ಉಡುಪಿ: ಕೋವಿಡ್ 4ನೇ ಅಲೆಯನ್ನು ಸಮರ್ಥವಾಗಿ ನಿರ್ವಹಿಸಲು ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯನ್ನು ಎಲ್ಲ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ.
ಮುಂಬರಲಿರುವ ಕೊರೊನಾ ಅಲೆ ನಿರ್ವಹಣೆ ಸಂಬಂಧ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾ ಸರ್ಜನ್ ಡಾ| ಮಧುಸೂದನ್ ನಾಯಕ್ ತಿಳಿಸಿದರು.
ಜಿಲ್ಲಾಸ್ಪತ್ರೆಯ ಒಳಗೆ ಕೋವಿಡ್ ಶೋಂಕಿತರ ಚಿಕಿತ್ಸೆ, ಆರೈಕೆಗೆ ಪ್ರತ್ಯೇಕ ವಾರ್ಡ್ ರಚಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೋವಿಡ್ ಶೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ತೀರ ಕಡಿಮೆ ಇದೆ. ಹೀಗಾಗಿ ವಿಶೇಷ ವಾರ್ಡ್ ರಚನೆ ಮಾಡಿಕೊಳ್ಳುತ್ತಿದ್ದೇವೆ. ತುರ್ತಾಗಿ ಕನಿಷ್ಠ 10 ಬೆಡ್‌ಗಳು ಕೋವಿಡ್ ರೋಗಿಗಳಿಗೆ ಮೀಸಲಿಡಲಿದ್ದೇವೆ ಎಂದು ಡಿಎಚ್‌ಒ ಡಾ| ನಾಗಭೂಷಣ ಉಡುಪ ಅವರು ಮಾಹಿತಿ ನೀಡಿದರು.
ಕೋವಿಡ್ ಪರೀಕ್ಷೆಯನ್ನು 300ಕ್ಕೆ ನಿಗದಿಗೊಳಿಸಿದ್ದೇವೆ. ಅದರಂತೆ ನಿತ್ಯವೂ 275ರಿಂದ 300 ಮಂದಿಗೆ ಕೊರೊನಾ ಪರೀಕ್ಷೆ ಮಾಡುತ್ತಿದ್ದೇವೆ. ವಿಶೇಷವಾಗಿ ಜ್ವರ, ಶೀತ ಮೊದಲಾದ ಲಕ್ಷಣಗಳು ಇರುವವರ ಗಂಟಲು ದ್ರವ ಪರೀಕ್ಷೆಯನ್ನು ಲ್ಯಾಬ್ ಗೆ ಕಳುಹಿಸುತ್ತಿದ್ದೇವೆ. ಎಲ್ಲ ಆಸ್ಪತ್ರೆಗಳಿಗೂ ಸೂಚನೆ ನೀಡಿದ್ದೇವೆ. ಆಕ್ಸಿಜನ್ ಘಟಕಗಳನ್ನು ಸುಸ್ಥಿತಿಯಲ್ಲಿ ಇಟ್ಟು ಕೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಯಿಂದ ಪರಿಶೀಲನೆ
ಜಿಲ್ಲಾಸ್ಪತ್ರೆಗೆ ಬುಧವಾರ ರಾತ್ರಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರು ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಕೋವಿಡ್ ಪ್ರಕರಣಗಳ ನಿರ್ವಹಣೆಗೆ ಕೈಗೊಂಡಿರುವ ಸಿದ್ಧತೆಗಳು ಮತ್ತು ಚಿಕಿತ್ಸೆ ಉಪಕರಣಗಳ ಸಮರ್ಪಕ ಕಾರ್ಯ ನಿರ್ವಹಣೆ ಕುರಿತು ಪರಿಶೀಲಿಸಿ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಜಿಲ್ಲಾ ವೈದ್ಯಾಧಿಕಾರಿ ಡಾ| ಮಧುಸೂದನ್ ನಾಯಕ್, ಆಸ್ಪತ್ರೆಯ ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.