ವರದಿ : ದತ್ತು ಕಮ್ಮಾರ
ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಆರ್ಭಟ ಇದ್ದರೂ ಸಾವಿನ ಸಂಖ್ಯೆಯಲ್ಲಿ ತುಂಬಾ ಕಡಿಮೆಯಿದೆ. ಇದು ನಿಜಕ್ಕೂ ಜಿಲ್ಲೆಯ ಜನರಲ್ಲಿ ನೆಮ್ಮದಿ ತರಿಸುವ ಸಂಗತಿ. ಸೋಂಕು ತಗುಲಿದ ಬಹುಪಾಲು ಜನ ಮನೆ ಆರೈಕೆ(ಹೋಮ್ ಐಸೋಲೇಷನ್)ಗೆ ಒಳಗಾಗಿ ಗುಣಮುಖ ಆಗುತ್ತಿರುವುದು ಗಮನಾರ್ಹ ವಿಷಯ.
ಹೌದು. ಜಿಲ್ಲೆಯಲ್ಲಿ ಜನರಿಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲದವರು ಮನೆಯಲ್ಲಿಯೇ ಆರಾಮಾಗಿ ಪ್ರತ್ಯೇಕವಾಗಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆಯೂ ಹೆಚ್ಚು ನಿಗಾ ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ. 70ರಷ್ಟು ಜನರು ಹೋಂ ಐಸೋಲೇಷನ್‌ಗೆ ಒಳಗಾಗಿ ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚು ನಿಗಾ ವಹಿಸುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಯಾವುದೇ ಕೊರತೆಯಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ 250 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಐಸಿಯು ಕೊಠಡಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಸೋಂಕಿತರ ಚಿಕಿತ್ಸೆಗೆ ನಿಗ ದಿತ ಸಮಯಕ್ಕೆ ತಕ್ಕಂತೆ ವೈದ್ಯರನ್ನು ನಿಯೋಜಿಸಲಾಗಿದೆ. ಅದಕ್ಕೆ ತಕ್ಕಂತೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
ಆಸ್ಪತ್ರೆಗಳಲ್ಲಿ ಹೇಳಿಕೊಳ್ಳುವಂತ ಸಮಸ್ಯೆಯೂ ಕಾಣುತ್ತಿಲ್ಲ. ಅನ್ಯ ಜಿಲ್ಲೆಗಳಿಗೆ ಹೋಲಿಸಿದರೆ ಕೊಪ್ಪಳ ಜಿಲ್ಲೆ ಕೋವಿಡ್ ಎರಡನೇ ಅಲೆಯ ವಿಚಾರದಲ್ಲಿ ಸದ್ಯ ತುಂಬ ಸುರಕ್ಷಿತವಾಗಿದೆ ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಏಕೆಂದರೆ ಜಿಲ್ಲೆಯಲ್ಲಿಯೇ ಕೈಗಾರಿಕೆಗಳಿಗೆ ಅನ್ಯ ಭಾಗಕ್ಕೆ ಆಕ್ಸಿಜನ್ ಪೂರೈಕೆಯಾಗುತ್ತಿರುವುದು ನೆಮ್ಮದಿಯ ವಿಚಾರವಾಗಿದೆ. ಇನ್ನು ಎರಡನೇ ಅಲೆಯ ವೇಳೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ತುಂಬಾ ಕಡಿಮೆಯಿದೆ. ಸೋಂಕು ಎಷ್ಟು ಜನರಿಗೆ ತಗುಲಿದರೂ ತೊಂದರೆಯಿಲ್ಲ. ಆದರೆ ಸಾವಿನ ಸಂಖ್ಯೆಯು ಏರಿಕೆಯಾಗಬಾರದು ಎನ್ನುವುದು ಜನರಲ್ಲಿ ಇರುವ ಮಾತು.
