Advertisement

ಜಾಲತಾಣದಲ್ಲಿ ಕೋವಿಡ್‌ ಲೇಖನಗಳ ಮಹಾಪೂರ

01:02 PM May 17, 2020 | sudhir |

ಮಣಿಪಾಲ : ಕೋವಿಡ್‌ ವೈರಸ್‌ ಉಳಿದೆಲ್ಲ ಕ್ಷೇತ್ರಗಳನ್ನು ಲಾಕ್‌ಡೌನ್‌ ಮಾಡಿದರೂ ವೈದ್ಯಕೀಯ ಕ್ಷೇತ್ರವನ್ನು ಮಾತ್ರ ಬ್ಯುಸಿಯಾಗಿರಿಸಿದೆ. ಕೋವಿಡ್‌ಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗಳು ಮಾತ್ರವಲ್ಲದೆ ಲಸಿಕೆ ಮತ್ತು ಔಷಧಿ ಹುಡುಕುವ ಸಂಶೋಧಕರು ಕೂಡ ಕಳೆದ ಮೂರು ತಿಂಗಳಿಂದ ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

Advertisement

ಕೋವಿಡ್‌ ಕುರಿತಾಗಿ ಅಸಂಖ್ಯ ಅಧ್ಯಯನಗಳು ನಡೆಯುತ್ತಿವೆ. ಇದರಲ್ಲಿ ಅಧಿಕೃಕ ಮತ್ತು ಅನಧಿಕೃತ ಅಧ್ಯಯನಗಳು ಸೇರಿವೆ. ಈ ಪೈಕಿ ಕೆಲವು ಅಧ್ಯಯನಗಳ ವರದಿಗಳು ದಾರಿ ತಪ್ಪಿಸುವಂತಿವೆ ಎನ್ನುವುದು ವಿಷಾದಕರ.

ಈ ನಡುವೆ ಕೋವಿಡ್‌ಗೆ ರಾಮಬಾಣ ಎಂದು ಹೇಳಿಕೊಳ್ಳುವ ನಕಲಿ ಔಷಧಿಗಳ ಹಾವಳಿಯೂ ಹೆಚ್ಚಾಗಿದೆ. ಪವಾಡಸದೃಶವಾಗಿ ನಿಮ್ಮ ಕಾಯಿಲೆಯನ್ನು ಗುಣಪಡಿಸುತ್ತೇವೆ ಎಂದು ಹೇಳಿಕೊಳ್ಳುವ ಈ ಔಷಧಿಗಳಿಗೆ ಯಾವುದೇ ಅಧಿಕೃತ ಮಾನ್ಯತೆ ಇಲ್ಲ.

ಯಾವುದೇ ಅಧ್ಯಯನಕ್ಕೊಳಪಡದ ಈ ಮಾದರಿಯ ಔಷಧಿಗಳು ಪ್ರಾಣಕ್ಕೆ ಎರವಾಗಬಹುದು ಎಂದು ಎಚ್ಚರಿಸುತ್ತಾರೆ ಕ್ಯಾಲಿಫೋರ್ನಿಯ ವಿವಿಯ ಮೆಡಿಸಿನ್‌ ವಿಭಾಗದ ಉಪನ್ಯಾಸಕಿ ಡಾ| ರೀಟಾ ರೆಡ್‌ಬರ್ಗ್‌.

ಒಂದು ವೈರಸ್‌ನ ಮೇಲೆ ಇಷ್ಟೆಲ್ಲ ಅಧ್ಯಯನಗಳು, ಸಂಶೋಧನೆಗಳು ನಡೆಯುತ್ತಿರುವುದು ಇದೇ ಮೊದಲು. ಹೆಚ್ಚಿನೆಲ್ಲ ರಾಷ್ಟ್ರಗಳು ಒಂದಲ್ಲ ಒಂದು ರೀತಿಯ ಸಂಶೋಧನೆಯಲ್ಲಿ ತೊಡಗಿವೆ ಎಂದೆನ್ನುತ್ತಾರೆ ರೆಡ್‌ಬರ್ಗ್‌.

