ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಲ್ಲಿ 4ಬಾರಿ ರಾಜ್ಯದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿದ್ದು, ಪರೀಕ್ಷೆ ಪ್ರಮಾಣ ಹೆಚ್ಚಳವಾಗಿದ್ದರೂ ಸಾವಿನ ಪ್ರಮಾಣ ನಿಯಂತ್ರಣಕ್ಕೆ ಬಂದಿಲ್ಲ.
ಜಿಲ್ಲೆಯಲ್ಲಿ ಕೋವಿಡ್ ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯ ತೀವ್ರತೆ ಹೆಚ್ಚು. ಮೊದಲ ಅಲೆಯಲ್ಲಿ 2020ರ ಎಪ್ರಿಲ್ (ಶೇ. 25) ಹೊರತುಪಡಿಸಿ ಮರಣ ದರ ಶೇ. 4 ಕ್ಕಿಂತ ಏರಿಕೆಯಾಗಿರಲಿಲ್ಲ.
ಆಗ ಪರೀಕ್ಷೆ ಪ್ರಮಾಣ ಕಡಿಮೆ ಇತ್ತು. ಆದರೆ ಈಗ ದಿನವೂ ಹತ್ತು ಸಾವಿರದಷ್ಟು ಪರೀಕ್ಷೆ ನಡೆಸಲಾಗುತ್ತಿದೆ. ಹಾಗಾಗಿ ಪಾಸಿಟಿವ್ ಪ್ರಕರಣ ಪತ್ತೆ ಹೆಚ್ಚಾಗಿದೆ. ಆದರೆ ಮರಣ ಪ್ರಮಾಣ ಜುಲೈಯಲ್ಲಿ(3.02) ಅತೀ ಹೆಚ್ಚು ದಾಖಲಾದದ್ದು ಆತಂಕಕ್ಕೆ ಕಾರಣ. ಇನ್ನೂ 2 ಕ್ಕಿಂತ ಕೆಳಗಿಳಿಯಲು ಸಾಧ್ಯವಾಗಿಲ್ಲ. ಪರೀಕ್ಷೆ ಹೆಚ್ಚಾದರೂ ಸಾವಿನ ಪ್ರಮಾಣ ನಿಯಂತ್ರಣ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಜನಸಾಮಾನ್ಯರ ಪ್ರಶ್ನೆ.
ಜಿಲ್ಲೆಯಲ್ಲಿ 2021ರ ಮಾರ್ಚ್‌ನಲ್ಲಿ 1,256 ಕೋವಿಡ್ ಪ್ರಕರಣ ದಾಖಲಾಗಿ ಇಬ್ಬರು ಸಾವನ್ನಪ್ಪಿದ್ದರು. ಎಪ್ರಿಲ್‌ನಲ್ಲಿ 9,412 ಪಾಸಿಟಿವ್ ಮತ್ತು 15 ಮಂದಿ ಸಾವಿಗೀಡಾಗಿದ್ದರು. ಮೇಯಲ್ಲಿ ಕೊರೊನಾ ತೀವ್ರತೆ ಮತ್ತಷ್ಟು ಏರಿಕೆ ಕಂಡಿದ್ದು, ಒಂದೇ ತಿಂಗಳಲ್ಲಿ 31,090 ಮಂದಿಗೆ ಸೋಂಕು ತಗಲಿತ್ತು. 156 ಮಂದಿ ಸಾವನ್ನಪ್ಪಿದ್ದರು. ಜೂನ್‌ನಲ್ಲಿ 16,653 ಮಂದಿಗೆ ಪಾಸಿಟಿವ್, 282 ಸಾವು, ಜುಲೈಯಲ್ಲಿ 7,518 ಮಂದಿಗೆ ಕೊರೊನಾ ದೃಢಪಟ್ಟು 229 ಮಂದಿ ಸಾವನ್ನಪ್ಪಿದ್ದರು.