ಮೊದಲನೇ ಅಲೆಗೆ ಹೋಲಿಕೆ ಮಾಡಿದರೆ ಎರಡನೇ ಅಲೆ ವೇಳೆಗೆ ಕೊಪ್ಪಳ ಜಿಲ್ಲಾಡಳಿತವು ವೈದ್ಯಕೀಯ ವ್ಯವಸ್ಥೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಜನರಿಗೆ ಕೋವಿಡ್ ಸೋಂಕಿನ ಲಕ್ಷಣಗಳಿಲ್ಲದೇ ಬಹುಪಾಲು ಜನರಿಗೆ ಸೋಂಕು ದೃಢಪಡುತ್ತಿದ್ದು, ಅಂತಹವರನ್ನು ಸರ್ಕಾರಿ ಕಟ್ಟಡದಲ್ಲಿ ಕ್ವಾರಂಟೈನ್ ಮಾಡಲೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೆಲವರು ನಾವು ಮನೆಯಲ್ಲಿಯೇ ಕ್ವಾರಂಟೈನ್ ಇರುತ್ತೇವೆ ಎನ್ನುವವರಿಗೂ ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆಯೂ ಸೂಚನೆ ನೀಡಿ ಕಾಲ ಕಾಲಕ್ಕೆ ಅವರಿಗೆ ಕರೆ ಮಾಡಿ ಸೋಂಕಿನ ಬಗ್ಗೆಯೂ ವಿಚಾರಿಸಲಾಗುತ್ತಿದೆ.
9 ಖಾಸಗಿ ಆಸ್ಪತ್ರೆಗಳಲ್ಲೂ ವ್ಯವಸ್ಥೆ: ಇನ್ನೂ ಜಿಲ್ಲೆಯಲ್ಲಿ 9 ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡಲು ಮುಂದೆ ಬಂದಿದ್ದು, ಕೆಲವು ಜಿಲ್ಲಾಡಳಿತದಿಂದ ಅನುಮತಿ ಪಡೆದಿದ್ದರೆ ಇನ್ನು ಕೆಲವು ಆಸ್ಪತ್ರೆಗಳು ಅನುಮತಿ ಪಡೆಯುಲು ಮುಂದಾಗಿವೆ. ಆ ಆಸ್ಪತ್ರೆಗಳಲ್ಲಿ ಒಟ್ಟು ಬೆಡ್‌ಗಳ ಸಾಮರ್ಥ್ಯದಲ್ಲಿ ಶೇ. 50ರಷ್ಟು ಬೆಡ್‌ಗಳನ್ನು ಕೋವಿಡ್‌ಗೆ ಮೀಸಲಿಡಬೇಕು. ಇನ್ನುಳಿದ ಶೇ. 50 ಬೆಡ್‌ಗಳಲ್ಲಿ ಸಾಮಾನ್ಯ ರೋಗಿಗಳ ಚಿಕಿತ್ಸೆಗೆ ಮೀಸಲಿಡಬೇಕು ಎನ್ನುವ ನಿಯಮವನ್ನೂ ಖಾಸಗಿ ಆಸ್ಪತ್ರೆಗಳ ಮುಂದಿಟ್ಟಿವೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಜಿಲ್ಲಾಡಳಿತವು ಕೋವಿಡ್ ಕೇಸ್ ಬರುವಂತಹವರ ಮೇಲೆ ಹೆಚ್ಚಿನ ನಿಗಾ ವಹಿಸುತ್ತಿದ್ದು, ಆಸ್ಪತ್ರೆಗಳಲ್ಲೂ ಯಾವುದೇ ಸಮಸ್ಯೆ ಉಲ್ಬಣಗೊಳ್ಳದಿರುವುದು ಜನರಲ್ಲೂ ಸಮಾಧಾನ ತರಿಸಿದೆ. ಕೋವಿಡ್ ದೃಢಪಟ್ಟವರು ಆತಂಕಕ್ಕೆ ಒಳಗಾಗದೇ ಆರೋಗ್ಯದ ಬಗ್ಗೆ ನಿಗಾ ವಹಿಸಿ ಸೋಂಕಿನಿಂದ ಗುಣಮುಖರಾಗಿ ಮತ್ತೆ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕಿದೆ.