ಕಲಬುರಗಿ: ಜಿಲ್ಲೆಯಲ್ಲಿ ಬುಧವಾರ ಮತ್ತೆ ಮಹಾ ಸ್ಫೋಟ ಸಂಭವಿಸಿದೆ. ರಾಜ್ಯದಲ್ಲೇ ಅಧಿಕ 105 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 510ಕ್ಕೆ ಏರಿಕೆಯಾಗಿದ್ದು, ರಾಜ್ಯದ ಕೋವಿಡ್ ಸೋಂಕಿತ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ ಪ್ರಥಮ ಸ್ಥಾನಕ್ಕೆ ಏರಿದೆ.
ಜಿಲ್ಲೆಗೆ ಮಹಾರಾಷ್ಟ್ರದಿಂದ ಮರಳಿ ಬಂದವರಲ್ಲೇ ಮಹಾಮಾರಿ ಸೋಂಕು ಕಾಣಿಸಿಕೊಂಡಿದೆ. 105 ಜನ ಸೋಂಕಿತರಲ್ಲಿ 16 ವರ್ಷದೊಳಗಿನ 27 ಮಕ್ಕಳಿಗೆ ಕೋವಿಡ್ ಪತ್ತೆಯಾಗಿದೆ. 27 ಜನ ಸೋಂಕಿತ ಮಕ್ಕಳಲ್ಲಿ 17 ಗಂಡು ಮಕ್ಕಳು ಮತ್ತು ಹಾಗೂ 10 ಹೆಣ್ಣು ಮಕ್ಕಳು ಸೇರಿದ್ದಾರೆ.
ಒಂದು ವರ್ಷ, ಎರಡು ವರ್ಷ, ಮೂರು ವರ್ಷದ ಮಕ್ಕಳೂ ಸೋಂಕಿಗೆ ತುತ್ತಾಗಿದ್ದು, ಆತಂಕಕಾರಿಯಾಗಿದೆ. ಉಳಿದಂತೆ 78 ಜನರು ವಯಸ್ಕರಾಗಿದ್ದಾರೆ. ಇವರೆಲ್ಲರೂ ಕ್ವಾರಂಟೈನ್ ಕೇಂದ್ರದಿಂದ ಮನೆಗೆ ತೆರಳಿದವರೇ ಆಗಿದ್ದಾರೆ. ಮನೆಗೆ ಹೋದ ಮೂರು ದಿನಗಳ ನಂತರ ಇದೀಗ ಕೋವಿಡ್ ಪಾಸಿಟಿವ್ ಎಂದು ಪ್ರಯೋಗಾಲಯದ ವರದಿ ಬಂದಿದೆ.
ಬುಧವಾರ ಪತ್ತೆಯಾದ 105 ಸೋಂಕು ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 510ಕ್ಕೆ ಏರಿಕೆಯಾಗಿದೆ. ಕಲಬುರಗಿ ನಂತರ ಉಡುಪಿ (472), ಬೆಂಗಳೂರು (417) ಜಿಲ್ಲೆಗಳು ಇವೆ.