Advertisement

ವಿದೇಶಿ ನೆಲದಲ್ಲಿ ಕಲಿಕೆಯ ಆಸೆಗೆ ಕೋವಿಡ್‌ ಸೋಂಕಿನ ಕರಿನೆರಳು

01:58 PM Jun 11, 2020 | sudhir |

ಮಣಿಪಾಲ: ವಿದೇಶದಲ್ಲಿ ಕಲಿಯುವುದು ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಂದು ಕನಸು. ಇದನ್ನು ನನಸು ಮಾಡುವತ್ತ ಅವರು ಪ್ರಯತ್ನಿಸಿಯೂ ಇರುತ್ತಾರೆ. ಕೋರ್ಸ್‌ ವಿಚಾರ ತಿಳಿದುಕೊಂಡು ನಿರ್ದಿಷ್ಟ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಿ, ಕಲಿಕೆಗೆ ಸಾಲ ಪಡೆದು ಎಲ್ಲವನ್ನೂ ಮಾಡುವಷ್ಟರಲ್ಲಿ ಕೋವಿಡ್‌ ಸೋಂಕಿನ ಮಹಾಮಾರಿ ಈ ಕನಸನ್ನೇ ಅಲುಗಿಸಿ ಬಿಟ್ಟಿದೆ. ಹೋಗುವುದು ಹೇಗೆ ಎಂಬ ಚಿಂತೆ ಮತ್ತು ಭವಿಷ್ಯ ಅತಂತ್ರವಾದರೆ ಎಂಬ ಆತಂಕವೂ ಕಾಡಿದೆ.

Advertisement

ಸದ್ಯದ ಪರಿಸ್ಥಿತಿ
ಸದ್ಯ ವಿದೇಶಗಳ ಎಲ್ಲ ಪ್ರಮುಖ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ದೈಹಿಕ ಹಾಜರಾತಿಯನ್ನು ಅಷ್ಟಾಗಿ ಬಯಸುತ್ತಿಲ್ಲ. ವಿವಿಧ ವಿಶ್ವವಿದ್ಯಾಲಯಗಳು ಕೋವಿಡ್‌ ವಿಚಾರದಲ್ಲಿ ವಿವಿಧ ನಿಯಮಗಳನ್ನು ಹೊಂದಿವೆ. ಆದರೆ ಹೆಚ್ಚಿನವುಗಳು ಆನ್‌ಲೈನ್‌ ತರಗತಿಗಳನ್ನು ನೆಚ್ಚಿಕೊಂಡಿವೆ. ವಿದ್ಯಾರ್ಥಿಗಳಿಗೆ ಸ್ಟಡಿ ಟೂಲ್‌ಗ‌ಳನ್ನೂ ಇವುಗಳ ಮೂಲಕವೇ ಒದಗಿಸಿಕೊಡುತ್ತಿವೆ. ಆನ್‌ಲೈನ್‌ ಲೈಬ್ರರಿಯಲ್ಲೇ ಓದಿಗೆ ಹೆಚ್ಚು ಅವಕಾಶವನ್ನೂ ನೀಡಲಾಗಿದೆ. ಆದರೆ ಕೋವಿಡ್‌ ಮುಂದುವರಿದು, ಸದ್ಯ ವಿದೇಶಿ ವಿಶ್ವವಿದ್ಯಾಲಯಗಳಿಗೆ ಹಣಕಟ್ಟಿದ ವಿದ್ಯಾರ್ಥಿಗಳಿಗೆ ನೀವೂ ಆನ್‌ಲೈನ್‌ನಲ್ಲೇ ಪಾಠ ಕೇಳಿಸಿಕೊಳ್ಳಿ ಎಂದರೆ? ಎಂಬ ಚಿಂತೆ ಇದೆ.

ನಿರ್ದಿಷ್ಟ ವಿಶ್ವವಿದ್ಯಾಲಯದ ಕ್ಯಾಂಪಸ್ಸು, ಅಲ್ಲಿನ ಬೋಧಕ ವರ್ಗ, ಲೈಬ್ರರಿ ಸಂಪರ್ಕ ಇತ್ಯಾದಿಗಳು ವಿದ್ಯಾರ್ಥಿಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಮತ್ತು ಕಲಿಕೆಗೆ ಅದು ಪ್ರತ್ಯೇಕ ಬೆಂಬಲ ನೀಡುತ್ತದೆ. ಆದರೆ ಆನ್‌ಲೈನ್‌ನಲ್ಲೇ ಪಾಠ ಕೇಳಿಸಿಕೊಳ್ಳಿ ಅಂದರೆ ಅಷ್ಟೇನೂ ಚೆನ್ನಾಗಿರದು ಎನ್ನುವುದು ವಿದ್ಯಾರ್ಥಿಗಳ ನುಡಿ.

