Advertisement

ಕೆಟ್ಟ ಕೋವಿಡ್ ಬಂದೈತಿ; ಪುಣ್ಯಕ್‌ ಉಳಿಗಾಲ ಎಲ್ಲೆ„ತಿ!

07:30 PM Jun 05, 2021 | Team Udayavani |

ವರದಿ: ಶ್ರೀಶೈಲ ಕೆ. ಬಿರಾದಾರ

Advertisement

ಬಾಗಲಕೋಟೆ: ಅರೆರೇ ಕೆಟ್ಟ ಕೊರೊನಾ ಬಂದೈತಿ. ಪುಣ್ಯಕ್ಕ ಉಳಿಗಾಲ ಎಲ್ಲೈತಿ. ಜನರ ಜೀವಾ ಜಗ್ಗತೈತಿ.. ಕೊರೊನಾ ಓಡಿಸಾಕ, ತಯಾರ್‌ ಆಗೂನ್‌.. ನೀನು ಹೇಳಲೇ ಮಗನ, ನೀ ಹೋಗತಿ ಇಲ್ಲೋ.. ಓಡಿಸೋಣ ಗುಮ್ಮಿ… ಜಿಲ್ಲೆಯೂ ಸೇರಿದಂತೆ ಬಹುತೇಕ ಕಡೆ ಎಲ್ಲರ ಮೊಬೈಲ್‌ನಲ್ಲಿ ಈ ಹಾಡುಗಳೇ ರಿಂಗಣಿಸುತ್ತಿವೆ.

ಬಾಗಲಕೋಟೆ ಖ್ಯಾತ ಕವಿ ಎಚ್‌.ಎನ್‌. ಶೇಬನ್ನವರ ರಚಿಸಿರುವ ಈ ಎರಡು ಹಾಡುಗಳು ಈಗ ಎಲ್ಲೆಡೆ ಭಾರಿ ಸದ್ದು ಮಾಡುತ್ತಿವೆ. ಅದರಲ್ಲೂ ನಗರದ ಸಂಚಾರಿ ಪೊಲೀಸ್‌ ಠಾಣೆಯ ಪೇದೆ ಭಾಸ್ಕರ ಕಮ್ಮಾರ ಹಾಡಿರುವ ಅರೆರೇ ಕೆಟ್ಟ ಕೊರೊನಾ ಬಂದೈತಿ, ಪುಣ್ಯಕ್ಕೆ ಉಳಿಗಾಲ ಎಲ್ಲೈತಿ.. ಎಂಬ ಹಾಡು ಕೇವಲ 10 ದಿನಗಳಲ್ಲಿ 7.25 ಲಕ್ಷ ವೀಕ್ಷಣೆ ಕಂಡಿದ್ದು, ಈ ಎರಡು ಹಾಡುಗಳು ಈ ವರೆಗೆ 10 ಲಕ್ಷ ಜನರು ವೀಕ್ಷಿಸಿ ಖುಷಿ ಕಂಡಿದ್ದಾರೆ. ಪೊಲೀಸ್‌ ಪೇದೆ ಹಾಗೂ ನಗರದ ಗಾಯಕ ಕೃಷ್ಣಾ ಅಂಬಿಗೇರ ಅವರಿಬ್ಬರೂ ಕೂಡಿ ಹಾಡಿರುವ ಈ ಹಾಡಿಗೆ ಸದ್ಯ ಅತ್ಯುತ್ತಮ ಪ್ರಕ್ರಿಯೆ ಕೂಡ ವ್ಯಕ್ತವಾಗಿದೆ.

ಕೊರೊನಾ ಜಾಗೃತಿ ಹಾಡು: ಕೊರೊನಾ 2ನೇ ಅಲೆ ಅತಿಹೆಚ್ಚು ಸಂಕಷ್ಟ ನೀಡಿದ್ದು, ಈ ಕುರಿತು ಮನದಲ್ಲೇ ಕೊರಗಿದ ಶಿಗಿಕೇರಿಯ ನಾಟಕಕಾರರೂ ಆಗಿರುವ ಕವಿ ಎಚ್‌.ಎನ್‌. ಶೇಬನ್ನವರ, ಎರಡು ಹಾಡುಗಳನ್ನು ರಚಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ರಾಬರ್ಟ್‌ ಚಿತ್ರದ ಕಣ್ಣು ಹೊಡೆಯಾಕ್‌ ಹಾಡಿನ ರಿಮಿಕ್ಸ್‌ನಲ್ಲಿ ಕೊರೊನಾ ಓಡಿಸಾಕ ತಯಾರ್‌ ಆಗೂನ, ನೀನು ಹೇಳಲೇ ಮಗನ, ನೀ ಹೋಗತಿಲ್ಲೋ, ಓಡಿಸೋಣ ಗುಮ್ಮಿ ಎಂಬ ಹಾಡನ್ನು ನಗರದ ಯುವ ಗಾಯಕ ಬೇಬಿ ಆಯಿಷಾ ಹಾಡಿದ್ದಾರೆ.

ಈ ಹಾಡನ್ನು ಎರಡು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿದ್ದು, 2.50 ಲಕ್ಷ ವೀವರ್ ದಾಟಿದೆ. ಇನ್ನು ಅರೆರೇ ಕೆಟ್ಟ ಕೊರೊನಾ ಬಂದೈತಿ, ಪುಣ್ಯಕ್ಕೆ ಉಳಿಗಾಲ ಎಲ್ಲೈತಿ  ಎಂಬ ಕೊರೊನಾ ಕುರಿತು ಜಾಗೃತಿ ವಹಿಸುವ ಹಾಡನ್ನು ಪೊಲೀಸ್‌ ಪೇದೆ ಭಾಸ್ಕರ ಕಮ್ಮಾರ ಮತ್ತು ಕೃಷ್ಣಾ ಅಂಬಿಗೇರ ಹಾಡಿದ್ದು, ಇದನ್ನು 10 ದಿನಗಳ ಹಿಂದೆ ಅಪ್‌ಲೋಡ್‌ ಮಾಡಲಾಗಿದೆ. ರಾಯಲ್‌ ಬಾಗಲಕೋಟೆ, ನಮ್ಮ ಬಾಗಲಕೋಟೆ ಫೇಸ್‌ಬುಕ್‌ ಪೇಜ್‌ ಸಹಿತ ಹಲವರು ಇದನ್ನು ಅಪ್‌ ಲೋಡ ಮಾಡಿದ್ದು, ಈವರೆಗೆ 7.50 ಲಕ್ಷ ವೀಕ್ಷಣೆ, 868 ಕೆ ಕಮೆಂಟ್ಸ್‌, 4.1ಕೆ ಶೇರ್‌, 24 ಕೆ. ಲೈಕ್ಸ್‌ ಆಗಿವೆ. ಅದರಲ್ಲೂ ಪೊಲೀಸ್‌ ಪೇದೆಯೊಬ್ಬರು ತಮ್ಮ ಸುಂದರ ಕಂಠದಿಂದ ಕೊರೊನಾ ಜಾಗೃತಿ ಮೂಡಿಸುವ ಹಾಡು, ಜಿಲ್ಲೆಯಲ್ಲಿ ಫೇಮಸ್‌ ಆಗಿರುವುದು ಇದೇ ಮೊದಲು ಎನ್ನಲಾಗಿದೆ.

Advertisement

ಹಲವರ ಮೆಚ್ಚುಗೆ: ಕವಿ ಎಚ್‌.ಎನ್‌. ಶೇಬನ್ನವರ ರಚಿಸಿದ ಈ ಎರಡು ಹಾಡುಗಳನ್ನು ನಗರದ ಆರ್‌ಕೆ ಸ್ಟುಡಿಯೋದಲ್ಲಿ ರಿಕಾರ್ಡ್‌ ಮಾಡಿದ್ದು, ಪೊಲೀಸ್‌ ಪೇದೆ ಭಾಸ್ಕರ ಮತ್ತು ಕೃಷ್ಣಾ ಹಾಡಿರುವ ಈ ಜಾಗೃತಿ ಗೀತೆಯನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ ಬಿಡುಗಡೆಗೊಳಿಸಿದ್ದಾರೆ. ಜತೆಗೆ ಪೊಲೀಸ್‌ ಪೇದೆಯ ಬೆನ್ನು ತಟ್ಟಿ, ಉತ್ತಮ ಜಾಗೃತಿ ಗೀತೆ ಹಾಡಿದ್ದೀರಿ ಎಂದು ಹಾರೈಸಿದ್ದಾರೆ. ಕವಿ ಶೇಬನ್ನವರ, ಗಾಯಕರಾದ ಭಾಸ್ಕರ ಕಮ್ಮಾರ, ಕೃಷ್ಣಾ ಅಂಬಿಗೇರ ಹಾಗೂ ಬೇಬಿ ಆಯಿಷಾ ಅವರ ಈ ಪ್ರಯತ್ನಕ್ಕೆ ಯುವ ನಾಯಕರಾದ ಸಂತೋಷ ಹೊಕ್ರಾಣಿ, ಬಸವಪ್ರಭು ಸರನಾಡಗೌಡ, ಬಸವೇಶ್ವರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಪ್ರಮುಖರಾದ ಮಳಿಯಪ್ಪ ಹೊಸಗರ, ಮುತ್ತು ಮಾಚಕನೂರ, ಲಿಂಗರಾಜ ಜಾಡರ, ವಿಠ್ಠಲ ರೇವಡಿ ಮುಂತಾದ ಪ್ರಮುಖ ಸಹಕಾರ ನೀಡಿ, ಈ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ.

ಒಟ್ಟಾರೆ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಪೊಲೀಸ್‌ ಪೇದೆ, ಇಬ್ಬರು ಗಾಯಕರು, ಕವಿ ಶೇಬನ್ನವರ ರಚಿಸಿದ ಕೊರೊನಾ ಜಾಗೃತಿ ಹಾಡುಗಳು ಎಲ್ಲರ ಮನ ಗೆದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next