Advertisement

ಏಡ್ಸ್‌ ಪತ್ತೆ ಪರೀಕ್ಷೆಗೆ ಕೋವಿಡ್ ಬ್ರೇಕ್‌

12:54 PM Dec 01, 2020 | Suhan S |

ಬೆಂಗಳೂರು: ಜಾಗತಿಕ ಮಹಾಮಾರಿ ಕೋವಿಡ್‌ -19 ಮಹಾಮಾರಿ ಏಡ್ಸ್‌ ಪರೀಕ್ಷೆಗೆ ಬ್ರೇಕ್‌ ಹಾಕಿದೆ. ಇದರಿಂದ ಏಡ್ಸ್‌ ಪತ್ತೆ ಪರೀಕ್ಷೆ ಪ್ರಮಾಣ ಅರ್ಧಕ್ಕರ್ಧ ಕುಸಿದಿದ್ದು, ಇದೇ ಸ್ಥಿತಿ ಮುಂದುವರಿದರೆ ರೋಗಿಗಳ ಆರೋಗ್ಯದಲ್ಲಿ ಭಾರೀ ವ್ಯತ್ಯಯವಾಗಿ ಜೀವಿತಾವಧಿ ಕಡಿಮೆಯಾಗುವ ಸಾಧ್ಯತೆಗಳಿವೆ.

Advertisement

ರಾಜ್ಯದಲ್ಲಿ ಕಳೆದ 3 ವರ್ಷ ಗಳಿಂದ ವಾರ್ಷಿಕ ಸರಾಸರಿ 24 ಲಕ್ಷ ಮಂದಿಯನ್ನು (ಗರ್ಭಿಣಿಯರನ್ನುಹೊರತು ಪಡಿಸಿ) ಏಡ್ಸ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲೂ 2019-20ನೇ ಸಾಲಿನಲ್ಲಿ 25.8 ಲಕ್ಷ ಪರೀಕ್ಷೆ ನಡೆಸಲಾಗಿದ್ದು, ಸರಾಸರಿ ಪ್ರತಿ ತಿಂಗಳು 2 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆಗೊಳಗಾಗಿದ್ದರು. ಈ ಬಾರಿ ಕೋವಿಡ್‌ ಹಿನ್ನೆಲೆ ಲಾಕ್‌ಡೌನ್‌, ಬಳಿಕ ನಿರ್ಬಂಧ,ಪರೀಕ್ಷಾ ಕೇಂದ್ರಗಳ ಕಾರ್ಯಾಚರಣೆ ವ್ಯತ್ಯಯ, ಸಿಬ್ಬಂದಿ ಕೊರತೆ, ಪರೀಕ್ಷೆಗೆ ಜನರ ಹಿಂದೇಟು ಸೇರಿ ಇನ್ನಿತರ ಕಾರಣಗಳಿಂದ ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ ನಿಂದ ಅಕ್ಟೋಬರ್‌ವರೆಗೂ 6.9ಲಕ್ಷ ಪರೀಕ್ಷೆ ಮಾತ್ರ ನಡೆದಿದೆ. ಅಂದರೆ, ಸರಾಸರಿ ಪ್ರತಿ ತಿಂಗಳು ಲಕ್ಷಕ್ಕೂ ಕಡಿಮೆ ಮಂದಿ ಪರೀಕ್ಷೆಗೊಳಗಾಗಿದ್ದಾರೆ. ಈ ಮೂಲಕ ಪರೀಕ್ಷೆ ಪ್ರಮಾಣ ಅರ್ಧಕ್ಕರ್ಧ ಕುಸಿತಕಂಡಿದೆ.

