ಹು.ಬಾ.ವಡ್ಡಟ್ಟಿ.
ಮುಂಡರಗಿ: ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಕ್ಕಿಂತಲೂ ಪಟ್ಟಣ ಪ್ರದೇಶದಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ, ಕೋವಿಡ್ ಕರ್ಫ್ಯೂ ನಂತರ ಬೆಂಗಳೂರು, ಮಂಗಳೂರು, ಕೇರಳ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಬಂದವರಿಂದಲೇ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ.
ತಾಲೂಕಿನ 19 ಗ್ರಾಮ ಪಂಚಾಯಿತಿ ವ್ಯಾಪ್ತಿಯ 52 ಗ್ರಾಮಗಳಲ್ಲಿ ಐಸೋಲೇಷನ್ ಗೆ ಒಳಗಾದವರ ಪೈಕಿ ಪ್ರತಿ ಹಳ್ಳಿಗೆ ಇಬ್ಬರು, ಮೂವರಾದರೂ ಸಿಗುತ್ತಾರೆ. ಬೇರೆ ನಗರಗಳಿಂದ ವಲಸೆ ಬಂದವರಿಂದಲೇ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಕೋವಿಡ್ ಸೋಂಕು ಹಬ್ಬುತ್ತಿದೆ. ಕೊರೊನಾ ಕರ್ಫ್ಯೂ ಪಟ್ಟಣ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಅಷ್ಟೊಂದು ಕಠಿಣವಾಗಿ ಜಾರಿಗೊಂಡಿಲ್ಲ. ಏಕೆಂದರೆ ಗ್ರಾಮೀಣ ಪ್ರದೇಶದಲ್ಲಿ ಕಟ್ಟೆಗಳ ಮೇಲೆ, ಮರದ ಕೆಳಗೆ ಕುಳಿತು ಹರಟೆ ಹೊಡೆಯುವವರು, ಇಸ್ಪೀಟ್ ಆಡುವವರಿಂದಲೂ ಕೋವಿಡ್ ಸೋಂಕು ಹರಡುತ್ತಿದೆ.
ತಾಲೂಕಿನ 19 ಗ್ರಾಮ ಪಂಚಾಯಿತಿಗಳ ಪ್ರತಿ ಹಳ್ಳಿಯಲ್ಲೂ ಮೊದಲ ಹಂತದಲ್ಲಿ ಕೊರೊನಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜತೆಗೆ ಸಾರ್ವಜನಿಕ ಸ್ಥಳಗಳು, ಚರಂಡಿ, ರಸ್ತೆಗಳನ್ನು ಸ್ವತ್ಛ ಮಾಡಲಾಗಿದೆ. ಅಲ್ಲದೇ, ಪ್ರತಿ ಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಯಂತ್ರಗಳನ್ನು ಬಳಸಿ ಸೋಡಿಯಂ ಹೈಡ್ರೋಕ್ಲೋರಿಕ್ ದ್ರಾವಣ ಸಿಂಪಡಣೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಯಂತ್ರ ಬಳಸಿ ಸ್ಯಾನಿಟೈಸರ್ ಕಡ್ಡಾಯವಾಗಿ ಮಾಡುತ್ತಿದ್ದಾರೆ.
ಶುಕ್ರವಾರವಷ್ಟೇ ತಾಲೂಕಿನಲ್ಲಿ 94 ಕೋವಿಡ್ ಪಾಜಿಟಿವ್ ಪ್ರಕರಣಗಳು ದಾಖಲಾಗಿವೆ. ಆರ್‌ಟಿಪಿಸಿಆರ್ 79 ಮಾದರಿಗಳನ್ನು ಸಂಗ್ರಹಿಸಲಾಗಿದೆ. 21 ಜನ ಸೊಂಕೀತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹೋಂ ಐಸೋಲೇಷನ್‌ನಲ್ಲಿ 383 ಜನರಿದ್ದಾರೆ. 401ಸಕ್ರಿಯ ಪ್ರಕರಣಗಳಿವೆ. ಮೊದಲ ಅಲೆ ಮತ್ತು ಎರಡನೇ ಅಲೆಯಲ್ಲಿ ಇಲ್ಲಿಯವರೆಗೂ ಗ್ರಾಮೀಣ ಪ್ರದೇಶದಲ್ಲಿ 1249 ಪ್ರಕರಣಗಳು, ಮುಂಡರಗಿ ಪಟ್ಟಣದಲ್ಲಿ 750 ಪ್ರಕರಣಗಳು ಸೇರಿದಂತೆ ಒಟ್ಟು 1994 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಒಟ್ಟು 32 ಜನ ಸೊಂಕೀತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ಹರಡುತ್ತಿದ್ದಂತೆ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ಕರ್ಫ್ಯೂ ಅನ್ನು ಕಠಿಣಗೊಳಿಸಬೇಕು. ಇಲ್ಲದಿದ್ದರೆ ಸಮುದಾಯದಲ್ಲಿ ಸೋಂಕು ಹರಡುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.