ವರದಿ : ದತ್ತು ಕಮ್ಮಾರ
ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಉಲ್ಬಣಗೊಳ್ಳುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿಯೂ ದಿನೇ ದಿನೇ ಏರಿಕೆಯಾಗುತ್ತಿದೆ. ಈಗಾಗಲೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಜಿಲ್ಲಾ ಮಟ್ಟದ ಅಧಿ ಕಾರಿಗಳ ಸಭೆ ನಡೆಸಿ, ಜಾತ್ರೆ, ಸಮಾರಂಭ ರದ್ದತಿಗೆ ಸೂಚಿಸಿದ್ದಾರಲ್ಲದೇ ಯುದ್ದೋಪಾದಿಯಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆಯೂ ಒತ್ತು ನೀಡಿದ್ದಾರೆ. ಇಷ್ಟಾದರೂ ಜನರಲ್ಲಿ ಸೋಂಕಿನ ಬಗ್ಗೆ ನಿರ್ಲಕ್ಷé ಭಾವನೆ ಹೆಚ್ಚು ಕಾಣುತ್ತಿದೆ.
ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಎಲ್ಲೆಡೆಯೂ ಸೋಂಕಿತರ ಸಂಖ್ಯೆ ಏರುತ್ತಿರುವ ಜತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ. ಕೊಪ್ಪಳ ಜಿಲ್ಲೆಯಲ್ಲೂ ಕಳೆದ ನಾಲ್ಕೈದು ದಿನಗಳಿಂದ ಸೋಂಕಿತರ ಸಂಖ್ಯೆಯೂ ನೂರರ ಗಡಿ ದಾಟಿದೆ. ಕೆಲ ತಿಂಗಳ ಬಳಿಕ ಏ.16ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಜಿಲ್ಲಾ ಪ್ರವಾಸ ಕೈಗೊಂಡು ಜಿಲ್ಲಾ ಮಟ್ಟದ ಅ ಧಿಕಾರಿಗಳ ಸಭೆ ನಡೆಸಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
ಸಭೆ ನಡೆಸಿದ ದಿನದಂದೇ ಕೂಡಲೇ ಜನದಟ್ಟಣೆ ಪ್ರದೇಶದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಜಾತ್ರೆ, ಸಮಾರಂಭ ರದ್ದುಪಡಿಸಬೇಕು. ಸರ್ಕಾರದ ಮಾರ್ಗಸೂಚಿಯನ್ವಯ ನಿಗದಿ ತ ಮಿತಿಯಲ್ಲಿಯೇ ಅನುಮತಿ ನೀಡಬೇಕೆಂಬ ಕೆಲವೊಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಮಧ್ಯೆಯೂ ಜಿಲ್ಲೆಯ ವಿವಿಧ ಭಾಗದಲ್ಲಿ ಸಮಾರಂಭ, ಜಾತ್ರೆಗಳು ಭರ್ಜರಿಯಾಗಿ ನಡೆಯುತ್ತಿವೆ. ಪೊಲೀಸರು ಅಂತಹ ಜಾತ್ರೆ ನಡೆಯುವ ಗ್ರಾಮಗಳಿಗೆ ತೆರಳಿ ಜನರ ವಿರುದ್ಧವೂ ಕೇಸ್ ದಾಖಲು ಮಾಡುತ್ತಿದ್ದಾರೆ. ಕೋವಿಡ್ ಬಗ್ಗೆ ತುಂಬ ನಿಗಾ ವಹಿಸಬೇಕು.