ಇನ್ನು ಈ ರೋಗಿಗಳಿಗೆ ಉಚಿತ ಔಷಧ ನೀಡುವ ಸುರಕ್ಷಾಕ್ಲಿನಿಕ್‌ಗಳಲ್ಲಿ ಈ ಸಾಲಿನ ನಿಗದಿತ ಔಷಧಗಳಲ್ಲಿ ಶೇ.18 ರಷ್ಟನ್ನು ಮಾತ್ರ ವಿತರಿಸಲಾಗಿದೆ. ಬಹುತೇಕ ಏಡ್ಸ್‌ ಪರೀಕ್ಷಾ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳಲ್ಲಿವೆ. ಕೋವಿಡ್‌ ಹಿನ್ನೆಲೆ ಮಾರ್ಚ್‌ನಿಂದಲೇ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆ ಆದ್ಯತೆ ನೀಡಲಾಗಿತ್ತು. ಅದರಲ್ಲೂ ಜಿಲ್ಲಾಸ್ಪತ್ರೆಗಳನ್ನು ಸಂಪೂರ್ಣ ಸೋಂಕಿತರಿಗೆ ಮೀಸಲಿಡಲಾಗಿತ್ತು. ಇದರಿಂದಾಗಿ ಪರೀಕ್ಷಾ ಕೇಂದ್ರಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿತ್ತು. ಆನಂತರ ಕೋವಿಡ್‌ ವಾರ್ಡ್‌ ಗಳಿವೆ ಎಂಬ ಕಾರಣಕ್ಕೆ ಸಾರ್ವಜನಿಕರೂ ಸರ್ಕಾರಿ ಆಸ್ಪತ್ರೆಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ, ರೋಗ ಲಕ್ಷಣ ಇರುವವರನ್ನು ಪತ್ತೆ ಮಾಡಿ ಪರೀಕ್ಷೆಗೆ ಸೂಚಿಸಲು ಸಾಧ್ಯವಾಗಿಲ್ಲ. ಏಪ್ರಿಲ್‌, ಮೇ, ಜೂನ್‌ನಲ್ಲಿ ನಿತ್ಯ ಬೆರಳೆಣಿಕೆ ಮಾತ್ರ ಏಡ್ಸ್‌ ಪರೀಕ್ಷೆ ನಡೆದಿವೆ ಎಂದು ಜಿಲ್ಲಾಸ್ಪತ್ರೆಗಳ ವೈದ್ಯರು ತಿಳಿಸುತ್ತಾರೆ.

ಇದನ್ನೂ ಓದಿ :ತಳ್ಳಾಟದಿಂದ ಪುರಸಭೆ ಸದಸ್ಯೆಗೆ ಗರ್ಭಪಾತ: ಏಳು ವರ್ಷದ ಬಳಿಕ ಗರ್ಭಿಣಿಯಾಗಿದ್ದ ಸದಸ್ಯೆ

ಕೋವಿಡ್‌ ಕಾರ್ಯಾಚರಣೆಗೆ ಸಿಬ್ಬಂದಿ: ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆಯಲ್ಲಿ ರಾಜ್ಯಾದ್ಯಂತ 2,000ಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಯನ್ನು ಕೋವಿಡ್‌ ಸರ್ವೇಕ್ಷಣಾ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ಜತೆಗೆ ಜಾಗೃತಿ ಸಭೆ- ಕಾರ್ಯ ಕ್ರಮ, ಜಾಥಾಗಳಿಗೂ ಹಿನ್ನೆಡೆಯಾಗಿದೆ. ಈ ಅಂಶಗಳೂ ಪರೀಕ್ಷೆ ಇಳಿಕೆಗೆ ಕಾರಣ ಎಂದು ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ತಡವಾದರೆ ಸೋಂಕು ಉಲ್ಬಣ :

