ನವದೆಹಲಿ: ಮಹಾರಾಷ್ಟ್ರದ ಬಳಿಕ ಈಗ ಪಂಜಾಬ್‌ನಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಳ ಕಾಣುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಕೇರಳ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ಗಡ ಮತ್ತು ಮಧ್ಯಪ್ರದೇಶಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಕಳವಳ ಮೂಡಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ದೇಶದ ದೈನಂದಿನ ಒಟ್ಟಾರೆ ಸೋಂಕಿತರ ಪೈಕಿ ಮಹಾರಾಷ್ಟ್ರ ಮತ್ತು ಕೇರಳದ ಪಾಲೇ ಶೇ.75.87ರಷ್ಟಿದೆ. ಸತತ 2ನೇ ದಿನವೂ ಮಹಾರಾಷ್ಟ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. 3 ತಿಂಗಳ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ಈ ಪ್ರಮಾಣದ ಏರಿಕೆ ಆಗಿದೆ. ಇನ್ನೊಂದೆಡೆ, ಮುಂಬೈನಲ್ಲೂ ಶುಕ್ರವಾರ 897 ಮಂದಿಗೆ ಸೋಂಕು ದೃಢಪಟ್ಟಿದ್ದು, ಮುಂದಿನ 15 ದಿನಗಳು ನಿರ್ಣಾಯಕ ಎಂದು ಹೇಳಲಾಗಿದೆ.
ಇದನ್ನೂ ಓದಿ:ಆನ್‌ಲೈನ್ ಮೂಲಕ ಮದ್ಯ ಮಾರಾಟ: ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್
ಕಳೆದ ವಾರ ತಾಪಮಾನದಲ್ಲಾದ ದಿಢೀರ್ ಇಳಿಕೆಯು ಸೋಂಕು ಹೆಚ್ಚಲು ಕಾರಣ ಎಂದು ಮಹಾರಾಷ್ಟ್ರ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ದೇಶವಾಸಿಗಳೆಲ್ಲರೂ ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿಕೊಂಡು, ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.