪಟ್ಟಿದ್ದು ಈ ಪೈಕಿ 46 ಜನರು ಮೃತಪಟ್ಟಿದ್ದಾರೆ. ಕಲಘಟಗಿ ತಾಲೂಕಿನಲ್ಲಿ 561ಜನ ಸೋಂಕಿತರಿದ್ದು, 23 ಜನ ಮೃತಪಟ್ಟಿದ್ದಾರೆ. ಅಳ್ನಾವರ ತಾಲೂಕಿನಲ್ಲಿ 25 ಜನ ಸೋಂಕಿತರಿದ್ದು ಇಬ್ಬರು ಮರಣ ಹೊಂದಿದ್ದಾರೆ. ಅಣ್ಣಿಗೇರಿ ತಾಲೂಕಿನಲ್ಲಿ 73 ಜನ ಸೋಂಕಿತರಿದ್ದು, ಒಟ್ಟು 6 ಜನ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ತಾಲೂಕಿನಲ್ಲಿ 381ಜನ ಸೋಂಕಿತರಿದ್ದು, ಈ ಪೈಕಿ 24 ಜನ ಮೃತಪಟ್ಟಿದ್ದಾರೆ.

ಕುಂದಗೋಳ 335 ಜನ ಸೋಂಕಿತರಿದ್ದು, 24 ಜನ ಮೃತಪಟ್ಟಿದ್ದಾರೆ. ನವಲಗುಂದ ತಾಲೂಕಿನಲ್ಲಿ 189 ಸೋಂಕಿತರ ಪೈಕಿ 21 ಜನ ಮೃತಪಟ್ಟಿದ್ದಾರೆ. ಕೋವಿಡ್‌ ಪರೀಕ್ಷೆ ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆದಿದೆ. ಪರೀಕ್ಷೆಯಿಂದ ದೃಢಪಟ್ಟವರು ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿ ಮನೆಗೂ ಬರುತ್ತಿದ್ದಾರೆ. ಕೆಲವಷ್ಟು ಜನರು ಸಾವಿನ ಮನೆಗೂ ಹೋಗುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್‌ ಲೆಕ್ಕದಲ್ಲಿ ಹೆಚ್ಚೆಂದರೆ ಬರೀ 10 ಜನರ ಸಾವು ನಮೂದಾಗುತ್ತಿದೆ. ಗ್ರಾಮಗಳಲ್ಲಿನ ಸರ್ಕಾರಿ ಲೆಕ್ಕ : ಧಾರವಾಡ ತಾಲೂಕಿನಲ್ಲಿ ಅತೀ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದ್ದು, ಮೇ 15ರವರೆಗೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಅತಿ ಹೆಚ್ಚು ಕೋವಿಡ್‌ ಸೋಂಕಿತರನ್ನು ಹೊಂದಿದ ಗ್ರಾಮಗಳನ್ನು ಗುರುತಿಸಲಾಗಿದೆ. ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ 89 ಜನ ಸೋಂಕಿತರಿದ್ದು, ಈ ಪೈಕಿ 3 ಜನ ಮೃತಪಟ್ಟಿದ್ದಾರೆ. ಅಣ್ಣಿಗೇರಿ ತಾಲೂಕಿನಲ್ಲಿ ಶಲವಡಿ ಗ್ರಾಮದಲ್ಲಿ ಅಧಿಕ ಅಂದರೆ 19 ಜನರಿಗೆ ಸೋಂಕಿದ್ದು, ಇಬ್ಬರು ಮೃತಪಟ್ಟಿದ್ದಾರೆ.

Advertisement

ಅಳ್ನಾವರ ತಾಲೂಕಿನಲ್ಲಿ ಕಡಬಗಟ್ಟಿ ಗ್ರಾಮದಲ್ಲಿ 11 ಜನ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹುಬ್ಬಳ್ಳಿ ತಾಲೂಕಿನಲ್ಲಿ ಶಿರಗುಪ್ಪಿ ಗ್ರಾಮದಲ್ಲಿ 35 ಜನರಿಗೆ ಸೋಂಕಿದ್ದು, ಯಾರೂ ಬಲಿಯಾಗಿಲ್ಲ. ಕಲಘಟಗಿ ತಾಲೂಕಿನಲ್ಲಿ ಗಳಗಿ ಹುಲಕೊಪ್ಪ 91 ಜನ ಸೋಂಕಿತರಿದ್ದು, ಈ ಪೈಕಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಕುಂದಗೋಳ ತಾಲೂಕಿನಲ್ಲಿ ಗುಡಗೇರಿಯಲ್ಲಿ ಅತ್ಯಧಿಕ 43 ಜನರಿಗೆ ಸೋಂಕಿದ್ದು 3 ಜನ ಮೃತಪಟ್ಟಿದ್ದಾರೆ. ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಅತ್ಯಧಿಕ 54 ಜನರಿಗೆ ಕೊರೊನಾ ಸೋಂಕಿದ್ದು, 4 ಜನ ಮೃತಪಟ್ಟಿದ್ದಾರೆ.

