ಹುಮನಾಬಾದ: ಕಳೆದ ಕೆಲ ದಿನಗಳ ಹಿಂದೆ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 21 ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು. ಇದೀಗ ಅಲ್ಪಸಂಖ್ಯಾತ ಇಲಾಖೆಯ ಮುರಾಜಿ ದೇಸಾಯಿ ವಸತಿ ಶಾಲೆಯ 15 ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
ಕಿತ್ತುರಾಣಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಲ್ಲಾ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೊವೀಡ್ ಪರೀಕ್ಷೆಗೆ ಮುಂದಾದ ಸಂದರ್ಭದಲ್ಲಿ ಮುರಾಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಕೂಡ ಪಾಸಿಟಿವ್ ಪತ್ತೆಯಾಗಿದೆ.
ಶಾಲೆಯಲ್ಲಿ 6ನೇ ತರಗತಿಯಿಂದ 10 ನೇ ತರಗತಿ ವರಗೆ ವರ್ಗಗಳಿದ್ದು, ಒಟ್ಟಾರೆ 216 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಕೆಲ ವಿದ್ಯಾರ್ಥಿಗಳಿಗೆ ಕೆಮ್ಮು, ಜ್ವರ, ನೆಗಡಿ ಇರುವ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಸಧ್ಯ ಯಾವುದೇ ವಿದ್ಯಾರ್ಥಿಗಳಿಗೆ ಗಂಭೀರ ಲಕ್ಷಣಗಳು ಕಂಡು ಬಂದಿಲ್ಲ. ಕೆಲ ಪಾಲಕರು ಕರೆ ಮಾಡಿ ಮಕ್ಕಳಿಗೆ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಸೂಚನೆ ಅನುಸಾರ ಮುಂದಿನ ಕ್ರಮ ವಹಿಸಲಾಗುವುದು ಎಂದು ಪ್ರಾಚಾರ್ಯ ಪ್ರಭಾಕರ್ ಮಾಹಿತಿ ನೀಡಿದ್ದಾರೆ.