ಗದಗ: ಜಿಲ್ಲೆಯಲ್ಲಿ ಹೊಸದಾಗಿ 177 ಜನರಿಗೆ ಕೋವಿಡ್ ಸೋಂಕು ಕಂಡುಬಂದಿದೆ. ಜೊತೆಗೆ 100 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 5,349ಕ್ಕೇರಿದ್ದು, ಅದರಲ್ಲಿ 3744 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಸದ್ಯ 1526 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯ ಗದಗ-105, ಮುಂಡರಗಿ-21, ನರಗುಂದ-27, ರೋಣ-8, ಶಿರಹಟ್ಟಿ-11 ಹಾಗೂ ಹೊರ ಜಿಲ್ಲೆಯ ಐವರಿಗೆ ಸೋಂಕು ಖಚಿತವಾಗಿದೆ.
ಮತ್ತೆ ಮೂವರ ಬಲಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮತ್ತೆ ಮೂವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಈ ವರೆಗೆ 79 ಜನರು ಕೋವಿಡ್‌ನಿಂದ ಕೊನೆಯುಸಿರೆಳೆದಿದ್ದಾರೆ.
ಗಜೇಂದ್ರಗಡದ 48 ವರ್ಷದ ವ್ಯಕ್ತಿ(ಪಿ-334130)ಗೆ ಆ. 21ರಂದು ಸೋಂಕು ದೃಢಪಟ್ಟಿದ್ದು, ಹೃದಯ ಸಂಬಂಧಿ ಕಾಯಿಲೆ, ಶಾಸ್ವಕೋಶದ ತೊಂದರೆ ಹಾಗೂ ನಿಮೋನಿಯಾದಿಂದಾಗಿ ಆ. 25ರಂದು ಕೊನೆಯುಸಿರೆಳೆದರು. ಕೊಪ್ಪಳ ಜಿಲ್ಲೆ ಕಿನ್ನಾಳದ 65 ವರ್ಷದ ವೃದ್ಧ(ಪಿ-334131)ನಿಗೆ ಆ. 19ರಂದು ಕೋವಿಡ್ ಖಚಿತವಾಗಿದ್ದು. ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಆ. 22ರಂದು ಸಾವನ್ನಪ್ಪಿದ್ದಾರೆ. ನರಗುಂದ ನಿವಾಸಿ 39 ವರ್ಷದ ವ್ಯಕ್ತಿ(ಪಿ-334129) ಗೆ ಆ. 25ರಂದು ಕೋವಿಡ್ ದೃಢಪಟ್ಟಿದ್ದು, ಜ್ವರ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಆ. 26ರಂದು ಕೊನೆಯುಸಿರೆಳೆದರು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.
……………………………………………………………………………………………………………………………………………………
ಕೋವಿಡ್‌ಗೆ ಸಾವಯವ ಕೃಷಿಕ ಚನ್ನಬಸಪ್ಪ ಬೂದಿಹಾಳ ಸಾವು : ಮುಂಡರಗಿ: ತಾಲೂಕಿನ ಜಂತ್ಲಿ-ಶಿರೂರು ಗ್ರಾಮದ ಸಾವಯವ ಕೃಷಿಕ ಚನ್ನಬಸಪ್ಪ ಬೂದಿಹಾಳ (70) ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಚನ್ನಬಸಪ್ಪ ಬೂದಿಹಾಳ ವಾರದಿಂದ ಅನಾರೋಗ್ಯದ ಕಾರಣಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ. ಎರಡು ದಶಕಗಳಿಂದಲೂ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಚನ್ನಬಸಪ್ಪ ಬೂದಿಹಾಳ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಜೋಳ, ಗೋಧಿ , ಸಿರಿಧಾನ್ಯಗಳಾದ ಸಾಮೆ, ನವಣೆ, ರಾಗಿ ಬೆಳೆದು ಮಾರಾಟ ಮಾಡಲು ಮಳಿಗೆಗಳನ್ನು ತೆರೆದಿದ್ದರು. ಸಾವಯವ ಕೃಷಿ ಪ್ರಚಾರ, ಜಾಗೃತಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಗದಗ, ಧಾರವಾಡ, ಹಾವೇರಿ ಸಾವಯವ ಕೃಷಿ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಗದಗನ ಧರಿತ್ರಿ ಬಳಗದ ಹಿರಿಯ ಸದಸ್ಯರಾಗಿದ್ದರು.