ಸಾವಿರಮಟ್ಟಿ ಗ್ರಾಮದಲ್ಲಿ ಕೊರೊನಾ ಶತಕ: ಇನ್ನು ಧಾರವಾಡ ಜಿಲ್ಲೆಯಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ಗ್ರಾಪಂಗಳ ವ್ಯಾಪ್ತಿಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದ್ದು, ಇಲ್ಲಿನ ಸ್ಥಳೀಯ ಪರಿಸ್ಥಿತಿಯೇ ಬೇರೆ ಇದೆ. ಸರ್ಕಾರಿ ಲೆಕ್ಕವನ್ನು ಹೊರತು ಪಡಿಸಿ ಗ್ರಾಮಸ್ಥರು ಕೊಡುವ ಲೆಕ್ಕದ ಅನ್ವಯ ಎಲ್ಲಾ ಸಾವಿರ ಮಟ್ಟಿ ಗ್ರಾಮಗಳಲ್ಲಿ ಅಂದರೆ 15-20 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 50-100 ಜನ ಮೃತಪಟ್ಟಿದ್ದಾರೆ. ಆದರೆ ಧಾರವಾಡ ಜಿಲ್ಲೆಯ ಹಳ್ಳಿಗಳಲ್ಲಿ ಏ.25ರಿಂದ ಮೇ 18 ರವರೆಗೆ ಸಾವಿರಕ್ಕೂ ಅಧಿಕ ಜನ ಸತ್ತಿದ್ದು, ಸಾವಿನ ಸರಣಿ ಮುಂದುವರಿದಿದೆ. ಕಲಘಟಗಿ ತಾಲೂಕಿನ ಮಿಶ್ರಿಕೋಟಿಯಲ್ಲಿ ಬರೀ ಮೇ ತಿಂಗಳಿನಲ್ಲಿಯೇ 56 ಜನ ಮೃತಪಟ್ಟಿದ್ದಾರೆ. ಅದರಂತೆ ಹೆಬ್ಬಳ್ಳಿಯಲ್ಲಿ 44, ಅಮ್ಮಿನಭಾವಿ-47, ನರೇಂದ್ರ-44, ಗರಗ- 38, ಮೊರಬ- 46, ಉಪ್ಪಿನ ಬೆಟಗೇರಿ- 55, ಅದರಗುಂಚಿ-22, ಸಂಶಿ- 39, ಗುಡಗೇರಿ- 29, ಮುಗದ- 17, ನಿಗದಿ-22, ದೇವರಹುಬ್ಬಳ್ಳಿ- 15, ಗಳಗಿಹುಲಕೊಪ್ಪ- 44, ಶಿರಕೊಳ- 19, ತಿರ್ಲಾಪೂರ- 19, ಯಾದವಾಡ- 11, ಶಿಬಾರಗಟ್ಟಿ- 10, ಕುರುಬಗಟ್ಟಿ- 19, ಮನಗುಂಡಿ- 17, ಮನಸೂರು- 12, ವೀರಾಪೂರ- 19, ರಾಮಾಪೂರ- 12, ತೇಗೂರು- 12, ಬೇಲೂರು- 13, ಯಮನೂರು- 24, ಬ್ಯಾಹಟ್ಟಿ- 22, ಕಿರೇಸೂರು- 13, ಮಣಕವಾಡ-19 ಜನ ಮೃತಪಟ್ಟಿದ್ದಾರೆ. ಆದರೆ ಅವರ್ಯಾರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿರಲಿಲ್ಲ.

ಇನ್ನು ಸಾಯುತ್ತಿರುವವರ ಪೈಕಿ ಅತೀ ಹೆಚ್ಚಿನವರು 65ಕ್ಕಿಂತಲೂ ಹೆಚ್ಚಿನ ವಯಸ್ಸಿನವರೇ ಅಧಿಕವಾಗಿದ್ದಾರೆ. ಬರೀ ಕಫ, ಜ್ವರ ಮತ್ತು ನೆಗಡಿ ಕೆಮ್ಮಿನಿಂದಲೇ ಜನ ಸಾಯಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಈಗ ಹಳ್ಳಿಗರಲ್ಲಿ ಮೂಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next