Advertisement

ಬಾಗಲಕೋಟೆ ಜಿಲ್ಲೆಯಲ್ಲಿ ಕೈ ಮೀರಿದ ಕೋವಿಡ್ ಸೋಂಕು

05:00 PM Oct 10, 2020 | sudhir |

ಬಾಗಲಕೋಟೆ: ಕೊರೊನಾ ವೈರಸ್‌ ಜಿಲ್ಲೆಯಲ್ಲಿ ನಿತ್ಯವೂ ಶತಕ ದಾಟುತ್ತಿದೆ. ಈವರೆಗೆ 11,288 ಜನರಿಗೆ ಸೋಂಕು ತಗುಲಿದ್ದು,
ಅದರಲ್ಲಿ ಗುಣಮುಖ ಪ್ರಮಾಣವೂ ಇದೆ. ಆದರೆ, ಮಾ.31ರಂದು ಜಿಲ್ಲೆಗೆ ಎಂಟ್ರಿ ಕೊಟ್ಟ ಈ ಸೋಂಕು ಈವರೆಗೆ ನಿಯಂತ್ರಣಕ್ಕೆ ಬಂದಿಲ್ಲ. ಕೆಮ್ಮು, ನೆಗಡಿ, ಜ್ವರ, ಉಸಿರಾಟ ತೊಂದರೆ ಇದ್ದರೆ ಮಾತ್ರ ಕೊರೊನಾ ದೃಢಪಡುತ್ತಿತ್ತು. ಆದರೆ, ಈಗ ಯಾವುದೇ ಲಕ್ಷಣ ಇಲ್ಲದಿದ್ದರೂ ತಪಾಸಣೆಗೆ ಒಳಗಾದಾಗ ಸೋಂಕು ಖಚಿತವಾಗುತ್ತಿದೆ. ಅಲ್ಲದೇ ಸೋಂಕು ಸಮುದಾಯದಲ್ಲಿ ಹರಡಿದ್ದು, ಯಾರಿಗೆ ಸೋಂಕಿದೆ ಎಂಬುದೂ ತಿಳಿಯದ ಪರಿಸ್ಥಿತಿ ಇದೆ. ಹೀಗಾಗಿ ಪ್ರತಿಯೊಬ್ಬರೂ ಮಾಸ್ಕ ಧರಿಸಿ ಎಂದು ಎಚ್ಚರಿಕೆ ನೀಡಿದರೂ, ದಂಡ ವಸೂಲಿ ಮಾಡುತ್ತಿದ್ದರೂ ಜನರು ಮಾತ್ರ ಕೊರೊನಾ ನಮಗೆ ಬರಲ್ಲ ಎಂಬ ಅತಿಯಾದ ವಿಶ್ವಾಸದಲ್ಲೇ ಮುಂದುವರಿದಿದ್ದಾರೆ.

Advertisement

1.20 ಲಕ್ಷ ದಾಟಿದ ತಪಾಸಣೆ: ಜಿಲ್ಲೆಯಲ್ಲಿ 9,50,111 ಪುರುಷರು, 9,39,641 ಮಹಿಳೆಯರು ಸೇರಿ ಒಟ್ಟು 18,89,752 ಜನಸಂಖ್ಯೆ
ಇದ್ದಾರೆ. ಅಲ್ಲದೇ 602 ಹಳ್ಳಿಗಳು, 15 ನಗರ ಸ್ಥಳೀಯ ಸಂಸ್ಥೆಗಳು ಸಹಿತ ಒಟ್ಟು 1027 (ತಾಂಡಾ, ದೊಡ್ಡಿ, ಇತರೆ ಸೇರಿ) ಜನ
ವಸತಿ ಪ್ರದೇಶಗಳಿವೆ. ಒಟ್ಟು ಜನಸಂಖ್ಯೆಯಲ್ಲಿ 12,91,906 ಜನರು ಗ್ರಾಮೀಣ ಪ್ರದೇಶದಲ್ಲಿದ್ದರೆ, 5,97,846 ಜನರು ನಗರ
ಪ್ರದೇಶದಲ್ಲಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಈಗ ಪೊಲೀಸ್‌ ಇಲಾಖೆ, ನಗರಸಭೆ-ಪುರಸಭೆ, ಪಪಂ ಸಿಬ್ಬಂದಿ, ಪೌರ ಕಾರ್ಮಿಕರು, ವಿವಿಧ
ಸರ್ಕಾರಿ ಕಚೇರಿಗಳ ಸಿಬ್ಬಂದಿಯನ್ನು ರ್‍ಯಾಂಡಮ್‌ ಆಗಿ ಕೊರೊನಾ ತಪಾಸಣೆ ಮಾಡಲಾಗಿದೆ. ಬಾಗಲಕೋಟೆ ನಗರಸಭೆಯ 217 ಜನ ಸಿಬ್ಬಂದಿ-ಪೌರ ಕಾರ್ಮಿಕರ ತಪಾಸಣೆ ವೇಳೆ 45 ಜನರಿಗೆ ಕೊರೊನಾ ಖಚಿತವಾಗಿತ್ತು. ಇವರಿಗೆಲ್ಲ ಯಾವುದೇ ಲಕ್ಷಣ ಇಲ್ಲದಿದ್ದರೂ ಸೋಂಕು ತಗುಲಿತ್ತು.

