Advertisement

ಜಿಲ್ಲೆಗೆ ಕೋವಿಡ್ ಮೂರನೇ ಅಲೆ ಆಘಾತ : ಶೂನ್ಯದಿಂದ ಎರಡಂಕಿಗೆ ಏರುತ್ತಿದೆ ಸೋಂಕು

03:28 PM Jan 10, 2022 | Team Udayavani |

ದೇವನಹಳ್ಳಿ: ಜಿಲ್ಲೆಯಲ್ಲಿ ದಿನೆ-ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಮೂರನೇ ಅಲೆ ಅಬ್ಬರಿಸುವ ಆತಂಕ ಎದುರಾಗಿದೆ. ಕೋವಿಡ್‌ ಸೋಂಕು ಹೆಚ್ಚಳಕ್ಕೆ ಬೆಚ್ಚಿಬಿದ್ದಿದ್ದು ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವ ಬೆನ್ನಲ್ಲೇ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿ ಕೊಂಡಿದೆ. ಕೊರೊನಾ ಎರಡನೇ ಅಲೆ ಸಮರ್ಥ ವಾಗಿ ನಿಭಾಯಿ ಸಿದ ಜಿಲ್ಲಾಡಳಿತ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಶೂನ್ಯದತ್ತ ಬರುವಂತೆ ನೋಡಿಕೊಳ್ಳುವಲ್ಲಿ ಶ್ರಮಿಸಿತ್ತು.

Advertisement

ಹೆಚ್ಚಿದ ಕೊರೊನಾ ಪ್ರಕರಣ: ಕಳೆದೊಂದು ವಾರ ದಿಂದ ಪ್ರತಿನಿತ್ಯ 8 ರಿಂದ 15, 24, 74, ನೂರರ ಗಡಿ ದಾಟಿದ್ದು ಸೋಂಕಿನ ತೀವ್ರತೆ ಹೆಚ್ಚಿದೆ. ಜಿಲ್ಲೆಯಾದ್ಯಂತ ಆಸ್ಪತ್ರೆಗಳಲ್ಲಿ ಮೂರನೇ ಅಲೆ ಎದುರಿಸಲು ಬೆಡ್‌ಗಳ ವ್ಯವಸ್ಥೆ, ಹಾಗೂ ಆಕ್ಸಿಜನ್‌, ಹಾಸಿಗೆಗಳು, ವೆಂಟಿ ಲೇಟರ್‌, ಆಕ್ಸಿಜನ್‌ ಸಾಂದ್ರಕಗಳನ್ನು ಸಿದ್ಧತೆ ಮಾಡಿ ಕೊಂಡಿದೆ. ಜಿಲ್ಲೆಯಾದ್ಯಂತ ಶೇ.30 ಬೆಡ್‌ಗಳನ್ನು ಸೋಂಕಿತರಿಗೆ ಮೀಸಲಿಡಲಾಗಿದೆ. ತಾಲೂಕು ವಾರು ವ್ಯವಸ್ಥೆ ಮಾಡಲಾಗಿದೆ. ಪ್ರಕರಣದ ತೀವ್ರತೆ ಆಧಾರದ ಮೇಲೆ ಬೆಡ್‌ ಗಳನ್ನು ಹೆಚ್ಚಿಸಲು ಚಿಂತಿಸಲಾಗಿದೆ. ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ.