ಯುದ್ದೋಪಾದಿಯಲ್ಲಿ ಅಧಿಕಾರಿಗಳು ಕೆಲಸ ಮಾಡಿದರೆ ಮಾತ್ರ ಸೋಂಕು ನಿಯಂತ್ರಣ ಸಾಧ್ಯ. ಜನರಿಗೆ ಕೇವಲ ದಂಡ ಹಾಕುವುದೊಂದೇ ಅಲ್ಲ, ಬದಲಾಗಿ ಅವರಿಗೆ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆನ್ನುವ ಸೂಚನೆಯನ್ನೂ ನೀಡಿದ್ದಾರೆ. ಆದರೆ ಸಚಿವರು ಅಧಿ ಕಾರಿಗಳ ಪ್ರಗತಿ ಪರಿಶೀಲನೆ ನಡೆಸಿದ್ದಾರೆಯೇ ವಿನಃ ಜಿಲ್ಲೆಯಲ್ಲಿನ ಕೋವಿಡ್ ಸೇರಿ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ವಿಧಾನ ಹೇಗಿದೆ?, ಆಕ್ಸಿಜನ್, ವೆಂಟಿಲೇಟರ್, ಐಸಿಯು ಕೊಠಡಿಗಳ ವ್ಯವಸ್ಥೆ ಹೇಗಿದೆ? ಎಂದು ಪರಿಶೀಲಿಸಿಲ್ಲ. ಜಿಲ್ಲಾ ಆರೋಗ್ಯ ಇಲಾಖೆ ನಮ್ಮಲ್ಲಿ ಆಕ್ಸಿಜನ್, ವೆಂಟಿಲೇಟರ್ ಸೇರಿ, ಬೆಡ್‌ಗಳ ಕೊರತೆಯಿಲ್ಲ ಎಂದೆನ್ನುತ್ತಿದ್ದರೂ ಅವು ಯಾವ ಸ್ಥಿತಿಯಲ್ಲಿವೆ?, ವ್ಯವಸ್ಥಿತ ಸ್ಥಿತಿಯಲ್ಲಿ ಇವೆಯೇ? ಅಥವಾ ಲೆಕ್ಕಕ್ಕೆ ಮಾತ್ರ ಇವೆಯೇ ಎನ್ನುವ ಕುರಿತು ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಅಲ್ಲದೇ ಸರ್ಕಾರದ ಪ್ರತಿಯೊಂದು ಮಾರ್ಗಸೂಚಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಲು ಆಯಾ ತಾಲೂಕು ಮಟ್ಟದ ಅಧಿಕಾರಿಗಳು ಕೆಲಸ ಮಾಡಬೇಕೆನ್ನುವ ಸೂಚನೆ ನೀಡಿದ್ದಾರೆ. ಆದರೆ ಕೆಲ ಅಧಿಕಾರಿ ವರ್ಗ ನಗರ ಕೇಂದ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸೋಂಕಿನ ಬಗ್ಗೆ ಯಾರೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ. ಜನರಲ್ಲಿ ಕೋವಿಡ್ ಕುರಿತು ಜಾಗೃತಿಯಿದೆ. ಆದರೆ ನಿರ್ಲಕ್ಷé ಭಾವನೆಯೇ ಹೆಚ್ಚಾಗಿದೆ. ಇಲ್ಲಿ ಕೆಲವೊಂದು ಇಲಾಖೆಗಳ ಸಮನ್ವಯದ ಕೊರತೆಯೂ ಕಾಡುತ್ತಿದೆ. ಕೆಲವೇ ಇಲಾಖೆ ಅ ಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರೆ. ಇನ್ನು ಹಲವು ಇಲಾಖೆಗಳು ಕೋವಿಡ್ ಜಾಗೃತಿ ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ಸುಮ್ಮನಿರುವುದು ಆಶ್ಚರ್ಯ ತರಿಸಿದೆ. ಸಾಮಾನ್ಯ ರೋಗಿಗಳಿಗೆ ತೊಂದರೆ: ಜಿಲ್ಲೆಯಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿರುವುದು ಒಂದೆಡೆ ಯಾದರೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಸಾಮಾನ್ಯ ರೋಗಿಗಳಿಗೆ ತೊಂದರೆ ಎದುರಾಗುತ್ತಿದೆ. ಅವರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದ ಅವರು ಆಸ್ಪತ್ರೆಯಲ್ಲಿಯೇ ಗಂಟೆಗಟ್ಟಲೇ ಕುಳಿತು ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವ ಸ್ಥಿತಿ ಎದುರಾಗಿದೆ. ಸಚಿವರೂ ಸಹ ಸರ್ಕಾರವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಜನರ ಸಹಕಾರವೂ ಬಹು ಮುಖ್ಯವಾಗಿ ಬೇಕು ಎಂದಿದ್ದಾರೆ.