ಸದ್ಯ ಜಿಲ್ಲೆಯಲ್ಲಿ 1,20,738 ಜನರಿಗೆ ಕೊರೊನಾ ತಪಾಸಣೆ ಮಾಡಲಾಗಿದೆ. ಇದರಲ್ಲಿ 1,07,769 ಜನರಿಗೆ ಕೊರೊನಾ ತಗುಲಿಲ್ಲ
ಎಂಬುದು ಸಮಾಧಾನಕರ ಸಂಗತಿ. ಆದರೆ, 11,288 ಜನರಿಗೆ ಈವರೆಗೆ ಸೋಂಕು ಖಚಿತವಾಗಿದ್ದು, ಅದರಲ್ಲಿ 10,501 ಜನರು
ಕೊರೊನಾ ಮುಕ್ತರಾಗಿದ್ದಾರೆ. ಸರ್ಕಾರಿ ಅಧಿಕೃತ ದಾಖಲೆಗಳ ಪ್ರಕಾರ ಈವರೆಗೆ 116 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟವರ ದಾಖಲೆ ಮಾಡಿಲ್ಲ ಎನ್ನಲಾಗಿದೆ.

359 ಮನೆಯಲ್ಲೇ ಚಿಕಿತ್ಸೆ: ಯಾವುದೇ ಲಕ್ಷಣ ಇಲ್ಲದಿದ್ದರೂ ತಪಾಸಣೆ ವೇಳೆ ಸೋಂಕು ಖಚಿತವಾದ 359 ಜನರು ತಮ್ಮ ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌ ಕೇರ್‌ ಸೆಂಟರ್‌ ಮತ್ತು ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಮಾತ್ರ ಪಡೆದು ಹೋಂ ಐಸೋಲೇಶನ್‌ ಗೆ ಒಳಗಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 5 ಕೋವಿಡ್‌ ಕೇರ್‌ ಸೆಂಟರ್‌ ಇದ್ದು, ಅವುಗಳಲ್ಲಿ 36 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಏ.2ರಿಂದ ಬಾಗಲಕೋಟೆ ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡಿದ್ದು, ಸದ್ಯ 114 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ 27 ಜನ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

Advertisement

ಕ‌ಳೆದ ತಿಂಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಮೊದಲು ನಿತ್ಯ
180ರಿಂದ 200ಕ್ಕೂ ಹೆಚ್ಚು ಜನರಿಗೆ ಸೋಂಕು ಖಚಿತವಾಗುತ್ತಿತ್ತು. ಈಗ 95ರಿಂದ 110ರವರೆಗೆ ಸೋಂಕಿತರು
ಪತ್ತೆಯಾಗುತ್ತಿದ್ದಾರೆ. ರ್‍ಯಾಂಡಮ್‌ ತಪಾಸಣೆ ಸಹಿತ ಜಿಲ್ಲೆಯ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ
ಮಾಡಲಾಗುತ್ತಿದೆ. ಜಿಲ್ಲೆಯ ಏಳು ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಚಿಕಿತ್ಸೆ ಲಭ್ಯವಿದೆ. ಜಿಲ್ಲಾ ಕೋವಿಡ್‌
ಆಸ್ಪತ್ರೆ, ಸೋಂಕಿತರಿಗೆ ಅತ್ಯುತ್ತಮವಾಗಿ ಚಿಕಿತ್ಸೆ ನೀಡುತ್ತಿದೆ.
– ಡಾ|ಅನಂತ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next