ಏಡ್ಸ್‌ ಲಕ್ಷಣ ಕಂಡಕೂಡಲೇ ಶೀಘ್ರ ಪರೀಕ್ಷೆಗೊಳಗಾಗಬೇಕು. ಇದರಿಂದ ಸೋಂಕುತಗುಲಿದ್ದರೆ ತ್ವರಿತವಾಗಿ ತಿಳಿಯುತ್ತದೆ. ಆಗ ಚಿಕಿತ್ಸೆ, ಪಥ್ಯೆಗಳಿಂದ ವೈರಸ್‌ ದೇಹದಲ್ಲಿ ಉಲ್ಬಣವಾಗುವುದನ್ನು ತಪ್ಪಿಸಿದರೆ ರೋಗಿಯ ಜೀವಿತಾವಧಿ ಹೆಚ್ಚುತ್ತದೆ. ತಡವಾಗಿ ಸೋಂಕು ಪತ್ತೆಯಾಗುವುದರಿಂದ ಸಂಪರ್ಕಿರ ಸಂಖ್ಯೆಹೆಚ್ಚಾಗುತ್ತದೆ. ಜತೆಗೆ ಇತರೆಕಾಯಿಲೆಗಳ ಜತೆಗೆ ಸೇರಿ ಮನುಷ್ಯನನ್ನುಕುಗ್ಗಿಸುತ್ತದೆ. ಇದರಿಂದ ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚಳವಾಗಬಹುದು ಎಂದು ತಜ್ಞರು ತಿಳಿಸುತ್ತಾರೆ.

ಕೋವಿಡ್‌ದಿಂದ ಪರೀಕ್ಷೆಗೆ ಹಿಂದೇಟು :

ಈ ಹಿಂದಿನ ವರ್ಷಗಳಲ್ಲಿ ನಿಗದಿತ ಗುರಿಗಿಂತ ಹೆಚ್ಚು ಪರೀಕ್ಷೆ ನಡೆಸಿದ್ದೇವೆ. ಪ್ರಸಕ್ತ ವರ್ಷ ಸಾಮಾನ್ಯ ಜನರಲ್ಲಿ 26.3 ಲಕ್ಷ ಏಡ್ಸ್‌ ಪರೀಕ್ಷೆ ನಡೆಸುವ ಗುರಿ ಹೊಂದಿದ್ದೆವು.ಕಳೆದ 7 ತಿಂಗಳಲ್ಲಿ ಶೇ.26ರಷ್ಟು ಪರೀಕ್ಷೆ ನಡೆದಿವೆ.ಕೊರೊನಾದಿಂದ ಸಾರ್ವಜನಿಕರೂ ಸ್ವಯಂ ಪ್ರೇತವಾಗಿ ಪರೀಕ್ಷೆಗೊಳಗಾಗಲು ಹಿಂದೇಟು ಹಾಕುತ್ತಿದ್ದಾರೆ. ಬಾಕಿ ಉಳಿದಿರುವ 5 ತಿಂಗಳಲ್ಲಿ ಗುರಿ ತಲುಪುವುದುಕಷ್ಟ ಸಾಧ್ಯ ಎಂದು ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆಯ ಉಪ ನಿರ್ದೇಶಕ ಗೋವಿಂದರಾಜು “ಉದಯವಾಣಿ’ಗೆ ತಿಳಿಸಿದ್ದಾರೆ.

 ರಾಜ್ಯದಲ್ಲಿ ಏಡ್ಸ್‌ ಇಳಿಮುಖ :

ರಾಜ್ಯದಲ್ಲಿವರ್ಷದಿಂದವರ್ಷಕ್ಕೆಏಡ್ಸ್‌ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಹಿಂದಿನ 3 ವರ್ಷಗಳಲ್ಲಿ (2016-19)ಕ್ರಮವಾಗಿ 20860, 19753, 18919 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ, 2019-20ನೇ ಸಾಲಿನಲ್ಲಿ 16,307ಕ್ಕೆ ಮಂದಿಯಲ್ಲಿ ಪತ್ತೆಯಾಗಿದ್ದು, 2612 ಪ್ರಕರಣ ಇಳಿಕೆಯಾಗಿವೆ. ಪಾಸಿಟಿವಿಟಿ ದರ ಶೇ.0.7ರಷ್ಟು ಕಡಿಮೆಯಾಗಿದೆ. ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ 4,995 ಏಡ್ಸ್‌ ಪ್ರಕರಣ ವರದಿಯಾಗಿವೆ.

 

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next