Advertisement

ಯಾಳವಾರ ಬಳಿ ಕೋವಿಡ್‌ ಕೇರ್‌ ಸೆಂಟರ್‌ ಶುರು

03:44 PM Aug 17, 2020 | Suhan S |

ಜೇವರ್ಗಿ: ಸಾಮಾಜಿಕ ಸೇವೆ ಜೊತೆಗೆ ತಾವು ಒಬ್ಬ ವೈದ್ಯರಾಗಿ ತಾಲೂಕಿನ ಜನರ ಹಿತದೃಷ್ಟಿಯಿಂದ ಯಾಳವಾರದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಪ್ರಾರಂಭಿಸಲಾಗಿದ್ದು, ಧರ್ಮಸಿಂಗ್‌ ಫೌಂಡೇಶನ್‌ ವತಿಯಿಂದ ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಕೇರ್‌ ಸೆಂಟರ್‌ನ ಸೋಂಕಿತರಿಗಾಗಿ ಉಚಿತ ಎನ್‌-95 ಮಾಸ್ಕ್, ಥರ್ಮಲ್‌ ಸ್ಕ್ರೀನಿಂಗ್‌, ಫಲ್ಸ್‌ ಆಕ್ಟಿ ಮೀಟರ್‌, ಪಿಪಿ ಕಿಟ್‌, ಊಟ, ಉಪಾಹಾರ ಸೇರಿದಂತೆ ಅಗತ್ಯ ಸಾಮಗ್ರಿ ಒದಗಿಸಲಾಗುವುದು ಎಂದು ಶಾಸಕ ಡಾ| ಅಜಯಸಿಂಗ್‌ ಹೇಳಿದರು.

Advertisement

ತಾಲೂಕಿನ ಯಾಳವಾರ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ನೂತನವಾಗಿ ಆರಂಭಿಸಿದ ಕೋವಿಡ್‌ ಕೇರ್‌ ಸೆಂಟರ್‌ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲೂಕಿನ ಜನತೆಯ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ಧರ್ಮಸಿಂಗ್‌ ಫೌಂಡೇಶನ್‌ ವತಿಯಿಂದ ಯಾಳವಾರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಪ್ರಾರಂಭಿಸಲಾಗಿದೆ. ಈ ಕೇಂದ್ರದಲ್ಲಿ ಕೋವಿಡ್ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು, ಧರ್ಮಸಿಂಗ್‌ ಫೌಂಡೇಶನ್‌ನಿಂದ ಮಂಚ, ಗಾದಿ, ಬೆಡ್‌ಸಿಟ್‌, ಹೊದಿಕೆ ಸೇರಿದಂತೆ ಚಿಕಿತ್ಸೆಗೆ ಅಗತ್ಯವಿರುವ ಔಷಧ ಹಾಗೂ ವೈದ್ಯಕೀಯ ಉಪಕರಣಗಳನ್ನು ಪೂರೈಸಲಾಗುವುದು ಎಂದರು. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಕಲಬುರ್ಗಿ ಜಿಲ್ಲೆಯು ಸಹ ಹೆಚ್ಚು ಸೋಂಕಿತರನ್ನು ಹೊಂದುತ್ತಿದ್ದು, ಜೇವರ್ಗಿ ತಾಲೂಕಿನಲ್ಲಿ ಈ ಸೋಂಕಿನಿಂದ 7 ಜನ ಮೃತಪಟ್ಟಿದ್ದಾರೆ. ಕೋವಿಡ ನಿಯಂತ್ರಣಕ್ಕೆ ತರಲು ಜನರ ಸಹಕಾರವು ಅಷ್ಟೆ ಮುಖ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮುಖಗವಸು ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಸತತ ಎರಡು ತಿಂಗಳು ಧರ್ಮಸಿಂಗ್‌ ಫೌಂಡೇಶನ್‌ ವತಿಯಿಂದ ಅಲೆಮಾರಿ, ನಿರ್ಗತಿಕ ಹಾಗೂ ಬಡ ಕುಟುಂಬಗಳಿಗೆ ಆಹಾರದ ಕಿಟ್‌, ಲಕ್ಷಾಂತರ ಮಾಸ್ಕ್, ಸ್ಯಾನಿಟೈಸರ್‌ ವಿತರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಸಿದರಾಯ ಭೋಸಗಿ, ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ದು ಪಾಟೀಲ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲ ಕುಮಾರ ಜವಳಗಿ, ಜಿಪಂ ಮಾಜಿ ಸದಸ್ಯ ಕಾಸಿಂ ಪಟೇಲ ಮುದಬಾಳ, ಮುಖಂಡರಾದ ಮುನ್ನಾ ಪಟೇಲ ಯಾಳವಾರ, ಗೌಡಪ್ಪಗೌಡ ಆಂದೋಲಾ, ಪ್ರಭಾಕರ ಅರಳಗುಂಡಗಿ, ತಾಪಂ ಮಾಜಿ ಅಧ್ಯಕ್ಷ ಅಮೀರ ಹಮ್ಜಾ ಇಜೇರಿ, ನಾಸೀರ ಖಾನ ನಾಡಗೌಡ, ಬಹಾದ್ದೂರ ರಾಠೊಡ, ತುಳಜಾ ರಾಮ ರಾಠೊಡ, ಸುನೀಲ ಹಳ್ಳಿ, ರಿಯಾಜ್‌ಪಟೇಲ, ಮರೆಪ್ಪ ಸರಡಗಿ, ಸುರೇಶ ಬಿರಾದಾರ, ಸಲಿಂ ಕಣ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next