ವಾಷಿಂಗ್ಟನ್: ಅಮೆರಿಕದ ಹಾಟ್‌ಸ್ಪಾಟ್ ಎಂದೇ ಗುರುತಿಸಿಕೊಂಡಿರುವ ನ್ಯೂಯಾರ್ಕ್ ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಅಲ್ಲಿ ಜನಜೀವನ ಹಾಗೂ ವ್ಯಾಪಾರ ಚಟುವಟಿಕೆಗಳು ಶುರುವಾಗಿವೆ. ಇಂಥ ಹೊತ್ತಿನಲ್ಲಿ ಅಮೆರಿಕದ ಅಲಾಸ್ಕದಿಂದ ಅರಿಝೋನಾ ವರೆಗಿನ ಇತರ ಕೆಲವು ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಸರಕಾರದ ನಿದ್ದೆಗೆಡಿಸಲಾರಂಭಿಸಿದೆ. ಜೂನ್ ಒಂದರಿಂದ ಒಂದು ವಾರ ಕಾಲ ಅಮೆರಿಕದ ರಾಜ್ಯಗಳಲ್ಲಿ ಕಂಡು ಬಂದ ಸರಾಸರಿ ಸೋಂಕು ಪ್ರಕರಣಗಳಲ್ಲಿ ಫೋರ್ಟೋರಿಕೋ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಹೊಸ ಪ್ರಕರಣಗಳು ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಆರೋಗ್ಯ ಸೌಲಭ್ಯಗಳು ಸರಿಯಾಗಿಲ್ಲದ ಗ್ರಾಮೀಣ ಭಾಗಗಳಲ್ಲೂ ಕಂಡು ಬರುತ್ತಿದ್ದು, ಅಲ್ಲೆಲ್ಲ ಕೋವಿಡ್ ಪ್ರಸರಣವನ್ನು ತಡೆಯಲು ಅಧಿಕಾರಿಗಳು ತೀವ್ರ ಶ್ರಮಪಡುವಂತಾಗಿದೆ.
ಕೋವಿಡ್ ಸೋಂಕು ಹಾಗೂ ಸಾವಿನ ಅಂಕಿಅಂಶಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ಅನುಸರಿಸಲು ದೇಶದ ಕೆಲವು ರಾಜ್ಯಗಳು ವಿಫಲವಾಗಿವೆ ಎಂದು ವಾಷಿಂಗ್ಟನ್ ಪೋಸ್ಟ್ ಹೇಳಿಕೊಂಡಿದ್ದು, ಆ ಕಾರಣದಿಂದ ದೇಶದ ಸಾವಿನ ಸಂಖ್ಯೆಯು ಈಗ ಅಧಿಕೃತವಾಗಿ ಘೋಷಿಸಿಕೊಂಡಿದ್ದಕ್ಕಿಂತಲೂ ಹೆಚ್ಚಾಗಿರಬಹುದು ಎಂದು ಭಾವಿಸಲಾಗಿದೆ.
ಅಧ್ಯಕ್ಷ ಟ್ರಂಪ್ ಅವರು ತನ್ನ “ಕೀಪ್ ಅಮೆರಿಕ ಗ್ರೇಟ್’ ರ‍್ಯಾಲಿಯನ್ನು ಮುಂದಿನ ವಾರಗಳಲ್ಲಿ ಮರು ಆರಂಭಿಸುವ ವಿಶ್ವಾಸವಿದೆ.