ಕೋವಿಡ್ ಪ್ರಕರಣ ಏರಿಕೆಯಾಗುತ್ತಿರುವುದಕ್ಕೆ ಆರೋಗ್ಯ ಇಲಾಖೆ ವಿವಿಧ ಕಾರಣ ನೀಡುತ್ತದೆ. ಕೋವಿಡ್ ತಪಾಸಣೆಯಲ್ಲಿ ದ.ಕ. ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದ್ದು ಪ್ರತೀ ದಿನ ಸರಾಸರಿ 10 ಸಾವಿರದಷ್ಟು ಪರೀಕ್ಷೆ ನಡೆಯುತ್ತದೆ. ಇನ್ನು ಕೇರಳ, ಮಹಾ ರಾಷ್ಟ್ರದ ಗಡಿ ಭಾಗದಿಂದ ಬರುವ ಪ್ರಯಾಣಿಕರಲ್ಲೂ ಕೊರೊನಾ ಕಾಣಿಸಿ ಕೊಳ್ಳುತ್ತಿದೆ. ಅದೇ ರೀತಿ ನೆರೆಯ ಜಿಲ್ಲೆಗಳಿಂದಲೂ ದ.ಕ.ದಲ್ಲಿ ಸೋಂಕು ದೃಢಪಡುತ್ತಿದೆ. ಇತ್ತೀಚೆಗಷ್ಟೇ ಪಾರಾಮೆಡಿಕಲ್ ತರಗತಿಗಳು ಆರಂಭ ವಾಗಿದ್ದು ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಗಳಲ್ಲಿಯೂ ಸೋಂಕು ದೃಢಪಡುತ್ತಿದೆ. ದ.ಕ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳಿಂದ ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ಕೊರೊನಾ ಕಾಣಿಸಿಕೊಳ್ಳುತ್ತಿದೆ.
ಹೊರ ಜಿಲ್ಲೆಯವರು ದಕ್ಸಿಣ ಕನ್ನಡ ಜಿಲ್ಲೆಯಲ್ಲಿರುವಾಗ ಕೊರೊನಾ ದೃಢಪಟ್ಟರೆ ಆ ವರದಿ ದ.ಕ. ಜಿಲ್ಲೆಗೇ ಸೇರುತ್ತದೆ. ಈ ಎಲ್ಲ ಕಾರಣಗಳಿಂದ ದ.ಕ.ದಲ್ಲಿ ದಿನದ ಪ್ರಕರಣ ಇಳಿಕೆಯಾಗುತ್ತಿಲ್ಲ.
ಅದೇ ರೀತಿ, ಇದೀಗ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆ ಬಂದ ಬಳಿಕ ಯಾರೇ ವ್ಯಕ್ತಿ ಕೊರೊನಾ ದೃಢಪಟ್ಟು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ ಆ ಸಂಖ್ಯೆ ಆಯಾ ಜಿಲ್ಲೆಗೆ ಸೇರುತ್ತದೆ. ಅದೇ ಕಾರಣಕ್ಕೆ ಹೊರ ಜಿಲ್ಲೆಯ ವ್ಯಕ್ತಿ ಕೊರೊನಾದಿಂದ ಮೃತಪಟ್ಟರೆ ಅದು ದ.ಕ. ಜಿಲ್ಲೆಯ ಅಂಕಿ ಅಂಶಕ್ಕೆ ಸೇರ್ಪಡೆಯಾಗುತ್ತದೆ.
ಮಾರ್ಗಸೂಚಿ ಪಾಲಿಸಿ :
ಜಿಲ್ಲೆಯಲ್ಲಿ ಕೊರೊನಾ ದೈನಂದಿನ ಪ್ರಕರಣ ಏರಿಕೆಯಾಗುತ್ತಿದ್ದು, ಕಳೆದ ತಿಂಗಳು ಶೇ. 3.05 ಸಿಎಫ್‌ಆರ್ ದರ ಇತ್ತು. ಪ್ರತಿಯೊಬ್ಬರೂ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಲಸಿಕೆ ಪಡೆದಿದ್ದರೂ ಅವರಿಗೆ ಮತ್ತೆ ಸೋಂಕು ಬಾಧಿಸುವುದಿಲ್ಲ ಎಂದೇನಿಲ್ಲ. ಪಡೆದವರಲ್ಲಿ ತೀವ್ರತೆ ಕಡಿಮೆ ಇರುತ್ತದೆ. ಆದ್ದರಿಂದ ಲಸಿಕೆ ಪಡೆದುಕೊಂಡವರು ಕೂಡ ಜಾಗರೂಕರಾಗಿರಬೇಕು. ರೋಗದ ಲಕ್ಷಣ ಕಾಣಿಸಿಕೊಂಡರೆ ನೇರವಾಗಿ ಮೆಡಿಕಲ್‌ಗಳಿಂದ ಮಾತ್ರೆ ತೆಗೆದುಕೊಳ್ಳದೆ ಕೊರೊನಾ ಪತ್ತೆ ತಪಾಸಣೆ ನಡೆಸಿ ವೈದ್ಯರ ಸಲಹೆ ಪಡೆಯುವುದು ಸೂಕ್ತ.
– ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