ಮುದ್ದೇಬಿಹಾಳ: ಕೋವಿಡ್ ಮಹಾಮಾರಿ ನಿಯಂತ್ರಣ ಜನರ ಸ್ವಯಂ ಜಾಗೃತಿಯಿಂದ ಮಾತ್ರ ಸಾಧ್ಯ. ಜನರು ಈ ರೋಗವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಎಸ್ ಎಂಎಸ್ (ಸ್ಯಾನಿಟೈಸರ್, ಮಾಸ್ಕ್, ಸೋಶಿಯಲ್ ಡಿಸ್ಟನ್ಸಿಂಗ್) ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಕೆ.ಜಿ. ಚಿಂತಾ ಹೇಳಿದ್ದಾರೆ.
ಇಲ್ಲಿನ ಕೋರ್ಟ್ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಕೋವಿಡ್-19 ಜನ ಆಂದೋಲನ ಕಾರ್ಯಕ್ರಮ, ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು. ಜನರು ಜಾಗೃತರಾಗಲೆಬೇಕು. ಜನರನ್ನು ಜಾಗೃತಗೊಳಿಸಲು ಸ್ವಯಂ ಸೇವಕರಾದಿಯಾಗಿಸರ್ಕಾರಿ ಕರ್ತವ್ಯದಲ್ಲಿರುವ ಎಲ್ಲರೂ ಶ್ರಮಿಸಬೇಕು. ಆಶಾ, ಅಂಗನವಾಡಿ, ಆರೋಗ್ಯ, ಪೊಲೀಸ್ ಇಲಾಖೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿವಿಲ್ ನ್ಯಾಯಾ ಧೀಶರಾದಸುರೇಶ ಸವದಿ ಮಾತನಾಡಿ, ಎಲ್ಲರೂ ಒಟ್ಟುಗೂಡಿ ಮಹಾಮಾರಿ ವಿರುದ್ಧ ಹೋರಾಡಿದರೆ ರೋಗ ನಿಯಂತ್ರಣ ಸುಲಭ ಸಾಧ್ಯ. ಜಾಥಾ ವೇಳೆ ಈ ಕುರಿತು ಜನ ಜಾಗೃತಿ ಮೂಡಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ತಹಶೀಲ್ದಾರ್ ಜಿ.ಎಸ್. ಮಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್. ಕ್ವಾರಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆ ಚೇರ್ಮನ್ ಎಸ್.ಎಸ್. ಹೂಗಾರ ಮಾತನಾಡಿದರು. ಎಪಿಪಿ ಹೀನಾ ಕೌಸರ್, ಅಪರ ಸರ್ಕಾರಿ ವಕೀಲ ಎಂ.ಆರ್. ಪಾಟೀಲ, ಪ್ಯಾನಲ್ ವಕೀಲರಾದ ಎನ್.ಬಿ. ಮುದ್ನಾಳ, ರೇಣುಕಾ ಪಾಟೀಲ, ವಿ.ಜಿ. ಮದರಕಲ್, ಎಸ್.ಎಸ್. ಪಾಟೀಲ, ಎಸ್.ಬಿ. ನಾರಿ, ಎನ್.ಜಿ. ಕುಲಕರ್ಣಿ, ಬಿ.ಎಂ. ಮುಂದಿನಮನಿ, ಎಂ.ಆರ್. ಮುಜಾವರ, ಸಿಡಿಪಿಐ ಸಾವಿತ್ರಿ ಗುಗ್ಗರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ಅನುಸೂಯಾ ತೇರದಾಳ, ಎಂ.ಎಸ್. ಗೌಡರ, ರಮೇಶ ಮಾಡಬಾಳ, ಮಹಾಂತೇಶ ಕಟ್ಟಿಮನಿ, ಭಾರತಿ ಮಾಡಗಿ, ವಿನೋದ ಜಿಂಗಾಡೆ ಪಾಲ್ಗೊಂಡಿದ್ದರು.
