Advertisement
ಕಳೆದ ಶತಮಾನದ ಆರಂಭದಲ್ಲಿ ಕಂಗೆಡಿಸಿದ ಸಾಮೂಹಿಕ ಸೋಂಕೆಂದರೆ ಪ್ಲೇಗ್, ಸ್ಪಾನಿಶ್ ಫ್ಲೂ. ಈಗ ಕೊರೊನಾ ಸೋಂಕು. ಆಗಿನ ಮತ್ತು ಈಗಿನ ವೈರಸ್, ಕಳ್ಳರು, ನಿಸ್ವಾರ್ಥಿಗಳು, ಸೋಗಲಾಡಿಗಳ ನಡುವೆ ತುಲನೆ ಮಾಡಿದರೆ ವೈರಸ್ ಮತ್ತು ಮನುಷ್ಯರ ಕಾರ್ಯವೈಖರಿ ಒಂದೇ ತೆರನಾಗಿ ಕಾಣುತ್ತದೆ.
Related Articles
Advertisement
ಆರಂಭದಲ್ಲಿ ಇನ್ಯಾಕ್ಯುಲೇಶನ್ (ವ್ಯಾಕ್ಸಿನ್) ಇದ್ದಿರಲಿಲ್ಲ. ನೂರು ಪ್ಲೇಗ್‌ಗೂ ಜಗ್ಗುವುದಿಲ್ಲ ಎಂದಿದ್ದ ರಂಗಣ್ಣ, ಕೇಶವ, ಸಣ್ಣಪ್ಪ ಇನ್ಯಾಕ್ಯುಲೇಶನ್ ಮಾಡಿಸಿಕೊಳ್ಳಲು ಮುಂದಾಗಿದ್ದರು. “ಒಂದು ತೋಳನ್ನು ಪ್ಲೇಗ್‌ಗೇ ಬಿಟ್ಟಿದ್ದೇನೆ’ ಎಂದು ರಂಗಣ್ಣ ಹೇಳುತ್ತಿದ್ದ.ಸಾವಿನ ಸರಮಾಲೆ ಇದ್ದರೂ ಎಲ್ಲ ಜಾತಿಯವರ ಹೆಣಗಳನ್ನು ಎಲ್ಲರೂ ಹೊರುತ್ತಿದ್ದರು. “ಇದಾರು ಒಂದು ಪುಣ್ಯದ ಕೆಲಸ’ ಎಂದು ನರಸೇಗೌಡ ಶ್ಮಶಾನಕ್ಕೆ ಸೌದೆ ಹೇರಿದ್ದಕ್ಕೆ ಬಾಡಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಕೆಂಪ ಹಗಲು ರಾತ್ರಿ ಸೌದೆ ಸೀಳಿ ಚಿತೆ ಸಿದ್ಧ ಮಾಡುತ್ತಿದ್ದರು. ಒಬ್ಬರನ್ನೊಬ್ಬರು ವಿಚಾರಿಸುತ್ತಿದ್ದರು. ಶಾನುಭೋಗರು ದೊಣ್ಣೆ ಊರಿಕೊಂಡು ಪ್ರತೀ ಮನೆಯನ್ನು ವಿಚಾರಿ ಸುತ್ತಿದ್ದರು. ಸಾವಿನ ಭಯ ಮೀರಿ ರೋಗಿಗಳಿಗೆ ಉಪಚಾರ ಮಾಡುತ್ತಿದ್ದ ಧೈರ್ಯಶಾಲಿಗಳಿದ್ದರು. ಪ್ರಸಿದ್ಧ ವೈದ್ಯ, ಸಂಗೀತ ಕಲಾವಿದರಾಗಿದ್ದ ಪಂಡಿತ್ ತಾರಾನಾಥರ ತಾಯಿ ರಾಜೀವಿ ಬಾಯಿಯವರು ಮಂಗಳೂರಿನಲ್ಲಿ ಪ್ಲೇಗ್ ಬಂದ ಸಂದರ್ಭ ತಮಗುಪಕಾರ ಮಾಡಿದ್ದವನಿಗೆ ಪ್ಲೇಗ್ ಬಂದಾಗ ಗೊತ್ತಿದ್ದೂ ಅಗತ್ಯ ಕರ್ತವ್ಯವೆಂಬಂತೆ ಸೇವೆ ಮಾಡಿ ಇಹಲೋಕ ತ್ಯಜಿಸಿದ್ದರು. ಶತಮಾನದ ಬಳಿಕ ಈಗ ಕೊರೊನಾದ ಎರಡನೆಯ ವರ್ಷದಲ್ಲಿದ್ದೇವೆ. ಕೆಲವರು “ಆರೋಗ್ಯ ಇಲಾಖೆಯಿಂದ ಅಕ್ರಮ ದಂಧೆ ನಡೆಯುತ್ತಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಎರಡನೆಯ ವರ್ಷ ಅವರೇ ಆ್ಯಂಬುಲೆನ್ಸ್ ಸೇವೆ, ವ್ಯಾಕ್ಸಿನ್ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಪ್ರಾಯಃ ಒಂದೇ ವರ್ಷದ ಅಂತರದಲ್ಲಿ ಹಾಕಿದ ಅಂತರ್ಲಾಗವನ್ನು ಯಾರೂ ಪ್ರಶ್ನಿಸಿರಲಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ವಾಟ್ಸ್ ಆ್ಯಪ್‌ಗೆ ಬಂದ ಕೊರೊನಾ ವಿರೋಧಿ ಸುದ್ದಿಗಳನ್ನೆಲ್ಲ ಫಾರ್ವರ್ಡ್ ಮಾಡುವ ತಜ್ಞರು, “ಇದೆಲ್ಲ ಬರೀ ಬೊಗಳೆ’ ಎಂದು ಟೀಕಿಸುತ್ತಿದ್ದವರು ವ್ಯಾಕ್ಸಿನ್ ತೆಗೆದು ಕೊಳ್ಳುವಾಗ ಮುಂಚೂಣಿಯಲ್ಲಿದ್ದರು. ಕಳ್ಳರ ಬಗೆಗೆ ಹೇಳುವುದೇ ಬೇಡ. ರೂಪಾಂತರಿಗ ಳಾಗಿ ಹೈಟೆಕ್‌ತನವನ್ನು ಮೈಗೂಡಿಸಿಕೊಂಡಿದ್ದಾರೆ. ಆಗ ಹಂಡೆ ಕಳ್ಳರಿದ್ದರೆ, ಈಗ ಬೆಡ್ ಕಳ್ಳರು, ವ್ಯಾಕ್ಸಿನ್ ಕಳ್ಳರು, ಆಕ್ಸಿಜನ್ ಕಳ್ಳರಾಗಿ ಬೆಳವಣಿಗೆ ಹೊಂದಿದರು. ಈ ಆಧುನಿಕ ಕಳ್ಳರ ಬಗೆಗೆ ಒಂದೆರಡು ದಿನ ಸುದ್ದಿಯೋ ಸುದ್ದಿ. ಮತ್ತೆ ಆ ಕಳ್ಳರೆಲ್ಲ ಏನಾದರೆಂದು ಯಾರಿಗೂ ಗೊತ್ತಿಲ್ಲ. ಈ ಎರಡು ವರ್ಷಗಳಲ್ಲಿ ವೈರಸ್ ಅಂತೂ ನಾನಾ ರೂಪಾಂತರಗಳನ್ನು ತಾಳಿ ಬಲಿಷ್ಠಗೊಂಡದ್ದು ವೈಜ್ಞಾನಿಕವಾಗಿ ಸಾಬೀತಾಗಿದೆ. ವೈರಸ್ ಹುಟ್ಟಿ ಸತ್ತು ಮತ್ತೆ ಬಲಿಷ್ಠಗೊಂಡದ್ದು ವೈಜ್ಞಾನಿಕವಾಗಿ ಸಾಬೀತಾದರೆ ಹಂಡೆಕಳ್ಳರು ಬೆಡ್-ವ್ಯಾಕ್ಸಿನ್- ಆಕ್ಸಿಜನ್ ಕಳ್ಳರಾಗಿ ರೂಪಾಂತರಗೊಂಡದ್ದು ಒಮ್ಮೆ ಸತ್ತು ಪುನಃ ಹುಟ್ಟಿ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು ಅಸಾಧ್ಯವೋ ಏನೋ? ಆರಂಭದಲ್ಲಿ ಇಲಾಖೆಯನ್ನು ಜರೆಯುತ್ತಿದ್ದ ಮಹಾಶಯರು ರೂಪಾಂತರಗೊಂಡು ಅದೇ ಇಲಾಖೆಯ ಕಾರ್ಯಗಳಿಗೆ ಕೈಜೋಡಿಸಿದ್ದು, ರೋಗವೇ ಸುಳ್ಳೆಂದವರು ವ್ಯಾಕ್ಸಿನ್ ಪಡೆಯಲು ಮುಂದಾದದ್ದು ಒಮ್ಮೆ ಸತ್ತು, ಮತ್ತೆ ಹುಟ್ಟಿಯಲ್ಲ. ಒಂದೇ ಜನ್ಮದಲ್ಲಿ ಅದರಲ್ಲೂ ಕೇವಲ ಒಂದೆರಡು ವರ್ಷಗಳ ರೂಪಾಂತರದಲ್ಲಿ. ಆಗಲೂ ಈಗಲೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದ ಅನೇಕರಿದ್ದಾರೆ. ಒಟ್ಟಾರೆ ವೈರಸ್‌ಗೆ ಮತ್ತೆ ಮತ್ತೆ ಜನ್ಮವಿರುವುದು (ಪುನರ್ಜನ್ಮ) ಹೌದಾದರೆ ಮನುಷ್ಯರಿಗೂ ಅನ್ವಯ ಏಕೆ ಆಗಕೂಡದು? ಆಗಿನ ಹಂಡೆಕಳ್ಳರೇ ಪುನರ್ಜನ್ಮದಲ್ಲಿ ಬೆಡ್-ವ್ಯಾಕ್ಸಿನ್- ಆಕ್ಸಿಜನ್ ಕಳ್ಳರಾದರೆ? ಆಗ ಎದೆಗುಂದದೆ ಸೇವೆ ಸಲ್ಲಿಸಿದವರೇ ಈಗ ವೈದ್ಯರು, ಆಶಾ ಕಾರ್ಯಕರ್ತರಾದರೆ? – ಮಟಪಾಡಿ ಕುಮಾರಸ್ವಾಮಿ