ಚಾಮರಾಜನಗರ: ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಲ್ಲಿ ಪೊಲೀಸರು ತಡೆಯಬಹುದೆಂದು ಬಡಾವಣೆ ರಸ್ತೆ ಮೂಲಕ ಸಂಚರಿಸುತ್ತಿದ್ದ ವಾಹನಗಳನ್ನು ನಿಯಂತ್ರಿಸುವ ಸಲುವಾಗಿ ಜನರೇ ರಸ್ತೆಗೆ ಅಡ್ಡಲಾಗಿ ಮರದ ದಿಮ್ಮಿ ಇಟ್ಟು ರಸ್ತೆ ಬಂದ್ ಮಾಡಿದ್ದಾರೆ.
ನಗರದ ಡಾ.ಬಾಬು ಜಗಜೀವನ್ರಾಂ ಬಡಾವಣೆಯ ನಿವಾಸಿಗಳು ತಮ್ಮ ಹೊರಗಿನಿಂದ ಯಾವ ವಾಹನಗಳು ಬರದಂತೆ ತಡೆಯುವ ಸಲುವಾಗಿ ಮರದ ದಿಮ್ಮಿಗಳನ್ನಿಟ್ಟು ರಸ್ತೆ ಬಂದ್ ಮಾಡಿದ್ದಾರೆ.
ಕೋವಿಡ್ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳು ಹಾಗೂ ಜನರನ್ನು ತಡೆಯಲು ಪೊಲೀಸ್ ಸಿಬ್ಬಂದಿ ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿ ಬಳಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಸಂಚಾರವನ್ನು ಬಂದ್ ಮಾಡಿದ್ದರು. ಇದರಿಂದ ಆಸ್ಪತ್ರೆಗಳು, ಕಚೇರಿಗಳು, ಬ್ಯಾಂಕ್‌ಗಳಿಗೆ ತೆರಳುತ್ತಿದ್ದ ಜನರು ಹಾಗೂ ವಾಹನ ಸವಾರರು ನ್ಯಾಯಾಲಯ ರಸ್ತೆಯಿಂದ ಬಾಬು ಜಗಜೀವನ್ರಾಂ ಬಡಾವಣೆಯ ಮೂಲಕ ಬಸವೇಶ್ವರ ಚಿತ್ರಮಂದಿರದ ಬಳಿ ಬಿ.ರಾಚಯ್ಯ ಜೋಡಿ ರಸ್ತೆಗೆ ಬರುತ್ತಿದ್ದರು. ಇದರಿಂದ ಜಗಜೀವನರಾಂ ಬಡಾವಣೆಯಲ್ಲಿ ಕಾರುಗಳು, ಬೈಕ್‌ಗಳು ಹಾಗೂ ಜನರ ಓಡಾಟ ಹೆಚ್ಚಾಯಿತು. ಇದರಿಂದ ಆತಂಕಗೊಂಡ ಬಡಾವಣೆಯ ನಿವಾಸಿಗಳು ಬಡಾವಣೆಯ ಒಳಗೆ ಯಾವ ವಾಹನಗಳು ಬರದಂತೆ ತಡೆಯುವ ಸಲುವಾಗಿ ಜೋಡಿ ರಸ್ತೆಯಿಂದ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಮರದ ದಿಮ್ಮಿಯನ್ನು ಅಡ್ಡಲಾಗಿ ಇಟ್ಟರು.