Advertisement

ಎಲ್ಲರಿಗೂ ತ್ವರಿತವಾಗಿ ಫ‌ಲಿತಾಂಶ ಸಿಗಬೇಕೆಂಬ ಕಾತರವಿರುವುದು ಸಹಜ. ಆದರೆ ಈ ಫ‌ಲಿತಾಂಶ ವಿಶ್ವಾಸಾರ್ಹವೂ ಆಗಿರಬೇಕು ಎನ್ನುವುದು ರೆಡ್‌ಬರ್ಗ್‌ ಅಭಿಪ್ರಾಯ.

ವೈದ್ಯಕೀಯ ನಿಯತಕಾಲಿಕಗಳಲ್ಲಿ ಮಾತ್ರವಲ್ಲದೆ ವೆಬ್‌ಸೈಟ್‌ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲೂ ಕೋವಿಡ್‌ ಕುರಿತಾದ ಅನೇಕ ಸಂಶೋಧನಾ ವರದಿಗಳು ಲಭ್ಯವಿವೆ. ಚಿಜಿಟ್ಕxಜಿvಮತ್ತು ಞಛಿಛRxಜಿv ತಾಣಗಳಲ್ಲಿ 3,300ಕ್ಕೂ ಹೆಚ್ಚು ಲೇಖನಗಳಿವೆ. ಜನವರಿಯಿಂದೀಚೆಗೆ ಸರಾಸರಿ ದಿನಕ್ಕೆ 100ರಂತೆ ಹೊಸ ಅಧ್ಯಯನ ವರದಿಗಳು ಮತ್ತು ಸಂಶೋಧನಾ ಲೇಖನಗಳು ಸೇರ್ಪಡೆಯಾಗುತ್ತಿವೆ. ಜನವರಿಯಲ್ಲಿ 224 ಲೇಖನಗಳು ಸೇರ್ಪಡೆಯಾದರೆ ಫೆಬ್ರವರಿಯಲ್ಲಿ ಇದು ಇಮ್ಮಡಿಯಾಯಿತು. ಮೇ ತಿಂಗಳಲ್ಲಿ ಸುಮಾರು 2,200 ಲೇಖನಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ.

ವಿಜ್ಞಾನಿಗಳಲ್ಲಿ ಕೋವಿಡ್‌ಗೆ ಸಂಬಂಧಪಟ್ಟ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳುವ ಮತ್ತು ಹಂಚಿಕೊಳ್ಳುವ ಅದಮ್ಯ ಕುತೂಹಲವಿದೆ. ಡಿಜಿಟಲ್‌ ಮಾಧ್ಯಮ ಅವರಿಗೆ ಈ ವಿಚಾರದಲ್ಲಿ ಅತ್ಯುತ್ತಮ ವೇದಿಕೆಯನ್ನು ಒದಗಿಸಿದೆ.

ಹಾಗೆಂದು ಎಲ್ಲ ಲೇಖನಗಳನ್ನು ವೆಬ್‌ ತಾಣಗಳಿಗೆ ಹಾಕುವುದಿಲ್ಲ. ಪರಿಣತರ ಪರಿಶೀಲನೆಯಲ್ಲಿ ತೇರ್ಗಡೆಯಾದ ಲೇಖನಗಳಷ್ಟೇ ಬರುತ್ತವೆ. ಎಲ್ಲ ಲೇಖನಗಳನ್ನು ಸೇರಿಸಿದರೆ ಲೇಖನಗಳ ಪ್ರವಾಹವೇ ಹರಿದು ಬರಬಹುದು.

ಜನರಿಗೂ ಕೋವಿಡ್‌ಗೆ ಸಂಬಂಧಪಟ್ಟ ಬೆಳವಣಿಗೆಗಳನ್ನು ಮತ್ತು ದತ್ತಾಂಶಗಳನ್ನು ತಿಳಿದುಕೊಳ್ಳುವ ಕುತೂಹಲವಿದೆ. ಸಾಂಪ್ರದಾಯಿಕ ಪತ್ರಿಕೋದ್ಯಮ ಒದಗಿಸುವ ಮಹಿತಿಯ ಜತೆಗೆ ವೈದ್ಯಕೀಯ ಕ್ಷೇತ್ರದ ಪರಿಣತರ ಮಾಹಿತಿಯನ್ನೂ ಜನರು ಜಾಲತಾಣಗಳಲ್ಲಿ ಹುಡುಕುತ್ತಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next