Advertisement

ಸಕಾಲದಲ್ಲಿ ಔಷಧ ಪಡೆದರೆ ಸೋಂಕು ಗುಣಮುಖ

09:47 PM May 25, 2021 | Team Udayavani |

ಜೀಯು, ಹೊನ್ನಾವರ

Advertisement

ಹೊನ್ನಾವರ: ಕರ್ಣಪಟಲ ಹರಿಯುವಂತೆ ಪ್ರತಿ ಬಾರಿ ರಿಂಗ್‌ ಮಾಡಿದಾಗಲೂ ಫೋನ್‌ ಎಚ್ಚರಿಸುತ್ತಿದ್ದರೂ, ಮನೆಮನೆಗೆ ಆಶಾ ಕಾರ್ಯಕರ್ತೆಯರು ಹೋಗಿ ಹೇಳುತ್ತಿದ್ದರೂ, ಸರ್ಕಾರ ಸಕಲ ವ್ಯವಸ್ಥೆ ಮಾಡಿಕೊಟ್ಟಿದ್ದರೂ ಕೋವಿಡ್‌ನಿಂದ ಸೋಂಕಿತರು ಹೆಚ್ಚುತ್ತಲೇ ಇದ್ದು ಯಾಕೆ? ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ ಎಂಬುದಕ್ಕೆ ಕೆಲವು ವೈದ್ಯರ ಅಭಿಪ್ರಾಯ ಹೀಗಿದೆ.

ಅತಿ ಹೆಚ್ಚು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಉಡುಪಿ ಟಿಎಂಎಪೈ ಆಸ್ಪತ್ರೆಯ ವೈದ್ಯ ಡಾ| ಶಶಿಕಿರಣ್‌ ಶೇ. 95ರಷ್ಟು ಜನರಿಗೆ ಕೋವಿಡ್‌ ಪ್ರಥಮ ಹಂತದಲ್ಲಿಯೇ ಗುಣವಾಗುತ್ತದೆ ಅನುತ್ತಾರೆ. ಕೋವಿಡ್‌ ಹರಡಿ ಆಯಿತು, ಈಗ ಆಸ್ಪತ್ರೆಗೆ ಬರಲು ವಿಳಂಬ ಮಾಡಿ, ಬಂದ ಮೇಲೂ ರಾತ್ರಿ ಆಕ್ಸಿಜನ್‌ ಸಂಪರ್ಕವನ್ನು ಕಿತ್ತುಹಾಕುವಂತಹ ರೋಗಿಗಳಿಂದಾಗಿ ಸಮಸ್ಯೆ ಉಂಟಾಗುತ್ತದೆ. ನಾವು ಜೀವ ಉಳಿಸಲು ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ಇದು ಜನರಿಗೆ ಅರ್ಥವಾಗಬೇಕು ಎನ್ನುತ್ತಾರೆ ಹೊನ್ನಾವರ ತಾಲೂಕಾಸ್ಪತ್ರೆಯ ಮೆಡಿಸಿನ್‌ ವಿಭಾಗದ ಡಾ| ಪ್ರಕಾಶ ನಾಯ್ಕ.

ಸಕಾಲದಲ್ಲಿ ಬಂದರೆ ಜೀವ ಉಳಿಯುತ್ತದೆ, ಅಕಾಲದಲ್ಲಿ ಬಂದರೆ ಎಲ್ಲರಿಗೂ ಕಷ್ಟ, ನಾವು ನಮ್ಮ ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ, ಆದರೆ ಜನರ ನಿಷ್ಕಾಳಜಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಎಂದು ಶಿರಸಿ ಪಂಡಿತ ಆಸ್ಪತ್ರೆಯ ಡಾ| ಗಜಾನನ ಭಟ್‌ ವಿಷಾದಿಸುತ್ತಾರೆ.

ತಾಲೂಕು ವೈದ್ಯಾಧಿಕಾರಿಯಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಆಶಾ ಕಾರ್ಯಕರ್ತೆಯವರೆಗೆ ಕೋವಿಡ್‌ ಗುರುತಿಸಿ, ತಕ್ಷಣ ಅಗತ್ಯ ಚಿಕಿತ್ಸೆ ನೀಡುವ ವ್ಯವಸ್ಥೆ ಹಳ್ಳಿಹಳ್ಳಿಗಳಲ್ಲಿ ಕಲ್ಪಿಸಲಾಗಿದೆ. ಪ್ರತಿಯಾಗಿ ಜನರ ಸ್ಪಂದನೆಯಿಲ್ಲ. ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ. ಕೆಲವೊಮ್ಮೆ ಎಲ್ಲವೂ ವ್ಯರ್ಥ ಅನಿಸುತ್ತದೆ ಎಂದು ಟಿಎಚ್‌ಓ ಉಷಾ ಹಾಸ್ಯಗಾರ ಬೇಸರಿಸುತ್ತಾರೆ.

