ಹಾಸನ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 206 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿಗ ಸೋಂಕಿತರ ಸಂಖ್ಯೆ 6378ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 167ಕ್ಕೆ ಏರಿಕೆಯಾಗಿದೆ.
ಮಂಗಳವಾರ ಸೋಂಕು ದೃಢಪಟ್ಟ 206 ಜನರ ಪೈಕಿ ಹಾಸನ ತಾಲೂಕಿನ 82 ಜನರಿದ್ದರೆ ಅರಸೀಕೆರೆ ತಾಲೂಕಿನ 38 ಜನರಿಗೆ ಸೋಂಕು ತಗುಲಿದೆ. ಚನ್ನರಾಯ ಪಟ್ಟಣ ತಾಲೂಕಿನ 26 ಮಂದಿ, ಬೇಲೂರು ತಾಲೂಕಿನ 22 ಮಂದಿ, ಅರಕಲಗೂಡು ತಾಲೂಕಿನ 17 ಮಂದಿ, ಆಲೂರು ತಾಲೂಕಿನ 10 ಮಂದಿ, ಹೊಳೆನರಸೀಪುರ ತಾಲೂಕಿನ 8 ಮಂದಿ, ಸಕಲೇಶಪುರ ತಾಲೂಕಿನ 2 ಮಂದಿ ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ಕುಮಾರ್ ಮಾಹಿತಿ ನೀಡಿದ್ದಾರೆ.
144 ಮಂದಿ ಗುಣಮುಖ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ ಮಂಗಳವಾರ 144 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 4241 ಮಂದಿ ಗುಣಮುಖರಾಗಿದ್ದಾರೆ. ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿರುವ 57 ಜನ ಸೇರಿ ಒಟ್ಟು 1970 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಮಂಗಳವಾರ ಮೃತಪಟ್ಟ ಇಬ್ಬರಲ್ಲಿ ಒಬ್ಬರು ಬೇಲೂರು ತಾಲೂಕಿಗೆ ಸೇರಿದ್ದು, ಮತ್ತೂಬ್ಬರು ಚನ್ನರಾಯಪಟ್ಟಣ ತಾಲೂಕಿನವರು ಎಂದು ತಿಳಿಸಿದ್ದಾರೆ.
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು: ಕೋವಿಡ್ ಸೋಂಕು ದಿನೇ, ದಿನೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅನಗತ್ಯವಾಗಿ ಮನೆಯಿಂದ ಹೊರ ಬಾರದು. ಅನಿವಾರ್ಯವಾಗಿ ಮನೆಯಿಂದ ಹೊರ ಬರಬೇಕಾದ ಅವಶ್ಯಕತೆ ಇದ್ದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜನ ಜಂಗುಳಿಯಲ್ಲಿ ಸೇರಬಾರದು. ಜ್ವರ, ಕೆಮ್ಮು,ಶೀತ, ನೆಗಡಿಯಂತಹ ಕೊರೊನಾ ರೋಗ ಲಕ್ಷಣಗಳಿದ್ದಲ್ಲಿ ತಕ್ಷಣ ಪರೀಕ್ಷೆಗೊಳಪಟ್ಟು ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ. ಕೋವಿಡ್ ಸೋಂಕಿತರಿಗೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ಮತ್ತೆರಡು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.