ಭಾರತ ದ್ವಿತೀಯ
ವಿದೇಶಿ ವಿವಿಗಳಲ್ಲಿ ಅತಿ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನು ಹೊಂದಿರುವ ದೇಶಗಳಲ್ಲಿ ಚೀನದ ಅನಂತರದ ಸ್ಥಾನ ಭಾರತದ್ದು. ವಿದೇಶಾಂಗ ಇಲಾಖೆ ಪ್ರಕಾರ, ಜು.2019ರ ವೇಳೆಗೆ 10.9 ಲಕ್ಷ ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಬ್ರಿಟನ್‌ನ ಪ್ರತಿಷ್ಠಿತ ಕೇಂಬ್ರಿಡ್ಜ್ ವಿವಿಯನ್ನೇ ತೆಗೆದುಕೊಂಡರೆ, ಅಲ್ಲಿ 2020-21ನೇ ಸಾಲಿನಲ್ಲಿ ಮುಖತಃ ನಡೆಸುವ ಎಲ್ಲ ತರಗತಿಗಳನ್ನು ರದ್ದುಪಡಿಸಲಾಗಿದೆ. ಇದರ ಬದಲಿಗೆ ವರ್ಚುವಲ್‌ ತರಗತಿ ಮತ್ತು ಆನ್‌ಲೈನ್‌ ಸ್ಟ್ರೀಮಿಂಗ್‌ ಬಗ್ಗೆ ಯೋಜಿಸಿದೆ. ಇದು 2021ರ ಬೇಸಗೆ ವರೆಗೆ ಚಾಲ್ತಿಯಲ್ಲಿರಲಿದೆ. ಇಲ್ಲಿ ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ.

ಕೋವಿಡ್‌ನಿಂದಾಗಿ ಸಮಸ್ಯೆ
ಶೈಕ್ಷಣಿಕ ಮಾರುಕಟ್ಟೆ ಕುರಿತ ಸರ್ವೇ ಒಂದರಲ್ಲಿ ಶೇ.50.89ರಷ್ಟು ಮಂದಿ ಕೋವಿಡ್‌ನಿಂದಾಗಿ ನಮ್ಮ ವಿದೇಶಿ ಕಲಿಕೆ ಆಸೆಗೆ ತಣ್ಣೀರು ಬಿದ್ದಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಹಾಗೆಯೇ ಶೇ.49.2ರಷ್ಟು ಮಂದಿ ಹಾಗೇನೂ ಇಲ್ಲ ಎಂದು ಹೇಳಿದ್ದಾರೆ. ಆದರೆ ಹೆಚ್ಚಿನ ಮುಂದೆ ಭವಿಷ್ಯ ಏನು ಎಂಬುದರ ಬಗ್ಗೆ ತಿಳಿದಿಲ್ಲ ಎಂದೇ ಹೇಳಿದ್ದಾರಂತೆ.

Advertisement

ಭವಿಷ್ಯದ ಬಗ್ಗೆ ಗೊಂದಲ
ಇನ್‌ಸ್ಟಿಟ್ಯೂಷನ್ಸ್‌ ಎಜುಕೇಶನ್‌.ಕಾಮ್‌ ವೆಬ್‌ನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಕೋವಿಡ್‌ನಿಂದಾಗಿ ನಾವು ವಿದೇಶದಲ್ಲಿ ಕಲಿಕೆಯ ಯೋಜನೆಯನ್ನೇ ರದ್ದುಪಡಿಸುತ್ತೇವೆ ಎಂದಿದ್ದು ಶೇ.5.4ರಷ್ಟು ಮಂದಿ ಮಾತ್ರ. ಶೇ.42.3ರಷ್ಟು ಮಂದಿ ಇನ್ನೂ ಆಶಾವಾದಿಗಳಾಗಿದ್ದು, ಕಲಿಕೆಯನ್ನು ಮುಂದೂಡುತ್ತೇವೆ ಎಂದಿದ್ದಾರಂತೆ. ಶೇ.13.5ರಷ್ಟು ಮಂದಿ ಮುಂದುವರಿಸುತ್ತೇವೆ ಎಂದು ಹೇಳಿದ್ದರೆ, ಶೇ.38.8ರಷ್ಟು ಮಂದಿ ನಮಗೆ ಈ ವಿಚಾರದಲ್ಲಿ ಇನ್ನೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರಂತೆ.