Advertisement

ಪ್ರತಿ ತಾಲೂಕಿನಲ್ಲೂ ನಾಲ್ಕೈದು ಆಂಬ್ಯುಲೆನ್‌ Õಗಳಿವೆ. ಕೋವಿಡ್‌ ಸೋಂಕಿತರನ್ನು ಗುರುತಿಸಲು ಮನೆಮನೆಗೆ ಆಶಾ ಕಾರ್ಯಕರ್ತೆಯರು ಓಡಾಡುತ್ತಾರೆ. ಕೋವಿಡ್‌ನ‌ ಆರಂಭದಲ್ಲಿ ನೆಗಡಿ, ಜ್ವರ, ಬೇ ಧಿ, ಇಂಥ ಸಾಮಾನ್ಯ ಲಕ್ಷಣಗಳು ಕಂಡಾಗ ಆಶಾ ಕಾರ್ಯಕರ್ತೆಯರು ಕೊಡುವ ಔಷಧವನ್ನೇ ನಾಲ್ಕು ದಿನ ಸೇವಿಸಿದರೆ ಶೇ. 95ರಷ್ಟು ಕೋವಿಡ್‌ ಪೀಡಿತರು ಗುಣವಾಗುತ್ತಾರೆ. ಇತರ ಕಾಯಿಲೆ ಸಮಸ್ಯೆಯಿದ್ದರೆ, ವಯಸ್ಸಾಗಿದ್ದರೆ ಆಸ್ಪತ್ರೆಗೆ ಬರಬೇಕಾಗುತ್ತದೆ.

ಪ್ರಾಥಮಿಕ ಹಂತದ ಔಷಧ ನಾಲ್ಕು ದಿನ ಸೇವಿಸಿಯೂ ಗುಣವಾಗದೆ ಆಸ್ಪತ್ರೆಗೆ ಬಂದರೆ ಆಕ್ಸಿಜನ್‌ ಇಲ್ಲದೆಯೂ ಗುಣಪಡಿಸಬಹುದು. ಅಗತ್ಯಬಿದ್ದರೆ ಆಕ್ಸಿಜನ್‌ ಮಾತ್ರವಲ್ಲ ಮೌಖೀಕವಾಗಿ ಕೊಡುವ ವೆಂಟಿಲೇಟರ್‌ ಬಳಸುತ್ತೇವೆ. ಈ ಹಂತದಲ್ಲಿ ರೋಗಿ ಖಂಡಿತ ಗುಣವಾಗುತ್ತಾನೆ. ಇಷ್ಟು ಸರಳವಾದಂತಹ ಸಂಗತಿಗಳನ್ನು ಎರಡು ವರ್ಷವಾದರೂ ತಿಳಿದುಕೊಳ್ಳದ ಜನ ತಮಗೆ ಕಂಡಂತೆ ಔಷಧ ಸೇವಿಸಿ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧವಿಲ್ಲದವರ, ತಲೆಗೊಂದು ಮಾತು ಹೇಳುವವರ ಸಲಹೆ ಪಡೆದು ನಾಲ್ಕು ಹೆಜ್ಜೆ ನಡೆಯಲಾರದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುತ್ತಾರೆ ಎನ್ನುತ್ತಾರೆ ಡಾ| ಪ್ರಕಾಶ ನಾಯ್ಕ.

ತಿಳಿದು ತಿಳಿದು ಎರಡು ವರ್ಷಗಳಿಂದ ವಿದ್ಯಾವಂತ ಜನ ತಪ್ಪು ಮಾಡುತ್ತಲೇ ಬಂದಿದ್ದಾರೆ. ಆಂಬ್ಯುಲೆನ್ಸ್‌ ಮನೆಗೆ ಹೋಗಿ ಕರೆದುತಂದು ಗುಣಮಾಡಿ ಮನೆಗೆ ಮುಟ್ಟಿಸುತ್ತದೆ. ಮನೆಯಲ್ಲಿ ಉಳಿಯುವುದು ಬೇಡ ಅನ್ನಿಸಿದರೆ ಸರ್ಕಾರಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ ಕರೆದರೂ ಬರುವುದಿಲ್ಲ. ಪೊಲೀಸರು, ತಾಲೂಕಾಡಳಿತ, ಎಲ್ಲರೂ ಜಂಟಿಯಾಗಿ ಪ್ರಯತ್ನ ನಡೆಸಿದರೂ ಜನ ಬರುತ್ತಿಲ್ಲ. ಏಕೆ ಹೀಗೆ ವರ್ತಿಸುತ್ತಿದ್ದಾರೆ ಎಂಬುದು ಅರ್ಥವಾಗದೇ ಹೋಗಿದೆ. ಹಾಸಿಗೆಗಳಿಗೆ ಕೊರತೆಯಿಲ್ಲ, ಔಷಧಕ್ಕೆ, ಊಟ, ತಿಂಡಿಗೆ ಹಣ ಕೊಡಬೇಕಾಗಿಲ್ಲ. ಸುಲಭದಲ್ಲಿ ಪರಿಹಾರವಾಗುವ ಸಮಸ್ಯೆಯನ್ನು ಕ್ಲಿಷ್ಟವನ್ನಾಗಿಸಿ ಮೈಮೇಲೆ ಎಳೆದುಕೊಳ್ಳುತ್ತಿರುವ ಜಿಲ್ಲೆಯ ಜನರ ಮನೋಭಾವಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next