ನ್ಯಾ| ಚಿಂತಾ ಸಾಮೂಹಿಕವಾಗಿ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದ ನಂತರ ಸರ್ವರನ್ನೂ 5 ತಂಡಗಳಾಗಿ ವಿಭಜಿಸಿ ಇಂದಿರಾ ವೃತ್ತದಿಂದ ಮಹಿಬೂಬನಗರ, ಬಸವೇಶ್ವರ ವೃತ್ತದಿಂದ ಎಂಜಿವಿಸಿ ಕಾಲೇಜು, ಇಂದಿರಾ ವೃತ್ತ, ಜ್ಞಾನಭಾರತಿ ಕಾಲೇಜು ಹಾಗೂ ಹುಡ್ಕೊದಲ್ಲಿಯ ಅಭ್ಯುದಯ ಕಾಲೇಜುವರೆಗೆ ಜಾಥಾ ನಡೆಸಲಾಯಿತು. ಪ್ರತಿಯೊಬ್ಬರೂ ಕೋವಿಡ್ ಜನಜಾಗೃತಿಯ ಬ್ಯಾನರ್, ಬಂಟಿಂಗ್ ಹಿಡಿದು ಸಂಚರಿಸಿದರು. ಪುರಸಭೆಯ ವಾಹನಗಳಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಸಂದೇಶ ಬಿತ್ತರಿಸಲಾಯಿತು.
ಸಿಂದಗಿ: ಭಾರತದಲ್ಲಿ ಕೋವಿಡ್-19 ವಿರುದ್ಧದ ಹೋರಾಟ ಜನಸ್ನೇಹಿಯಾಗಿದ್ದು ಕೋವಿಡ್ ವಿರುದ್ಧ ಹೋರಾಡಲು ಎಲ್ಲರೂ ಜತೆಗೂಡಿ ಸಂಘಟಿತರಾಗೋಣ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾ ಧೀಶರಾದ ಎಚ್.ಕೆ. ಉಮೇಶ ಹೇಳಿದರು.
ಶನಿವಾರ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಜನ ಆಂದೋಲನ ಕೋವಿಡ್-19 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ವಾರಿಯರ್‌ಗಳಿಂದ ಕೋವಿಡ್ ವಿರುದ್ಧದ ಹೋರಾಟಕ್ಕೆ ಬಲ ಸಿಕ್ಕಿದೆ. ಜನರಲ್ಲಿ ಜಾಗೃತಿ ಮುಡಿಸೋಣ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾ ಧೀಶ ಎ.ಈರಣ್ಣ, ಸಿವಿಲ್ ನ್ಯಾಯಾ ಧೀಶ ಆಶಪ್ಪ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಾಮಲಿಂಗಪ್ಪ ಮಾತನಾಡಿ, ಕೋವಿಡ್-19 ವೈರಸ್‌ನಿಂದ ಜನರನ್ನು ರಕ್ಷಿಸಲು ಜಾಗೃತಿ ಮುಡಿಸುವ ಕಾರ್ಯ ಮಾಡೋಣ ಎಂದರು.
ಕ್ಷೇತ್ರ ಸಮನ್ವಯಾಧಿ ಕಾರಿ ಸಂತೋಷಕುಮಾರ ಬೀಳಗಿ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ದೊಡಮನಿ, ಬಿಆರ್‌ಪಿ ಬಿ.ಎಸ್. ಟಕ್ಕಳಕಿ, ಸಿಆರ್ ಸಿಗಳಾದ ಎಸ್.ಬಿ. ಕರಾಬಿ, ಎಸ್.ಎಂ. ಕುಡಗಿ, ಬಿ.ಆರ್. ಕಟೆ, ಆರ್.ಎಸ್. ಬಿರಾದಾರ, ಎ.ಎ. ಕುರಿ, ಎಸೈ ಸಂಗಮೇಶ ಹೊಸಮನಿ, ಅಶೋಕ ದಿಂಡವಾರ, ಆಶಾ ಕಾರ್ಯಕರ್ತೆಯರು ಇದ್ದರು.