ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಯುವಕನೋರ್ವನಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಇಡೀ ಓಣಿ ಸೀಲ್ ಡೌನ್ ಮಾಡಲಾಗಿದೆ. ಆದರೆ ಮಧುಮೇಹದಿಂದ ಬಳಲುತ್ತಿರುವ ಸೋಂಕಿತನ ತಾಯಿ ಔಷಧಿ ಇಲ್ಲದೇ ಪರದಾಡುತ್ತಿದ್ದಾರೆ ಎಂದು ಸೋಂಕಿತ ಯುವಕ ಆರೋಪಿಸಿದ್ದಾರೆ.
ಸುಳೇಭಾವಿ ಗ್ರಾಮದ 32 ವರ್ಷದ ಯುವಕನಿಗೆ ಕೋವಿಡ್ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಯುವಕನನ್ನು ಕೂಡಲೇ ಜಿಲ್ಲಾಸ್ಪತ್ರೆಯ ಕೋವಿಡ್-೧೯ ವಾರ್ಡ್ ಗೆ ದಾಖಲಿಸಲಾಗಿದೆ. ಮನೆಯಲ್ಲಿಯೇ ತಾಯಿ ಒಬ್ಬರೇ ಇದ್ದು, ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ ಅಗತ್ಯ ಇರುವ ಔಷಧಿ ಇಲ್ಲದೇ ತಾಯಿ ತೊಂದರೆಗೀಡಾಗಿದ್ದಾರೆ.
ಗ್ರಾಮದ ಹೊಸಕೇರಿ ಗಲ್ಲಿ ಸಂಫೂರ್ಣವಾಗಿ ಸೀಲ್ ಡೌನ್ ಮಾಡಿದ್ದರಿಂದ ಮನೆಯೊಳಗೆ ಯಾರೂ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಔಷಧಿ ಹಾಗೂ ಅಗತ್ಯ ಸಾಮಗ್ರಿಗಳು ಇಲ್ಲದೇ ತಾಯಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಯುವಕ ಆರೋಪಿಸಿದ್ದಾನೆ.
ಸಂಬಂಧಿಸಿದ ಸುಳೇಭಾವಿ ಪಿಡಿಒ ಅವರ ಗಮನಕ್ಕೆ ಸೋಂಕಿತ ಯುವಕ ಕರೆ ಮಾಡಿದ್ದರೂ ಕರೆ ಸ್ವೀಕರಿಸುತ್ತಿಲ್ಲ. ಸದ್ಯ ಮೊಬೈಲ್ ಸ್ವಿಚ್ ಆಪ್ ಆಗಿದ್ದರಿಂದ ತಾಯಿಗೆ ದಿಕ್ಕು ತೋಚದಂತಾಗಿದೆ ಎಂದು ಯುವಕ ತನ್ನ ಸ್ನೇಹಿತರ ಎದುರು ಮೊಬೈಲ್ ಮೂಲಕ ಮಾತನಾಡಿ ಅಳಲು ತೋಡಿಕೊಂಡಿದ್ದಾನೆ.
ಯುವಕನ ತಾಯಿಗೆ ಅಗತ್ಯ ಸೌಲಭ್ಯ ಹಾಗೂ ಔಷಧಿಗಳನ್ನು ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.