ವಿದ್ಯಾರ್ಥಿಗಳಲ್ಲಿ ಉದ್ವೇಗ, ಆತಂಕ
ಭಾರತೀಯ ವಿದ್ಯಾರ್ಥಿಗಳು ಅನೇಕರು ಕೋವಿಡ್‌ನಿಂದಾಗಿ ಉದ್ವೇಗ, ಆತಂಕಕ್ಕೆ ಒಳಗಾಗಿದ್ದಾರೆ. ಕಾರಣ ಹಲವರು ಇತ್ತೀಚೆಗೆ ತವರಿಗೆ ಮರಳಿದ್ದಾರೆ. ಅತ್ತ ತರಗತಿಗಳೂ ಇಲ್ಲ, ವೀಸಾ ಅವಧಿ ಮುಗಿಯುತ್ತಿದೆ. ಇನ್ನು ಉಳಿದುಕೊಳ್ಳುವುದಕ್ಕೆ ಇರುವ ಹಾಸ್ಟೆಲ್‌, ಮನೆ ಬಾಡಿಗೆ ಇತ್ಯಾದಿಗಳ ಒಪ್ಪಂದಗಳೂ ಮುಗಿಯುತ್ತಿವೆ. ಕೋವಿಡ್‌ ತೀವ್ರಗೊಂಡಾಗ ಎಲ್ಲರೂ ಬಚಾವಾದರೆ ಸಾಕು ಎಂದು ತವರಿಗೆ ಮರಳಿದ್ದರು. ಈಗ ಅಲ್ಲಿನ ಪರಿಸ್ಥಿತಿಯ ಬಗ್ಗೆ ಹೆಚ್ಚು ಆತಂಕಕ್ಕೀಡಾಗಿದ್ದಾರೆ. ಅಲ್ಲದೇ ಒಂದು ವೇಳೆ ಕಾಲೇಜುಗಳು ಶುರುವಾದರೆ ಪ್ರಯಾಣಿಸುವ ಬಗ್ಗೆ ಮರಳಿ ವಸತಿಯನ್ನು ಪಡೆಯುವ ಬಗ್ಗೆ ಚಿಂತೆ ಹೊಂದಿದ್ದಾರೆ.

ಆನ್‌ಲೈನ್‌ಗೆ ಕಲಿಕೆಗೆ ಆಸಕ್ತಿ ಕಡಿಮೆ
ವಿದೇಶಗಳಲ್ಲಿ ಕಲಿಯುವ ಉದ್ದೇಶ ಹೊಂದಿದ ಹೆಚ್ಚಿನ ವಿದ್ಯಾರ್ಥಿಗಳು ತರಗತಿಯ ಪಾಠಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಇದು ವಿವಿಧ ಸರ್ವೆಗಳಲ್ಲಿ ಸಾಬೀತಾಗಿದೆ. ಶೇ.54.8ರಷ್ಟು ಮಂದಿ ಆನ್‌ಲೈನ್‌ ಕಲಿಕೆಗೆ ಒಲವಿಲ್ಲ ಎಂದಿದ್ದಾರೆ. ಶೇ.45.2ರಷ್ಟು ಮಂದಿ ಒಲವಿದೆ ಎಂದಿದ್ದಾರೆ. ವಿದ್ಯಾರ್ಥಿಗಳು ಆನ್‌ಲೈನ್‌ಗೆ ಬೆಂಬಲ ನೀಡದೇ ಇರಲು ಕಾರಣವೆಂದರೆ, ವಿದೇಶಗಳಲ್ಲಿ ಕಲಿಕೆಯ ಅನುಭವ. ಅಲ್ಲಿನ ಪಠ್ಯಕ್ರಮದ ರೀತಿ, ಪಾಠಮಾಡುವ ವಿಧಾನ, ಜೀವನ ವಿಧಾನ, ಶಿಸ್ತಿನ ಕಲಿಕೆ, ಓದುವ ಸಲಕರಣೆಗಳ ಲಭ್ಯತೆ ಇತ್ಯಾದಿಗಳ ಆಧಾರದ ಮೇಲೆ ಅಲ್ಲಿಯೇ ಕಲಿಯಬೇಕೆನ್ನುವ ಇಚ್ಛೆಯನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next