ಜನಸಾಮಾನ್ಯರ ಬೇಜಾವಾಬ್ದಾರಿ: ಜಿಲ್ಲೆಯಲ್ಲಿ ಜನರು ಬೇಕಾಬಿಟ್ಟಿ ಮಾಸ್ಕ್ಗಳಿಲ್ಲದೆ ಸಾಮಾಜಿಕ ಅಂತರವಿಲ್ಲದೆ ಕೋವಿಡ್‌ ನಿಯಮ ಉಲ್ಲಂ ಸುತ್ತಿ ದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಕೋವಿಡ್‌ ಪಾಸಿಟೀವ್‌ ಸಂಖ್ಯೆ ಹೆಚ್ಚುವ ಆತಂಕವಿದೆ. ಮೊದಲ ಹಾಗೂ ಎರಡನೇ ಅಲೆ ವೇಳೆ ಮಕ್ಕಳನ್ನು ಹೆಚ್ಚಾಗಿ ಬಾಧಿಸದ ಮಹಾಮಾರಿ ಈ ಬಾರಿ ನೇರವಾಗಿ ಮಕ್ಕಳ ಮೇಲೆಯೇ ಪರಿಣಾಮ ಬೀರಲಿದೆ ಎಂಬ ತಜ್ಞರ ಎಚ್ಚರಿಕೆ ಬೆನ್ನಲ್ಲೇ, ಜಿಲ್ಲೆಯಲ್ಲಿ ಮೂರು ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ
ಸೋಂಕಿತರ ಪೈಕಿ ಇಬ್ಬರು ಗರ್ಭಿಣಿಯ ರಿದ್ದಾರೆ. ಒಬ್ಬ ಸೋಂಕಿತ ಆಮ್ಲಜನಕ ಅವಲಂಬನೆಯಲ್ಲಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದಿ ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ರೋಗ ಲಕ್ಷಣ ಕಂಡುಬಂದರೆ ಚಿಕಿತ್ಸೆ ಪಡೆಯಿರಿ: ಜಿಲ್ಲೆಯಲ್ಲಿ ಕೊರೋನಾ ಪಾಸಿಟೀವ್‌ ರೇಟ್‌ ಒಂದು ವಾರದ ಶೇಕಡಾವಾರಿನಲ್ಲಿ 1.7.ಇದೆ. ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್‌ ಕೋವಿಡ್‌ ಪರೀಕ್ಷೆ ಮಾಡಿ ಪಾಸಿಟೀವ್‌ ಬಂದ ಸೋಂಕಿತರನ್ನು ಬೆಂಗಳೂರು ನಗರದ ಬೋರಿಂಗ್‌ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. ಬಹುತೇಕ ನೆಗಡಿ, ಕೆಮ್ಮು, ಜ್ವರ ಸಾಮಾನ್ಯ ರೋಗಲಕ್ಷಣ ಎಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನೆಗಡಿ, ಶೀತದ ನೆಪದಲ್ಲಿ ಕೊರೊನಾ ತಗುಲುತ್ತಿದೆ. ಆದ್ದರಿಂದ ಯಾವುದೇ ನಿರ್ಲಕ್ಷ್ಯ ಮಾಡದೇ ತುರ್ತಾಗಿ ಚಿಕಿತ್ಸೆ ಪಡೆದು ಮುನ್ನೆಚ್ಚರಿಕೆ ವಹಿಸಬೇಕಿದೆ.

ಇದನ್ನೂ ಓದಿ : ಜ.12ರಂದು ತಮಿಳುನಾಡಿನಾದ್ಯಂತ ಪ್ರಧಾನಿಯಿಂದ 11 ಮೆಡಿಕಲ್ ಕಾಲೇಜುಗಳ ಉದ್ಘಾಟನೆ

Advertisement

892 ಮಂದಿ ಕೊರೊನಾಗೆ ಬಲಿ
ಜಿಲ್ಲೆಯಲ್ಲಿ ಇದುವರೆಗೂ 62422 ಮಂದಿಗೆ ಸೋಂಕು ದೃಢಪಟ್ಟಿದ್ದು ಇದರಲ್ಲಿ ಬೇರೆ ಜಿಲ್ಲೆ ಹಾಗೂ ರಾಜ್ಯದ 2057 ಪ್ರಕರಣಗಳು ಇರುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾದವರು 61256, ಸಕ್ರಿಯ ಪ್ರಕರಣಗಳು 274, ಮರಣ ಹೊಂದಿದವರು ಇದುವರೆಗೂ 892 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಮೊದಲ ಹಾಗೂ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಿದ ಜಿಲ್ಲಾಡಳಿತ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲಿದೆ. ಜನರು ಜಾಗೃತರಾಗಿರಬೇಕು.
ಸರ್ಕಾರದ ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
– ಎಂಟಿಬಿ ನಾಗರಾಜ್‌, ಜಿಲ್ಲಾ ಉಸ್ತುವಾರಿ ಸಚಿವ.

ಕೋವಿಡ್‌, ಒಮಿಕ್ರಾನ್‌ ಸೋಂಕಿಗೆ ಕಡಿವಾಣ ಹಾಕಲು ವೈದ್ಯಕೀಯ ಸಿಬ್ಬಂದಿ ಸಜ್ಜಾಗಿದೆ. ಸಾರ್ವಜನಿಕರು ಕೋವಿಡ್‌ ನಿಯಂತ್ರಣದ ಜಿಲ್ಲಾಡಳಿತದ ಕಾರ್ಯಕ್ಕೆ ಕೈಜೋಡಿಸಬೇಕು. ಪ್ರತಿಯೊಬ್ಬರೂ ಕೊರೊನಾ ಮಾರ್ಗಸೂಚಿ ಪಾಲಿಸಿ.
– ಡಾ. ಎ.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ.

ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಸಿದ್ಧತೆ ಮಾಡಿಕೊಂಡಿದೆ. ಜನರೂ ಕೂಡ ಕೋವಿಡ್‌ ನಿಯಮಗಳನ್ನು ಚಾಚೂ ತಪ್ಪದೇ ಪಾಲನೆ ಮಾಡುವ ಮೂಲಕ ಕೊರೊನಾಗೆ ಕಡಿವಾಣ ಹಾಕಬಹುದು.
– ಕೆ.ಶ್ರೀನಿವಾಸ್‌, ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next